ಕನ್ನಡಿಗರ 3 ಸಾವಿರ ಕೋಟಿ ರೂ.ಅನಾಥ: ರಾಜ್ಯದಲ್ಲಿವೆ 1.20 ಕೋಟಿ ನಿಷ್ಕ್ರಿಯ ಖಾತೆಗಳು
x

ಕನ್ನಡಿಗರ 3 ಸಾವಿರ ಕೋಟಿ ರೂ.'ಅನಾಥ': ರಾಜ್ಯದಲ್ಲಿವೆ 1.20 ಕೋಟಿ ನಿಷ್ಕ್ರಿಯ ಖಾತೆಗಳು

ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ 1.20 ಕೋಟಿ ನಿಷ್ಕ್ರಿಯ ಖಾತೆಗಳಿದ್ದು, 3,461 ಕೋಟಿ ರೂ. ಬಾಕಿ ಉಳಿದಿದೆ. ಬ್ಯಾಂಕ್‌ ಖಾತೆಗಳಲ್ಲಿ ಕೊಳೆಯುತ್ತಿರುವುದು ಆರ್ಥಿಕ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.


Click the Play button to hear this message in audio format

ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಜಾಗತಿಕವಾಗಿ ಅತ್ಯಂತ ಸದೃಢವೆಂದು ಹೆಸರುವಾಸಿಯಾಗಿದ್ದರೂ, ಸಾವಿರಾರು ಕೋಟಿ ರೂಪಾಯಿ ಹಣವು ಯಾವುದೇ ವಾರಸುದಾರರಿಲ್ಲದೆ 'ಅನಾಥ'ವಾಗಿ ಬಿದ್ದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರದಿಯ ಪ್ರಕಾರ, ದೇಶಾದ್ಯಂತ ಲಕ್ಷಾಂತರ ಖಾತೆಗಳಲ್ಲಿ ಹತ್ತಾರು ವರ್ಷಗಳಿಂದ ಚಲಾವಣೆಯಿಲ್ಲದೆ ಕೊಳೆಯುತ್ತಿರುವ ಹಣದ ಪಟ್ಟಿಯಲ್ಲಿ ಕರ್ನಾಟಕವು ಎಂಟನೇ ಸ್ಥಾನ ಪಡೆದಿದೆ.

ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 3,461 ಕೋಟಿ ರೂಪಾಯಿ ಹಣವು ಕಳೆದ 10 ವರ್ಷಗಳಿಂದ ಯಾವುದೇ ವಹಿವಾಟು ನಡೆಸದೆ ಬಾಕಿ ಉಳಿದಿದೆ. ಖಾತೆದಾರರು ಹಣ ಜಮಾ ಮಾಡಿ ಮರೆತು ಹೋಗಿರುವುದು ಅಥವಾ ವಾರಸುದಾರರಿಗೆ ಮಾಹಿತಿ ನೀಡದ ಕಾರಣ ಇಷ್ಟೊಂದು ಬೃಹತ್ ಮೊತ್ತವು ಬ್ಯಾಂಕ್‌ಗಳಲ್ಲೇ ಉಳಿದುಕೊಂಡಿದೆ.

1.20 ಕೋಟಿ ಖಾತೆಗಳು ನಿಷ್ಕ್ರಿಯ

ದೇಶದ 26 ಕೋಟಿಗಿಂತ ಹೆಚ್ಚಿನ ಬ್ಯಾಂಕ್‌ ಖಾತೆಗಳು ನಿಷ್ಕ್ರಿಯಗೊಂಡರೆ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ 1.20 ಕೋಟಿ ನಿಷ್ಕ್ರಿಯ ಖಾತೆಗಳಿದ್ದು, ಈ ಖಾತೆಗಳಲ್ಲಿ ಒಟ್ಟು 3,461 ಕೋಟಿ ಹಣ ಬಾಕಿ ಉಳಿದಿದೆ. ಸಾವಿರಾರು ಕೋಟಿ ರೂ. ಬ್ಯಾಂಕ್‌ ಖಾತೆಗಳಲ್ಲಿ ಕೊಳೆಯುತ್ತಿರುವುದು ಆರ್ಥಿಕ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಇದು ಕೇವಲ ಅಂಕಿ ಅಂಶವಲ್ಲ, ಬದಲಾಗಿ ಲಕ್ಷಾಂತರ ಕುಟುಂಬಗಳ ಹಕ್ಕು ಮತ್ತು ಆರ್ಥಿಕ ನಿರ್ಲಕ್ಷ್ಯದ ಸಂಕೇತವಾಗಿದೆ.

