
ಕೇಂದ್ರ ಬಜೆಟ್| ಕರ್ನಾಟಕಕ್ಕೆ ಗರಿಷ್ಠ ಪ್ರಯೋಜನ ಎಂದ ನಿರ್ಮಲಾ ಸೀತಾರಾಮನ್
ಈ ಬಾರಿಯ ಕೇಂದ್ರ ಬಜೆಟ್‍ನಿಂದ ಬೆಂಗಳೂರು ಮತ್ತು ಕರ್ನಾಟಕ ರಾಜ್ಯಕ್ಕೆ ಗರಿಷ್ಠ ಪ್ರಯೋಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಕರ್ನಾಟಕ್ಕೆ ಕೇಂದ್ರ ಬಜೆಟ್‌ನಲ್ಲಿ ʼಚೆಂಬುʼ ಸಿಕ್ಕಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ
ಈ ಬಾರಿಯ ಕೇಂದ್ರ ಬಜೆಟ್‍ನಿಂದ ಬೆಂಗಳೂರು ಮತ್ತು ಕರ್ನಾಟಕ ರಾಜ್ಯಕ್ಕೆ ಗರಿಷ್ಠ ಪ್ರಯೋಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಕರ್ನಾಟಕ್ಕೆ ಕೇಂದ್ರ ಬಜೆಟ್‌ನಲ್ಲಿ ʼಚೆಂಬುʼ ಸಿಕ್ಕಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದರು.
ಬೆಂಗಳೂರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಶೋಧನೆ ಮತ್ತು ಅಭಿವೃದ್ಧಿ ನೆರವಿನಿಂದ ಬೆಂಗಳೂರಿಗೆ ಗರಿಷ್ಠ ಪ್ರಯೋಜನ ಸಿಗಲಿದೆ. ಖಾಸಗಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೂ ಇದರಿಂದ ಪ್ರಯೋಜನ ಲಭಿಸುತ್ತದೆ. ಕೃಷಿ ಕ್ಷೇತ್ರದ ಡಿಜಿಟಲ್ ಪಬ್ಲಿಕ್ ಇನ್‍ಫ್ರಾಸ್ಟ್ರಕ್ಚರ್ (ಡಿಪಿಐ) ಬಳಕೆಗೆ ಬೆಂಗಳೂರು ಗರಿಷ್ಠ ಕೊಡುಗೆ ನೀಡಲಿದೆ ಎಂದು ವಿವರಿಸಿದರು.
ಬಾಹ್ಯಾಕಾಶ ಕೇಂದ್ರಕ್ಕೆ ದೊಡ್ಡ ಮೊತ್ತದ ನಿಧಿ (ವೆಂಚರ್ ಕ್ಯಾಪಿಟಲ್) ಕೊಟ್ಟಿದ್ದು, ಇಸ್ರೋ ಸಂಬಂಧಿತ ಕೆಲಸಗಳು ಇಲ್ಲಿಯೂ ನಡೆಯುತ್ತಿವೆ. ಇದು ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ನೆರವು ಕೊಡಲಿದೆ ಎಂದರು. ಸ್ಟಾರ್ಟಪ್‍ಗಳ ಮೇಲಿನ ಏಂಜೆಲ್ ಟ್ಯಾಕ್ಸ್ ರದ್ದು ಮಾಡಿದ್ದು, ಇದು ಗರಿಷ್ಠ ಸ್ಟಾರ್ಟಪ್‍ಗಳನ್ನು ಹೊಂದಿದ ಬೆಂಗಳೂರಿಗೆ ನೆರವು ಕೊಡಲಿದೆ. ಏಂಜೆಲ್ ಟ್ಯಾಕ್ಸ್ ಅನ್ನು ಯುಪಿಎ ಸರಕಾರ 2012ರಲ್ಲಿ ಜಾರಿ ಮಾಡಿತ್ತು. ಇದೀಗ ಅದನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಿಂದ ತಪ್ಪು ಮಾಹಿತಿ
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ವಿಚಾರದಲ್ಲಿ ತಪ್ಪು ಮಾಹಿತಿ ಕೊಡಲಾಗುತ್ತಿದೆ. ಕೇಂದ್ರ ಸರಕಾರವು ಕರ್ನಾಟಕಕ್ಕೆ ಅದರ ಭಾಗವನ್ನು ಕೊಡುತ್ತಿಲ್ಲ ಎಂದು ತಿಳಿಸುತ್ತಿದ್ದು, ಇದು ಸಂಪೂರ್ಣ ಸುಳ್ಳು ಎಂದು ಆಕ್ಷೇಪಿಸಿದರು.
