
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ರ
ರಾಜ್ಯ ಸರ್ಕಾರದ ಸಹಕಾರದ ಬಗ್ಗೆ ಮಾತನಾಡಿದ ಅವರು, "ಕೇಂದ್ರದಿಂದ ರಾಜ್ಯದಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ, ರಾಜ್ಯದ ಸಹಕಾರ ಅತ್ಯಗತ್ಯ. ಆ ಸಹಕಾರ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಮಂಡ್ಯ ಶಾಸಕರು ಜಾಗ ಕೊಡುವುದಾದರೆ ಕೊಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಸೂಕ್ತ ಜಾಗ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಗುರುವಾರ ಮಂಡ್ಯದಲ್ಲಿ 'ದಿಶಾ' ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರದ ನಿರೀಕ್ಷೆಯಲ್ಲಿದ್ದೇನೆ ಎಂದರು.
"ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪಿಸಬೇಕೆಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ. ನಾನು ಸಂಸದನಾಗಿ ಒಂದೂವರೆ ವರ್ಷವಾಯಿತು, ಕೈಗಾರಿಕೆಗೆ ಜಾಗ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಪಾಪ, ಅವರು ಜಾಗ ಹುಡುಕುತ್ತಲೇ ಇದ್ದಾರೆ, ಆದರೆ ಇನ್ನೂ ಸಿಕ್ಕಿಲ್ಲ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಸಹಕಾರದ ಬಗ್ಗೆ ಮಾತನಾಡಿದ ಅವರು, "ಕೇಂದ್ರದಿಂದ ರಾಜ್ಯದಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ, ರಾಜ್ಯದ ಸಹಕಾರ ಅತ್ಯಗತ್ಯ. ಆ ಸಹಕಾರ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಮಂಡ್ಯ ಶಾಸಕರು ಜಾಗ ಕೊಡುವುದಾದರೆ ಕೊಡಲಿ, ಸರ್ಕಾರದಿಂದ ಸ್ವಾಧೀನಪಡಿಸಿ ನಮಗೆ ನೀಡಲಿ. ನಾವೆಲ್ಲರೂ ಸೇರಿ ಕೈಗಾರಿಕೆ ತಂದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡೋಣ. 'ಮಂಡ್ಯಕ್ಕೆ ಏನು ತಂದಿರಿ?' ಎಂದು ಕೇಳುವವರು, ತಾವು ಜಿಲ್ಲೆಗೆ ಏನು ತಂದಿದ್ದೀರಿ ಎಂಬುದನ್ನು ಮೊದಲು ಹೇಳಲಿ. ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಡಬೇಕು" ಎಂದು ಅವರು ಖಾರವಾಗಿ ನುಡಿದರು.
ಶಿಕ್ಷಕರ ವೇತನದ ಬಗ್ಗೆ ಆಕ್ರೋಶ
ಮೈಷುಗರ್ ಕಾರ್ಖಾನೆಯ ಶಾಲಾ ಶಿಕ್ಷಕರಿಗೆ ಸಂಬಳ ನೀಡಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಸಂಬಳ ಕೊಡಲು ದುಡ್ಡಿಲ್ಲ ಎಂದರೆ, ಈ ಸರ್ಕಾರದಲ್ಲಿ ದುಡ್ಡಿಲ್ಲ ಎಂದೇ ಅರ್ಥ. ನಾನು ಸಿಎಂ ಆಗಿದ್ದಾಗ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಬಜೆಟ್‌ನಲ್ಲಿ ₹100 ಕೋಟಿ ಇಟ್ಟಿದ್ದೆ. ಆ ಹಣ ಎಲ್ಲಿ ಹೋಯಿತು? ಈಗ ನೋಡಿದರೆ, ಕೀಳು ಮಟ್ಟದಲ್ಲಿ ಮಾತನಾಡುತ್ತೀರಿ. ಶಿಕ್ಷಕರ ಕಷ್ಟ ನೋಡಲಾಗದೆ, ನಾನೇ ನನ್ನ ಕೈಯಿಂದ ಹಣ ನೀಡುತ್ತಿದ್ದೇನೆ" ಎಂದು ಅವರು ಹೇಳಿದರು.
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯು ಹದಗೆಟ್ಟಿದೆ ಎಂದು ಆರೋಪಿಸಿದ ಅವರು, "ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ 161 ಪ್ರಾಧ್ಯಾಪಕರು ಇರಬೇಕು, ಆದರೆ ಈಗ ಕೇವಲ 9 ಜನರಿದ್ದಾರೆ. ರಾಜ್ಯಾದ್ಯಂತ 65 ಸಾವಿರ ಶಿಕ್ಷಕರ ಕೊರತೆಯಿದೆ. ಇವರಿಗೆ ಯಾರನ್ನೂ ನೇಮಕ ಮಾಡುವ ಯೋಗ್ಯತೆಯಿಲ್ಲ" ಎಂದು ಹರಿಹಾಯ್ದರು.
ಉಕ್ಕು ಉತ್ಪಾದನೆಗೆ ಉತ್ತೇಜನ
ಇದೇ ವೇಳೆ, ನವದೆಹಲಿಯಲ್ಲಿ ತಾವು ಚಾಲನೆ ನೀಡಿದ ಉತ್ಪಾದನಾ ಉತ್ತೇಜನಾ ಯೋಜನೆಯ (PLI 1.2) ಮೂರನೇ ಸುತ್ತಿನ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ, "ವಿಶೇಷ ಉಕ್ಕು (ಸ್ಪೆಷಾಲಿಟಿ ಸ್ಟೀಲ್) ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ. ಇದು 43,874 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಆಕರ್ಷಿಸಿ, 30,760 ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ" ಎಂದು ತಿಳಿಸಿದರು. ಈ ಯೋಜನೆಯು ಆತ್ಮನಿರ್ಭರ ಭಾರತ, ವಿಕಸಿತ ಭಾರತ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

