
UG CET: ನೋಂದಣಿ ಸಂಖ್ಯೆ ಜೊತೆ ಅಂಕ ದಾಖಲಿಸಲು ಲಿಂಕ್ ಬಿಡುಗಡೆ ಮಾಡಿದ ಕೆಇಎ
ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣದಿಂದಾಗಿ ಸಿಇಟಿ 2025 ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳು ಸೋಮವಾರದಿಂದ(ಮೇ26) ಕೆಇಎ ಲಿಂಕ್ ಮೂಲಕ ನೋಂದಣಿ ಸಂಖ್ಯೆ ದಾಖಲಿಸಿ ಅಂಕಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 24ರಂದು ಯುಜಿಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪ್ರಾಧಿಕಾರ ಬಿಡುಗಡೆ ಮಾಡಿರುವ ಲಿಂಕ್ ಮೂಲಕ ದಾಖಲಿಸಬಹುದು ಎಂದು ಕೆಇಎ ತಿಳಿಸಿದೆ.
ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣದಿಂದಾಗಿ ಕೆಲ ವಿದ್ಯಾರ್ಥಿಗಳ ಸಿಇಟಿ-2025 ಫಲಿತಾಂಶ ಪ್ರಕಟಗೊಂಡಿಲ್ಲ. ಅಂತಹ ವಿದ್ಯಾರ್ಥಿಗಳು ಸೋಮವಾರದಿಂದ (ಮೇ26) ಈ ಕೆಳಗಿನ ಲಿಂಕ್ (https://cetonline.karnataka.gov.in/ugcetmarksentry2025/Forms/loginpage.aspx ) ಮೂಲಕ ನೋಂದಣಿ ಸಂಖ್ಯೆ ದಾಖಲಿಸಿ ಅಂಕಪಟ್ಟಿ ಅಪ್‌ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಪ್ರಾಧಿಕಾರದಿಂದ ಧೃಡಿಕರಿಸಿದ ನಂತರ ಗುರುವಾರ (ಮೇ 29) ರಂದು ಸ್ಪಾಟ್ ರ್ಯಾಂಕ್ ನೀಡಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ಕೆಇಎ ಬಳಿ ಬರುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 3.30 ಲಕ್ಷ ವಿದ್ಯಾರ್ಥಿಗಳ ಪೈಕಿ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2,75,677 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಯುಜಿ ಸಿಇಟಿ ಪರೀಕ್ಷೆಯನ್ನು ಈ ಬಾರಿ ಹೆಚ್ಚು ಪಾರದರ್ಶಕತೆಯಿಂದ ನಡೆದಿತ್ತು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ವೆಬ್ ಕಾಸ್ಟಿಂಗ್ ಮೂಲಕ ಯಾವುದೇ ಅಕ್ರಮ ನಡೆಯದಂತೆ ಒತ್ತು ನೀಡಲಾಗಿತ್ತು. ವಿದ್ಯಾರ್ಥಿಗಳ ಫೇಸ್ ರಿಕಗ್ನಿಷನ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿತ್ತು. ಸಿಇಟಿ ಉತ್ತರ ಪತ್ರಿಕೆಗಳಲ್ಲಿ ಪಾರದರ್ಶಕತೆ ಕಾಯ್ತುಕೊಳ್ಳಲು 11.67 ಲಕ್ಷ ಓಎಂಆರ್ ಶೀಟ್‌ಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿತ್ತು.