ವಿಷ್ಣುವರ್ಧನ್‌ ಸಮಾಧಿ ಧ್ವಂಸ | ಅಭಿಮಾನ್ ಸ್ಟುಡಿಯೋ ಭೂಮಿ ಸ್ವಾಧೀನ‌ಕ್ಕೆ ಒತ್ತಾಯ; ಸಿಎಂಗೆ ಪತ್ರ ಕೇಂದ್ರ ಸಚಿವೆ
x

ಶೋಭಾ ಕರಂದ್ಲಾಜೆ

ವಿಷ್ಣುವರ್ಧನ್‌ ಸಮಾಧಿ ಧ್ವಂಸ | ಅಭಿಮಾನ್ ಸ್ಟುಡಿಯೋ ಭೂಮಿ ಸ್ವಾಧೀನ‌ಕ್ಕೆ ಒತ್ತಾಯ; ಸಿಎಂಗೆ ಪತ್ರ ಕೇಂದ್ರ ಸಚಿವೆ

ಕನ್ನಡ ಚಿತ್ರರಂಗದ 'ಸಾಹಸಸಿಂಹ' ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಉಳಿಸಿ, ಅದರ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು ಎಂದು ಆಗಸ್ಟ್ 10ರ ದಿನಾಂಕದ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.


ಬೆಂಗಳೂರಿನ ಉತ್ತರಹಳ್ಳಿಯ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳ ನೆಲಸಮ ಮಾಡಿದ ಪ್ರಕರಣವು ತೀವ್ರ ಸ್ವರೂಪ ಪಡೆದಿದೆ. ಅಭಿಮಾನ್‌ ಸ್ಟುಡಿಯೋವನ್ನು ರಾಜ್ಯ ಸರ್ಕಾರ ಕೂಡಲೇ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡ ಚಿತ್ರರಂಗದ 'ಸಾಹಸಸಿಂಹ' ಡಾ. ವಿಷ್ಣುವರ್ಧನ್ ಸ್ಮಾರಕ ಉಳಿಸಿ, ಅದರ ಸಾಂಸ್ಕೃತಿಕ ಪರಂಪರೆ ರಕ್ಷಿಸಬೇಕು ಎಂದು ಆಗಸ್ಟ್ 10ರಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಕರ್ನಾಟಕದ ಚಲನಚಿತ್ರ ಲೋಕದಲ್ಲಿ ಪದ್ಮಭೂಷಣ ಪುರಸ್ಕೃತ ಡಾ. ವಿಷ್ಣುವರ್ಧನ್ ಅವರ ಕೊಡುಗೆ ಅಪಾರ. ಅವರ ಸ್ಮಾರಕವು ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿತ್ತು. ಆದರೆ, ಕೆಲವರು ಭೂಮಿಯ ಹಕ್ಕು ಪ್ರತಿಪಾದಿಸಿ ರಾತ್ರೋರಾತ್ರಿ ಸಮಾಧಿ ಸ್ಥಳ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ಭಾರೀ ನೋವು ತಂದಿದೆ ಎಂದು ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ವಿವಾದಿತ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಬೇಕು. ಅಲ್ಲದೆ, ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ. ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡುವುದರ ಜೊತೆಗೆ, ಆ ಸ್ಥಳವನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಸ್ಥಳವಾಗಿ ಕಲಾ ಪ್ರದರ್ಶನ ಮತ್ತು ತರಬೇತಿಯ ಕಲಾಗ್ರಾಮವಾಗಿ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

1965ರಲ್ಲಿ ಸ್ಥಾಪನೆಯಾದ ಅಭಿಮಾನ್ ಸ್ಟುಡಿಯೋ ಭೂವಿವಾದಕ್ಕೆ ಸಿಲುಕಿದ್ದರೂ ವಿಷ್ಣುವರ್ಧನ್ ಸಮಾಧಿ ಜಾಗ ನೆಲಸಮ ಘಟನೆಯ ನಂತರ ಕೇಂದ್ರ ಸಚಿವರೇ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

Read More
Next Story