ಉಡುಪಿ ಕಲುಷಿತ ನೀರು ಪ್ರಕರಣ | 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ
x
ಕಲುಷಿತ ನೀರು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಉಡುಪಿ ಕಲುಷಿತ ನೀರು ಪ್ರಕರಣ | 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ನೀರನ್ನು ಕುದಿಸಿ ಕುಡಿದವರು ಮಾತ್ರ ಕಾಯಿಲೆಯಿಂದ ಬಚಾವಾಗಿದ್ದು, ಕಲುಷಿತ ನೀರಿನಿಂದಾಗಿಯೇ ಕಾಯಿಲೆಗಳು ಶುರುವಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ ಎಂದು ತಿಳಿದು ಬಂದಿದೆ.


Click the Play button to hear this message in audio format

ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ನಿರ್ಲಕ್ಷದಿಂದಾಗಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಕಳೆದ ಒಂದು ವಾರದಿಂದ ಮರುಕಳಿಸುತ್ತಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರದಂತೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮುನ್ನೆಚ್ಚರಿಕೆ ವಹಿಸಿದ್ದಾಗ್ಯೂ ಸ್ಥಳೀಯರ ಆಕ್ರೋಶದಿಂದ ಪ್ರಕರಣ ಬಯಲಾಗಿದೆ. ಕಲುಷಿತ ನೀರು ಕುಡಿದ ಗ್ರಾಮಸ್ಥರ ಪೈಕಿ ಕರ್ಕಿಕಳಿ ಮತ್ತು ಕಾಸನಾಡಿ ಪ್ರದೇಶದ ವಾರ್ಡ್ 6 ಮತ್ತು 7ರಲ್ಲಿ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೀರನ್ನು ಕುದಿಸಿ ಕುಡಿದವರು ಮಾತ್ರ ಕಾಯಿಲೆಯಿಂದ ಬಚಾವಾಗಿದ್ದು, ಕಲುಷಿತ ನೀರಿನಿಂದಾಗಿಯೇ ಕಾಯಿಲೆಗಳು ಶುರುವಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ ಎಂದು ತಿಳಿದು ಬಂದಿದೆ. 6 ಮತ್ತು 7ನೇ ವಾರ್ಡ್​ನ ಪ್ರತಿ ಮನೆಯಲ್ಲೂ 3 ಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿಯಿಂದ ಬಳಲುತ್ತಿದ್ದು, 80 ವರ್ಷದ ವಯೋವೃದ್ಧರಿಗೆ ರಕ್ತಭೇದಿಯಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ನೂರಾರು ಜನ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸನಾಡಿಯ ಬೃಹತ್ ನೀರಿನ ಟ್ಯಾಂಕಿನಿಂದ ಕಾಸನಾಡಿ ಮತ್ತು ಕರ್ಕಿಕಳಿ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಳೆದ ಆರೇಳು ವರ್ಷಗಳಿಂದ ಟ್ಯಾಂಕ್ ಸ್ವಚ್ಚತೆ ಮಾಡಿಲ್ಲದೇ ಇರುವುದು ಮತ್ತು ನೀರು ಸರಬರಾಜಿನ ಪೈಪುಗಳು ಒಡೆದು ನೀರು ಸೋರುತ್ತಿದ್ದು, ಕೆಲವು ಕಡೆ ಒಳಚರಂಡಿ ಪೈಪ್ ಲೈನ್ ಮತ್ತು ನೀರಿನ ಪೈಪ್ ಲೈನ್ ಒಡೆದು ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ.

Read More
Next Story