1.20 ಕೋಟಿ ಖಾತೆಗಳಲ್ಲಿ ಸುಮಾರು 80 ಲಕ್ಷ ಖಾತೆಗಳು ಸಣ್ಣ ಉಳಿತಾಯಗಾರರಿಗೆ ಸಂಬಂಧಪಟ್ಟ ಖಾತೆಗಳಾಗಿದ್ದು, ಇವುಗಳಲ್ಲಿ ತಲಾ 1 ಸಾವಿರ ರೂ. ಕ್ಕಿಂತ ಕಡಿಮೆ ಮೊತ್ತವಿರುವ ಖಾತೆಗಳೂ ಸೇರಿದೆ. ಜನರು ಸಣ್ಣ ಮೊತ್ತವನ್ನು ಮರೆತುಬಿಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವಿರುವ 1,111 ಖಾತೆಗಳಿದ್ದು, ಇವುಗಳಲ್ಲಿಯೇ 53.13 ಕೋಟಿ ಹಣವಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ಅಗ್ರಸ್ಥಾನದಲ್ಲಿ

ರಾಜ್ಯದ ರಾಜಧಾನಿ ಬೆಂಗಳೂರು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಇಲ್ಲಿಯೇ ಅತಿ ಹೆಚ್ಚು ಹಣ ಖಾತೆಯಲ್ಲಿ ಉಳಿದುಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿನ ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 1,226.78 ಕೋಟಿ ರೂ. ಇದ್ದು, ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಮೊತ್ತ ಇದೆ. ಬೆಳಗಾವಿ 186 ಕೋಟಿ ರೂ., ಮೈಸೂರು 157 ಕೋಟಿ ರೂ., ದಕ್ಷಿಣ ಕನ್ನಡ 144 ಕೋಟಿ ರೂ., ಕಲಬುರಗಿ 118 ಕೋಟಿ ರೂ., ಧಾರವಾಡ 103 ಕೋಟಿ ರೂ. ಇದೆ. ಬೆಂಗಳೂರಿನಲ್ಲಿ ಜನರು ಕೆಲಸ ಬದಲಿಸಿದಾಗ ವೇತನ ಖಾತೆಗಳನ್ನು ಮುಚ್ಚದೆ ಬಿಡುವುದು ಅಥವಾ ವಲಸೆ ಹೋದಾಗ ಹಳೆಯ ಖಾತೆಗಳನ್ನು ಮರೆಯುವುದು ಈ ಬೃಹತ್ ಮೊತ್ತಕ್ಕೆ ಕಾರಣವಾಗಿದೆ. ಯಾವುದೇ ಬ್ಯಾಂಕ್‌ ಖಾತೆಯಲ್ಲಿ ಸತತ 10 ವರ್ಷಗಳ ಕಾಲ ಯಾವುದೇ ಹಣಕಾಸಿನ ವ್ಯವಹಾರ ನಡೆಯದಿದ್ದರೆ ಅಂತಹ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್‌ಗಳು ಆರ್‌ಬಿಐ ಸ್ಥಾಪನೆ ಮಾಡಿರುವ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (ಡಿಇಎಎಫ್‌) ವರ್ಗಾಯಿಸಲಾಗುತ್ತದೆ ಎಂದು ಬ್ಯಾಂಕ್‌ನ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕವು 8ನೇ ಸ್ಥಾನದಲ್ಲಿರಲು ಕಾರಣಗಳೇನು?

