
ಪಿಎಫ್‌ಐ ಸಂಘಟನೆಯ ಹಂತಕರಿಗೆ ಸಿಎಂ ಕುಮ್ಮಕ್ಕು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ
ಸಿದ್ದರಾಮಯ್ಯ ಸರ್ಕಾರದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಹಲವರ ಮೇಲೆ ದಾಖಲಾಗಿದ್ದ ಕೊಲೆ ಪ್ರಕರಣಗಳನ್ನು ವಾಪಸ್ ಪಡೆದಿದ್ದರು. ಇದರ ಪರಿಣಾಮ ಸುಹಾಸ್ ಶೆಟ್ಟಿ ಕೊಲೆ ನಡೆದಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿದ್ದ (ಪಿಎಫ್ಐ) ಹಲವರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕು ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಾಗುತ್ತಿಲ್ಲ. ಬೇರೆ ರಾಜ್ಯಗಳಿಗೆ ಹೋದಾಗ ನಿಮ್ಮ ರಾಜ್ಯಕ್ಕೆ ಏನಾಗಿದೆ ಎಂದು ಕೇಳಬೇಕಾದ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಹಲವರ ಮೇಲೆ ದಾಖಲಾಗಿದ್ದ ಕೊಲೆ ಪ್ರಕರಣಗಳನ್ನು ಸಂಪುಟ ಸಭೆಗೆ ತಂದು ವಾಪಸ್ ಪಡೆದಿದ್ದರು. ಅದರ ಪರಿಣಾಮವನ್ನು ಇಂದು ಎದುರಿಸುವಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆಯಾಗಿದೆ. ಹಿಂದೂ ಕಾರ್ಯಕರ್ತನಿಗೆ ರೌಡಿಶೀಟರ್ ಪಟ್ಟ ಕಟ್ಟಿದ್ದೀರಿ. ಕೊಲೆ ಬೆದರಿಕೆ ಇದ್ದ ಸಂಗತಿ ಬಜ್ಪೆ ಪೊಲೀಸರಿಗೆ ಮೊದಲೇ ತಿಳಿದಿತ್ತು. ಆತ್ಮರಕ್ಷಣೆಗಾಗಿ ಸುಹಾಸ್ ಶೆಟ್ಟಿ ಇಟ್ಟುಕೊಂಡಿದ್ದ ಆಯುಧವನ್ನು ಪೊಲೀಸರು ಬೇಕೆಂತಲೇ ವಾಪಸ್ ಪಡೆದರು ಎಂದು ದೂರಿದ್ದಾರೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರ ಮೇಲಿನ ಪ್ರಕರಣಗಳನ್ನೂ ವಾಪಸ್ ಪಡೆಯಲಾಗಿದೆ. ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳು, ಉಗ್ರರನ್ನು ಬೀದಿಗೆ ತಂದು ಬಿಡಲಾಗಿದೆ. ಜೈಲಿನಲ್ಲಿ ಇರಬೇಕಾದವರಿಗೆ ಸಿಎಂ ಸಿದ್ದರಾಮಯ್ಯ ಅವರೇ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಪ್ರವೀಣ್ ನೆಟ್ಟಾರ್ ಹಾಗೂ ರುದ್ರೇಶ್ ಹತ್ಯೆ ಪ್ರಕರಣವನ್ನು ಎನ್ ಐಎಗೆ ವಹಿಸಿದ ಪರಿಣಾಮ ಸಮರ್ಪಕ ತನಿಖೆಯಾಯಿತು. ಬೇರೆ ದೇಶಗಳಲ್ಲಿ ತರಬೇತಿ ಪಡೆದವರು, ಕೊಲೆ ಮಾಡಿ ಬಂದಿದ್ದವರು ಸಿಕ್ಕಿ೦ಹಾಕಿಕೊಂಡರು. ಎನ್ಐಎ ತನಿಖೆಯಲ್ಲಿ ಇದಕ್ಕೆ ಬಲವಾದ ಸಾಕ್ಷ್ಯಗಳು ದೊರೆತವು. ಘಟನೆಯಲ್ಲಿ ಪಿಎಫ್ ಐ ಕೈವಾಡ ಸಾಬೀತಾದ ಕಾರಣ ಸಂಘಟನೆಯನ್ನು ನಿಷೇಧ ಮಾಡಲಾಯಿತು ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಗೆ ರೌಡಿ ಶೀಟರ್ ಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಸಚಿವ ದಿನೇಶ್ ಗುಂಡೂರಾವ್ ಆರೋಪಕ್ಕೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ ಅವರು, ನಾನು ಕೂಡ ಹಿಂದೂ ಕಾರ್ಯಕರ್ತೆ. ತಾಕತ್ತಿದ್ದರೆ ನನ್ನ ಮೇಲೂ ಪ್ರಕರಣ ದಾಖಲಿಸಿ ಎಂದು ಸವಾಲು ಹಾಕಿದ್ದಾರೆ.
ರೌಡಿ ಶೀಟರ್ ಮನೆಗೆ ಹೋಗಲ್ಲ ಎಂದು ವಾಪಸ್ ಬಂದಿದ್ದೀರಿ, ಹಾಗಾದರೆ ನಿಮ್ಮ ಶಾಸಕರಲ್ಲಿ ಎಷ್ಟು ಮಂದಿ ರೌಡಿಶೀಟರ್ಗಳಿದ್ದಾರೆ ಎಂದು ಒಮ್ಮೆ ಪರಿಶೀಲಿಸಿ ಎಂದು ಹೇಳಿದ್ದಾರೆ.
ಪರಮೇಶ್ವರ್ ನಾಲಾಯಕ್
ಘಟನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ರಾಜೀನಾಮೆ ನೀಡಬೇಕು. ಗೃಹ ಸಚಿವರಾಗಲು ಪರಮೇಶ್ವರ್ ನಾಲಾಯಕ್ ಆಗಿದ್ದಾರೆ. ಕೂಡಲೇ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.