ಕರ್ನಾಟಕ ಸರಕಾರವು ಜನರಿಗೆ ಈ ವಿಷಯದಲ್ಲಿ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದ ಅವರು, 2004-14ರ ಯುಪಿಎ ಆಡಳಿತದಲ್ಲಿ ಕರ್ನಾಟಕವು 81,791 ಕೋಟಿ ತೆರಿಗೆ ಹಂಚಿಕೆ ನೆರವು ಪಡೆದಿತ್ತು. ಆದರೆ, ಎನ್‍ಡಿಎ ಆಡಳಿತದ ಅಡಿಯಲ್ಲಿ 2014-24ರಲ್ಲಿ 2,95,818 ಕೋಟಿ ನೆರವು ಗಳಿಸಿದೆ ಎಂದು ಅಂಕಿಅಂಶಗಳೊಂದಿಗೆ ಸಮರ್ಥಿಸಿಕೊಂಡರು.
ಯುಪಿಎ 10 ವರ್ಷಗಳ ಅವಧಿಯಲ್ಲಿ ಅನುದಾನ ನೆರವು 60,779 ಕೋಟಿ ಇದ್ದರೆ, ಮೋದಿಯವರ ನಾಯಕತ್ವದ 10 ವರ್ಷಗಳ ಅವಧಿಯಲ್ಲಿ 2,36,955 ಕೋಟಿ ಕರ್ನಾಟಕಕ್ಕೆ ಸಿಕ್ಕಿದೆ. 2024-25ರಲ್ಲಿ ಕರ್ನಾಟಕಕ್ಕೆ 45,485 ಕೋಟಿ ತೆರಿಗೆ ಹಂಚಿಕೆ ಸಿಕ್ಕಿದೆ ಎಂದರು. ಯುಪಿಎ ಅವಧಿಯಲ್ಲಿ ಒಂದು ವರ್ಷಕ್ಕೆ 8,179 ಕೋಟಿ ಸಿಗುತ್ತಿದ್ದುದು ಈಗ ಮೋದಿಯವರ ಅವಧಿಯಲ್ಲಿ 45,485 ಕೋಟಿಗೆ ಏರಿದೆ. ತಪ್ಪು ಪ್ರಚಾರ ಮಾಡುವವರನ್ನು ಮಾಧ್ಯಮದವರು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.
"ಯೇ ಗಲತ್ ಪ್ರಚಾರ್ ಕ್ಯೋಂ ಹೋ ರಹಾ ಹೇ? ವೈ ಈಸ್ ದ ರಾಂಗ್ ಪ್ರಚಾರ್ ಗೋಯಿಂಗ್ ಆನ್" ಎಂದು ಕೇಳಿದ ಅವರು, ಅನುದಾನ ಹಂಚಿಕೆ ವಿಚಾರದಲ್ಲೂ ಹೀಗಾಗಿದೆ ಎಂದರು. ಯುಪಿಎ ಅವಧಿಯಲ್ಲಿ ಅನುದಾನ ನೆರವು ಪ್ರತಿವರ್ಷಕ್ಕೆ ಸರಾಸರಿ 6,077 ಕೋಟಿ ಇತ್ತು. ಆದರೆ, 2024-25ರಲ್ಲಿ ನಾವು 15,300 ಕೋಟಿ ಕೊಡಲಿದ್ದೇವೆ ಎಂದು ತಿಳಿಸಿದರು.