ರಾಜ್ಯವು ತಾಂತ್ರಿಕವಾಗಿ ಮುಂದುವರಿದ ರಾಜ್ಯವಾಗಿದ್ದರೂ ಎಂಟನೇ ಸ್ಥಾನದಲ್ಲಿರುವುದು ಆಶ್ಚರ್ಯಕರವಾಗಿದೆ. ಇದಕ್ಕೆ ಮುಖ್ಯವಾಗಿ ಬೆಂಗಳೂರಿನಂತಹ ನಗರಗಳಲ್ಲಿರುವ 'ವಲಸೆ ಜನಸಂಖ್ಯೆ' ಕಾರಣ. ಇಲ್ಲಿ ಕೆಲಸಕ್ಕಾಗಿ ಬಂದು ಹೋಗುವವರು ತೆರೆದ ಖಾತೆಗಳು ಹೆಚ್ಚಾಗಿ ಬಾಕಿ ಉಳಿಯುತ್ತಿವೆ. ಅಲ್ಲದೆ, ಕರಾವಳಿ ಮತ್ತು ಉತ್ತರ ಕರ್ನಾಟಕದ ಭಾಗಗಳಿಂದ ಜನರು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋದಾಗ, ಇಲ್ಲಿನ ತಮ್ಮ ಹಳೆಯ ಖಾತೆಗಳ ನಿರ್ವಹಣೆಯನ್ನು ಮರೆತುಬಿಡುತ್ತಾರೆ. ಈ ಕಾರಣಕ್ಕಾಗಿ ಬ್ಯಾಂಕ್‌ ಖಾತೆಯಲ್ಲಿ ಹಣ ಉಳಿದುಕೊಂಡು ನಿಷ್ಕ್ರಿಯಗೊಂಡಿವೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರ ರಾಜ್ಯವು ಮೊದಲ ಸ್ಥಾನದಲ್ಲಿದೆ. ದೇಶದ ಆರ್ಥಿಕ ರಾಜಧಾನಿಯಾಗಿರುವುದರಿಂದ ಕಾರ್ಪೋರೇಟ್‌ ಮತ್ತು ವೇತನ ಖಾತೆಗಳ ಸಂಕ್ಯೆ ಹೆಚ್ಚಿವೆ. ಜನರು ಕೆಲಸ ಬದಲಿಸಿದಾಗ ಹಳೆಯ ಖಾತೆಗಳನ್ನು ಹಾಗೆಯೇ ಬಿಡುವುದರಿಂದ ಇಲ್ಲ ಅತಿಹೆಚ್ಚು ಹಣ ಜಮೆಯಾಗಿದೆ. ಡಿಇಎಎಫ್‌ ನಿಧಿಗೆ ವರ್ಗಾವಣೆಯಾಗಿದ್ದರೂ ಅಸಲು ಪಡೆಯಲು ಬ್ಯಾಂಕ್‌ಗೆ ಹೋದಾಗ ಅನ್ವಯವಾಗುವ ಬಡ್ಡಿಯನ್ನು ನೀಡಲಾಗುತ್ತದೆ.

