
ಸಾಂದರ್ಭಿಕ ಚಿತ್ರ
ಉಡುಪಿಯಲ್ಲಿ ಆಘಾತಕಾರಿ ಘಟನೆ : ಗಂಡನಿಗೆ ಅರೆಸ್ಟ್ ವಾರಂಟ್, ಹೆದರಿದ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆ
ಸುಶ್ಮಿತಾ ತನ್ನ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಒಂದು ವೇಳೆ ಗಂಡ ಬಂಧನಕ್ಕೊಳಗಾದರೆ ತನಗೆ ಯಾರೂ ಆಸರೆಯಿಲ್ಲ ಎಂಬ ಹತಾಶೆಯಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗಂಡನ ಮೇಲಿದ್ದ ಹಳೆಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧನ ವಾರಂಟ್‌ನೊಂದಿಗೆ ಮನೆಗೆ ಬಂದಿದ್ದಕ್ಕೆ ಹೆದರಿದ ಮಹಿಳೆಯೊಬ್ಬರು, ತನ್ನ ಒಂದೂವರೆ ವರ್ಷದ ಹಸುಗೂಸನ್ನು ನೇಣು ಬಿಗಿದು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಆರೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸುಶ್ಮಿತಾ (35) ಮತ್ತು ಅವರ ಮಗು ಶ್ರೇಷ್ಠ (1.5) ಮೃತ ದುರ್ದೈವಿಗಳು.
ಸುಶ್ಮಿತಾ ಅವರ ಪತಿ ಸುಭಾಶ್ ವಿರುದ್ಧ 2009ರಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ, ಪೊಲೀಸರು ಶನಿವಾರ ಮತ್ತು ಸೋಮವಾರ ಸುಭಾಶ್‌ನನ್ನು ಬಂಧಿಸಲು ಅವರ ಮನೆಗೆ ಬಂದಿದ್ದರು. ಆದರೆ ಎರಡೂ ಬಾರಿಯೂ ಸುಭಾಶ್ ಮನೆಯಲ್ಲಿರಲಿಲ್ಲ. ಸೋಮವಾರ, ಜಾಮೀನು ಪಡೆಯುವ ಸಲುವಾಗಿ ವಕೀಲರನ್ನು ಸಂಪರ್ಕಿಸಲು ಸುಭಾಶ್ ಬೆಂಗಳೂರಿಗೆ ತೆರಳಿದ್ದರು.ಪೊಲೀಸರು ಮನೆಗೆ ಬಂದು ಹೋಗುತ್ತಿದ್ದರಿಂದ ತೀವ್ರ ಆತಂಕಕ್ಕೆ ಒಳಗಾದ ಸುಶ್ಮಿತಾ, ತನ್ನ ಪತಿಯನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ ಈ ದುರಂತದ ನಿರ್ಧಾರಕ್ಕೆ ಬಂದಿದ್ದಾರೆ.
ಸಂಬಂಧಿಕರಿಗೆ ಕರೆ
ಪೊಲೀಸರು ಬಂದು ಹೋದ ನಂತರ, ಸುಶ್ಮಿತಾ ಕುಂದಾಪುರದಲ್ಲಿದ್ದ ತನ್ನ ಸಂಬಂಧಿ ಅನುಶ್ರೀ ಎಂಬುವರಿಗೆ ಕರೆ ಮಾಡಿ, "ಪೊಲೀಸರು ಗಂಡನ ಮೇಲೆ ಅರೆಸ್ಟ್ ವಾರಂಟ್ ಇದೆ ಎಂದು ಹೇಳಿದ್ದಾರೆ, ನನಗೆ ತುಂಬಾ ಭಯವಾಗುತ್ತಿದೆ," ಎಂದು ಹೇಳಿಕೊಂಡಿದ್ದರು. ಆಗ ಅನುಶ್ರೀ, ಧೈರ್ಯ ಹೇಳಿ, ವಕೀಲರು ಮತ್ತು ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು.
ಮಧ್ಯಾಹ್ನದ ನಂತರ ಸುಶ್ಮಿತಾ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ಅನುಶ್ರೀ, ಸ್ಥಳೀಯರೊಬ್ಬರಿಗೆ ಮನೆಗೆ ಹೋಗಿ ನೋಡಲು ತಿಳಿಸಿದ್ದಾರೆ. ಅವರು ಹೋಗಿ ನೋಡಿದಾಗ ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಕಿಟಕಿಯಿಂದ ನೋಡಿದಾಗ ತಾಯಿ-ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಡೆತ್ ನೋಟ್ ಪತ್ತೆ
ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, "ನನ್ನ ಸಾವಿಗೆ ನಾನೇ ಕಾರಣ" ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುಭಾಶ್ ಮತ್ತು ಸುಶ್ಮಿತಾ ಪ್ರೀತಿಸಿ ಮದುವೆಯಾಗಿದ್ದು, ಸುಶ್ಮಿತಾ ತನ್ನ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಒಂದು ವೇಳೆ ಗಂಡ ಬಂಧನಕ್ಕೊಳಗಾದರೆ ತನಗೆ ಯಾರೂ ಆಸರೆಯಿಲ್ಲ ಎಂಬ ಹತಾಶೆಯಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.