ನಗರಗಳ ಯೋಜಿತ ಅಭಿವೃದ್ಧಿ ವಿಚಾರದಲ್ಲೂ ಬೆಂಗಳೂರಿಗೆ ಪ್ರಯೋಜನ ಸಿಗಲಿದೆ. ನಗರಗಳ ಮನೆ ನಿರ್ಮಾಣದಲ್ಲೂ ಬೆಂಗಳೂರು ವಿಶೇಷ ಲಾಭ ಪಡೆಯಲಿದೆ. ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಎಂಎಸ್‍ಎಂಇಗಳು ದುಡಿಯುವ ಬಂಡವಾಳಕ್ಕೆ ವಾಣಿಜ್ಯ ಬ್ಯಾಂಕ್‍ಗಳಿಂದ ಸಾಲ ಪಡೆಯುತ್ತಿದ್ದವು. ಬ್ಯಾಂಕ್‍ಗಳು ಇನ್ನು ಮುಂದೆ ಯಂತ್ರೋಪಕರಣ, ಪೂರಕ ಉಪಕರಣ ಖರೀದಿಗೆ ಸಾಲ ಕೊಡಲಿವೆ. ಇದಕ್ಕೆ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ವಾಣಿಜ್ಯ ಬ್ಯಾಂಕ್‍ಗಳು ಎಂಎಸ್‍ಎಂಇಯ ಕಾಲಕಾಲದ ಹಣದ ಅಗತ್ಯವನ್ನು ಗಮನಿಸುವುದಿಲ್ಲ ಎಂಬ ದೂರುಗಳಿದ್ದು, ಈ ಸಮಸ್ಯೆಯನ್ನು ದೂರ ಮಾಡಲು ಸಿಡ್ಬಿಯು ಪೀಣ್ಯದಂಥ ಕೈಗಾರಿಕಾ ಪ್ರದೇಶದಲ್ಲಿ ಶಾಖೆ ತೆರೆಯುವಂತೆ ಮಾಡುತ್ತೇವೆ ಎಂದು ಹೇಳಿದರು.
ಎಂಎಸ್‍ಎಂಇಗಳಿಗೆ ರಫ್ತು ಹಬ್ ತೆರೆಯಲಾಗುತ್ತದೆ. ಇದು ಜಾಗತಿಕ ಮಾರುಕಟ್ಟೆ ಹುಡುಕಾಟ ಮತ್ತು ರಫ್ತಿಗೆ ಸಣ್ಣ ಕೈಗಾರಿಕೆದಾರರ ನೆರವಿಗೆ ಬರಲಿದೆ ಎಂದರು. ಕಿರು ಮತ್ತು ಸಣ್ಣ ಕೈಗಾರಿಕೆಗಳು ಸರಿಯಾಗಿ ಕೆಲಸ ಮಾಡದೆ ಇದ್ದಾಗ ಕೇವಲ 45 ದಿನಗಳಲ್ಲಿ ಅಂಥ ಕೈಗಾರಿಕೆಯನ್ನು ಒತ್ತಡ ನಿರ್ವಹಣಾ ಖಾತೆ (ಎಸ್‍ಎಂಎ) ಅಡಿಯಲ್ಲಿ ಇಡಲಾಗುತ್ತಿತ್ತು. ಇದರಿಂದ ಬ್ಯಾಂಕಿನಿಂದ ಹಣ ಪಡೆಯಲಾಗದ ಸ್ಥಿತಿ ಉದ್ಭವವಾಗುತ್ತಿತ್ತು. ಈ ಸಮಸ್ಯೆ ಪರಿಹರಿಸಲು ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರವು ವಿಶೇಷ ನಿಧಿಯನ್ನು ಆರಂಭಿಸುತ್ತಿದೆ ಎಂದು ತಿಳಿಸಿದರು.
ಯುವಜನರಿಗೆ ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ಕೊಡಲಾಗಿದೆ. ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ, ಉದ್ಯೋಗದಾತರಿಗೆ ಪ್ರಯೋಜನ, ಈಗಾಗಲೇ ಉದ್ಯೋಗ ಹೊಂದಿದ್ದು, ಬೇರೆಡೆ ಉದ್ಯೋಗ ಪಡೆಯುವವರು, ಉದ್ಯೋಗದಾತರಿಗೆ ಕೊಡುಗೆಗಳನ್ನು ನೀಡಿದ್ದು, ಇವೆಲ್ಲವೂ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ) ಮೂಲಕ ಜಾರಿ ಆಗಲಿವೆ ಎಂದು ತಿಳಿಸಿದರು.