ದೇಶದಲ್ಲಿ 26 ಕೋಟಿಗಿಂತ ಹೆಚ್ಚಿನ ಖಾತೆ ನಿಷ್ಕ್ರಿಯ

ಆರ್‌ಬಿಐ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 26 ಕೋಟಿಗಿಂತ ಹೆಚ್ಚಿನ ಖಾತೆಗಳಲ್ಲಿ 78 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತವು ವಾರಸುದಾರರಿಲ್ಲದೆ ಬಾಕಿ ಉಳಿದಿದೆ. ಇವು ಕಳೆದ 10 ವರ್ಷಗಳಿಂದ ಯಾವುದೇ ವ್ಯವಹಾರ ನಡೆಯದ ಖಾತೆಗಳಾಗಿವೆ. ರಾಜ್ಯವಾರು ಅಂಕಿಅಂಶಗಳನ್ನು ಗಮನಿಸಿದಾಗ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಕರ್ನಾಟಕವು ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ 3,461 ಕೋಟಿ ರೂ. ವಾರಸುದಾರರಿಗಾಗಿ ಕಾಯುತ್ತಿವೆ. ಕನ್ನಡಿಗರು ಉಳಿತಾಯದ ಮನೋಭಾವ ಹೊಂದಿದ್ದರೂ, ಹೂಡಿಕೆಯ ನಿರ್ವಹಣೆಯಲ್ಲಿ ಎಡವುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 78,213 ಕೋಟಿ ರೂ. ವಾರಸುದಾರರಿಲ್ಲದೆ ಉಳಿದುಕೊಂಡಿದೆ. 2023ರ ಮಾರ್ಚ್‌ನಲ್ಲಿ 42,270 ಕೋಟಿ ರೂ. ಇತ್ತು. ಒಂದು ವರ್ಷದಲ್ಲಿ ಶೇ.26ರಷ್ಟು ಹೆಚ್ಚಳ ಕಂಡುಬಂದಿದೆ. 26 ಕೋಟಿಗಿಂತ ಹೆಚ್ಚು ಖಾತೆಗಳು 10 ವರ್ಷಗಳಿಂದ ಯಾವುದೇ ವ್ಯವಹಾರ ಇಲ್ಲದೆ ನಿಷ್ಕ್ರಿಯವಾಗಿವೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ಅಧಿಕ ಮೊತ್ತ ವಾರಸುದಾರಿಲ್ಲದ ಹಣ ಇದೆ. ನಂತರದ ಸ್ಥಾನದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಇವೆ ಎನ್ನಲಾಗಿದೆ.

ಹಣ ನಿಷ್ಕ್ರಿಯವಾಗಲು ಪ್ರಮುಖ ಕಾರಣಗಳೇನು?

ಬ್ಯಾಂಕ್ ಖಾತೆಗಳಲ್ಲಿ ಹಣವಿದ್ದೂ ಅವು ಹತ್ತು ವರ್ಷಗಳ ಕಾಲ ಬಳಕೆಯಾಗುವುದಿಲ್ಲ ಎಂಬುದಕ್ಕೆ ಹಲವಾರು ತಾಂತ್ರಿಕ ಮತ್ತು ಸಾಮಾಜಿಕ ಕಾರಣಗಳಿವೆ. ಇಂದಿನ ಕಾರ್ಪೊರೇಟ್ ಯುಗದಲ್ಲಿ ಜನರು ಕೆಲಸ ಬದಲಿಸಿದಾಗ ಹಳೆಯ ಬ್ಯಾಂಕ್ ಖಾತೆಗಳನ್ನು ಹಾಗೆಯೇ ಬಿಟ್ಟುಬಿಡುತ್ತಾರೆ. ಅದರಲ್ಲಿರುವ ಸಣ್ಣ ಮೊತ್ತದ ಹಣದ ಬಗ್ಗೆ ಅಸಡ್ಡೆ ತೋರುವುದು ಕಾಲಕ್ರಮೇಣ ಅದು ದೊಡ್ಡ ಮೊತ್ತವಾಗಿ ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ. ಖಾತೆದಾರರು ಮರಣ ಹೊಂದಿದಾಗ, ಅವರ ಖಾತೆಯಲ್ಲಿರುವ ಹಣದ ಬಗ್ಗೆ ಕುಟುಂಬದವರಿಗೆ ಮಾಹಿತಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಅನೇಕ ಹಳೆಯ ಖಾತೆಗಳಲ್ಲಿ ನಾಮಿನಿ ಹೆಸರೇ ಇರುವುದಿಲ್ಲ ಅಥವಾ ಇದ್ದರೂ ಅವರ ವಿಳಾಸ ಬದಲಾಗಿರುತ್ತದೆ. ಜನರು ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋದಾಗ ಹಳೆಯ ಬ್ಯಾಂಕ್ ಖಾತೆಗಳನ್ನು ವರ್ಗಾಯಿಸಿಕೊಳ್ಳುವುದಿಲ್ಲ ಅಥವಾ ಮುಚ್ಚುವುದಿಲ್ಲ. ಕಾಲಾನಂತರದಲ್ಲಿ ಪಾಸ್‌ಬುಕ್ ಅಥವಾ ದಾಖಲೆಗಳು ಕಳೆದುಹೋದಾಗ ಆ ಹಣದ ಸಂಪರ್ಕವೇ ಕಡಿತಗೊಳ್ಳುತ್ತದೆ. ಹಲವು ಖಾತೆಗಳ ನಿರ್ವಹಣೆ: ಒಬ್ಬನೇ ವ್ಯಕ್ತಿ ಸೌಲಭ್ಯಗಳಿಗಾಗಿ ಅಥವಾ ಸಾಲದ ಉದ್ದೇಶಕ್ಕಾಗಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುತ್ತಾನೆ. ಎಲ್ಲಾ ಖಾತೆಗಳನ್ನು ಸಕ್ರಿಯವಾಗಿಡುವುದು ಸಾಧ್ಯವಾಗದೆ ಕೆಲವು ಖಾತೆಗಳು ಮೂಲೆಗುಂಪಾಗುತ್ತವೆ. ಗ್ರಾಮೀಣ ಭಾಗದಲ್ಲಿ ಅನೇಕರು ಖಾತೆ ತೆರೆದು ಹಣ ಇಟ್ಟಿರುತ್ತಾರೆ, ಆದರೆ ತಂತ್ರಜ್ಞಾನದ ಬದಲಾವಣೆ (ಉದಾಹರಣೆಗೆ ಕೆವೈಸಿ ನವೀಕರಣ) ಮತ್ತು ಬ್ಯಾಂಕ್‌ಗಳ ವಿಲೀನದಿಂದಾಗಿ ತಮ್ಮ ಹಣವನ್ನು ಹೇಗೆ ಪಡೆಯಬೇಕು ಎಂಬುದು ತಿಳಿಯದೆ ಸುಮ್ಮನಾಗುತ್ತಾರೆ.

