
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಪಿ.ಜಿ.ಗಳೇ ಟಾರ್ಗೆಟ್: ಕೆಲಸ ಸಿಗದೆ ಕಳ್ಳನಾದವನಿಂದ 20 ಲ್ಯಾಪ್‌ಟಾಪ್ ವಶ!
ಪ್ರಕರಣದ ಬೆನ್ನತ್ತಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ನವೆಂಬರ್ 13 ರಂದು ಸಂಜೆ ಎನ್.ಎಸ್.ಪಾಳ್ಯದ ಹೋಟೆಲ್ ಒಂದರ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಕೆಲಸ ಸಿಗದೆ ನಿರಾಶನಾಗಿ, ಜೀವನೋಪಾಯಕ್ಕಾಗಿ ಪಿ.ಜಿ.ಗಳಲ್ಲಿ (Paying Guest) ಲ್ಯಾಪ್‌ಟಾಪ್ ಕಳ್ಳತನಕ್ಕೆ ಇಳಿದಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನೊಬ್ಬನನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 12.20 ಲಕ್ಷ ರೂಪಾಯಿ ಮೌಲ್ಯದ 20 ಲ್ಯಾಪ್‌ಟಾಪ್‌ಗಳು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 6 ರಂದು ಬನ್ನೇರುಘಟ್ಟ ರಸ್ತೆಯ ಬಿಟಿಎಂ 2ನೇ ಹಂತದ ಪಿ.ಜಿ.ಯೊಂದರಲ್ಲಿ ವಾಸವಿದ್ದ ವಿದ್ಯಾರ್ಥಿಯೊಬ್ಬರು ಮಧ್ಯಾಹ್ನ ಕಾಲೇಜಿನಿಂದ ಬಂದು, ತಮ್ಮ ಲ್ಯಾಪ್‌ಟಾಪ್ ಅನ್ನು ರೂಮಿನಲ್ಲಿಟ್ಟು, ಬಟ್ಟೆ ತರಲು ಟೆರೇಸ್‌ಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಲ್ಯಾಪ್‌ಟಾಪ್, ಚಾರ್ಜರ್ ಮತ್ತು 5000 ರೂ. ನಗದು ಕಳ್ಳತನವಾಗಿತ್ತು. ಈ ಬಗ್ಗೆ ಅವರು ನೀಡಿದ ದೂರಿನ ಮೇರೆಗೆ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಲ್ಕು ತಿಂಗಳ ಹಿಂದೆ ಬಂದಿದ್ದವನ ಕೈಚಳಕ
ಪ್ರಕರಣದ ಬೆನ್ನತ್ತಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ನವೆಂಬರ್ 13 ರಂದು ಸಂಜೆ ಎನ್.ಎಸ್.ಪಾಳ್ಯದ ಹೋಟೆಲ್ ಒಂದರ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಆಂಧ್ರಪ್ರದೇಶ ಮೂಲದವನೆಂದು ತಿಳಿದುಬಂದಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಈತನಿಗೆ ಎಲ್ಲಿಯೂ ಕೆಲಸ ಸಿಗದ ಕಾರಣ, ಜೀವನ ನಿರ್ವಹಣೆಗಾಗಿ ಪಿ.ಜಿ.ಗಳನ್ನು ಗುರಿಯಾಗಿಸಿಕೊಂಡು ಲ್ಯಾಪ್‌ಟಾಪ್ ಕದಿಯುವ ದಾರಿ ಹಿಡಿದಿದ್ದ.
ಸ್ನೇಹಿತನ ರೂಮಿನಲ್ಲಿತ್ತು 19 ಲ್ಯಾಪ್‌ಟಾಪ್!
ಆರೋಪಿಯು ತಾನು ಕದ್ದ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಜೆ.ಪಿ.ನಗರದ ಪಿ.ಜಿ.ಯೊಂದರಲ್ಲಿ ವಾಸವಿದ್ದ ತನ್ನ ಸ್ನೇಹಿತನ ಬಳಿ ಮತ್ತು ತನ್ನ ರೂಮಿನಲ್ಲಿ ಬಚ್ಚಿಟ್ಟಿದ್ದ. ಆತನ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಒಟ್ಟು 20 ಲ್ಯಾಪ್‌ಟಾಪ್‌ಗಳು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಹಲವು ಠಾಣೆಗಳ ಪ್ರಕರಣ ಬಯಲಿಗೆ
ಈತನ ಬಂಧನದಿಂದ ಮೈಕೋಲೇಔಟ್ ಠಾಣೆಯ 2 ಪ್ರಕರಣಗಳು ಸೇರಿದಂತೆ, ತಿಲಕ್ ನಗರ, ಸಿದ್ದಾಪುರ, ಜಯನಗರ, ಪುಟ್ಟೇನಹಳ್ಳಿ, ಎಚ್ಎಸ್ಆರ್ ಲೇಔಟ್, ಕೋರಮಂಗಲ, ಪರಪ್ಪನ ಅಗ್ರಹಾರ, ಬಂಡೇಪಾಳ್ಯ, ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಮಾರತ್‌ಹಳ್ಳಿ, ಮತ್ತು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 18 ಲ್ಯಾಪ್‌ಟಾಪ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀಮತಿ ಸಾರಾ ಫಾತಿಮಾ ಮತ್ತು ಮೈಕೋಲೇಔಟ್ ಉಪ ವಿಭಾಗದ ಎಸಿಪಿ ಶ್ರೀಮತಿ ಎಂ.ಜಿ.ಕವಿತಾ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ನಂಜೇಗೌಡ. ಟಿ ಮತ್ತು ಸಿಬ್ಬಂದಿ ವರ್ಗ ಈ ಕಾರ್ಯಾಚರಣೆ ನಡೆಸಿದೆ.