ಆಧುನಿಕ ಕೌಶಲ್ಯ ವೃದ್ಧಿಗೆ ರಾಜ್ಯಗಳ ಸಹಯೋಗದಲ್ಲಿ ಐಟಿಐಗಳನ್ನು ಬಳಸಿಕೊಳ್ಳಲಿದ್ದೇವೆ. ದೇಶದ ಸರ್ವಶ್ರೇಷ್ಠ (ಟಾಪ್) 500 ಕಂಪೆನಿಗಳಲ್ಲಿ ಇಂಟರ್ನ್‍ಶಿಪ್ ಅವಕಾಶವನ್ನೂ ಕಲ್ಪಿಸಲಾಗುತ್ತದೆ. ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ. ಸಾಲ ಕೊಡಲಿದ್ದು, ಇದರಿಂದ ಮಧ್ಯಮ ವರ್ಗದವರಿಗೆ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.
ಯುವಜನತೆ, ಎಂಎಸ್‍ಎಂಇ, ಸಂಶೋಧನೆ ಮತ್ತು ಅಭಿವೃದ್ಧಿ, ಕೃಷಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ, ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಬ್ಲಿಕ್ ಇನ್‍ಫ್ರಾಸ್ಟ್ರಕ್ಚರ್ (ಡಿಪಿಐ) ಬಳಕೆ, ಬಾಹ್ಯಾಕಾಶಕ್ಕೆ ಗರಿಷ್ಠ ಅನುದಾನ, ಮಧ್ಯಮ ವರ್ಗಕ್ಕೆ ಪ್ರಯೋಜನಗಳನ್ನು ಈ ಬಜೆಟ್ ಕೊಟ್ಟಿದೆ. ಇದು ಕೇಂದ್ರ ಆಯವ್ಯಯ ಪತ್ರದ ವಿಸ್ತೃತ ರೂಪ ಎಂದು ವಿಶ್ಲೇಷಿಸಿದರು. ಇ ಎಂದರೆ ಎಂಪ್ಲಾಯ್‍ಮೆಂಟ್, ಎಂ ಫಾರ್ ಮಿಡಲ್ ಕ್ಲಾಸ್- ಹೀಗೆ ಎಂಪ್ಲಾಯ್‍ಮೆಂಟ್ ಶಬ್ದದ ಪ್ರತಿ ಅಕ್ಷರವೂ ಈಡೇರುತ್ತಿದೆ ಎಂದು ವಿವರಿಸಿದರು.
ನೀತಿ ಆಯೋಗ ಸಭೆಗೆ ಸಿಎಂ ಗೈರು
ನೀತಿ ಆಯೋಗದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಭಾಗವಹಿಸಿದ್ದಾರೆ. ಅವರ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ ಆದರೆ, ಅವರ ಮೈಕ್ ಕೇಳಿಸದಂತೆ (ಆಫ್) ಮಾಡಿದ್ದಾಗಿ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ವಿಪಕ್ಷ ನಾಯಕರು ಸೇರಿ ಕರ್ನಾಟಕದ ಮುಖ್ಯಮಂತ್ರಿಯವರು ಅಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕಿತ್ತು. ಮಾತನಾಡುವ, ಅಭಿಪ್ರಾಯ ತಿಳಿಸುವ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು ಎಂದು ನುಡಿದರು.
ನಾನು ತಪ್ಪೇ ಮಾಡಿಲ್ಲ ಎಂದು ಇಲ್ಲಿನ ಮುಖ್ಯಮಂತ್ರಿ ಹೇಳುತ್ತಾರೆ. ಮೂಡ ಹಗರಣದಂಥ ಆರೋಪಕ್ಕೆ ಸ್ಪಷ್ಟನೆ ನೀಡದೆ ಪ್ರತ್ಯಾರೋಪ ಮಾಡುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ಸಿನ ದೂರದೃಷ್ಟಿಯೇ ಇಲ್ಲದ ಯೋಜನೆಗಳನ್ನು ನಾವು ‘ಕಾಪಿ’ ಹೊಡೆದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಯುವಜನರಿಗಾಗಿ ನಮ್ಮದು ದೂರದೃಷ್ಟಿ ಇರುವ ಯೋಜನೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.