ಸಾವಿರಾರು ಕೋಟಿ ರೂಪಾಯಿಗಳು ಹೀಗೆ ನಿಷ್ಕ್ರಿಯವಾಗಿರುವುದು ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿದೆ. ಈ ಹಣವು ಚಲಾವಣೆಯಲ್ಲಿದ್ದರೆ ಉತ್ಪಾದಕ ಕೆಲಸಗಳಿಗೆ ಅಥವಾ ಸಾಲ ನೀಡಲು ಬಳಕೆಯಾಗುತ್ತಿತ್ತು. ಹಣವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದರೂ ಅದು "ಡೆಡ್ ಕ್ಯಾಪಿಟಲ್" ಆಗಿ ಉಳಿಯುವುದು ಆರ್ಥಿಕ ಶಿಸ್ತಿನ ಕೊರತೆಗೆ ಕಾರಣವಾಗಲಿದೆ ಎನ್ನಲಾಗಿದೆ.

ವಾರಸುದಾರರು ಹಣವನ್ನು ಪಡೆಯುವುದು ಹೇಗೆ?

ಆರ್‌ಬಿಐ ಗ್ರಾಹಕರ ಅನುಕೂಲಕ್ಕಾಗಿ 'ಉದ್ಗಮ್' (udgam.rbi.org.in) ಎಂಬ ಕೇಂದ್ರೀಕೃತ ಪೋರ್ಟಲ್ ಅನ್ನು ಪರಿಚಯಿಸಿದೆ. ಗ್ರಾಹಕರು ಈ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಹೆಸರು, ಪ್ಯಾನ್ ಸಂಖ್ಯೆ ಅಥವಾ ಜನ್ಮ ದಿನಾಂಕದ ಮೂಲಕ ನಿಷ್ಕ್ರಿಯ ಖಾತೆಗಳನ್ನು ಪತ್ತೆಹಚ್ಚಬಹುದು. ಒಮ್ಮೆ ಖಾತೆ ಪತ್ತೆಯಾದ ನಂತರ, ಸಂಬಂಧಪಟ್ಟ ಬ್ಯಾಂಕ್‌ಗೆ ಕೆವೈಸಿ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಪಡೆಯಬಹುದಾಗಿದೆ.

Read More
Next Story