
14 ಮಂದಿಯ ತಂಡ ಸಮುದ್ರ ವಿಹಾರಕ್ಕೆ ತೆರಳಿದ್ದಾಗ, ಹಂಗಾರಕಟ್ಟೆ ಬಳಿ ನದಿ-ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಪಲ್ಟಿಯಾಗಿದೆ.
ಉಡುಪಿ| ಸಮುದ್ರ ವಿಹಾರದ ವೇಳೆ ದೋಣಿ ಪಲ್ಟಿ; ಇಬ್ಬರು ಪ್ರವಾಸಿಗರ ದುರ್ಮರಣ
ಉಡುಪಿಯ ಮಲ್ಪೆ ಸಮೀಪದ ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮೈಸೂರು ಮೂಲದ ಯುವಕ-ಯುವತಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೋಡಿಬೆಂಗ್ರೆ ಬೀಚ್‌ನಲ್ಲಿ ಸೋಮವಾರ ಮಧ್ಯಾಹ್ನ ದೋಣಿ ದುರಂತ ಸಂಭವಿಸಿ ಮೈಸೂರು ಮೂಲದ ಇಬ್ಬರು ಯುವ ಪ್ರವಾಸಿಗರು ಮೃತಪಟ್ಟಿದ್ದಾರೆ. ಮೃತರನ್ನು ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರುತಿಸಲಾಗಿದೆ.
ಮೈಸೂರಿನ ಸರಸ್ವತಿಪುರಂ ಮೂಲದ ಕಾಲ್ ಸೆಂಟರ್ ಉದ್ಯೋಗಿಗಳ ಒಟ್ಟು 14 ಮಂದಿಯ ತಂಡವು ಉಡುಪಿಗೆ ಪ್ರವಾಸಕ್ಕೆ ಬಂದಿತ್ತು. ಈ ತಂಡವು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿ ಮೂಲಕ ಸಮುದ್ರ ವಿಹಾರಕ್ಕೆ ತೆರಳಿತ್ತು. ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಸಮೀಪ ನದಿ ಮತ್ತು ಸಮುದ್ರ ಸಂಗಮವಾಗುವ ಸ್ಥಳದಲ್ಲಿ ದೋಣಿಯು ಆಕಸ್ಮಿಕವಾಗಿ ಪಲ್ಟಿಯಾಗಿದೆ.
ದೋಣಿಯಲ್ಲಿದ್ದ 14 ಮಂದಿಯೂ ಸಮುದ್ರಕ್ಕೆ ಬಿದ್ದಿದ್ದು, ಕೇವಲ ಕೆಲವರು ಮಾತ್ರ ಲೈಫ್‌ಜಾಕೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಇತರ ದೋಣಿಗಳ ಸಿಬ್ಬಂದಿ ನೀರಿಗೆ ಬಿದ್ದವರನ್ನು ರಕ್ಷಿಸಿ ತೀರಕ್ಕೆ ಕರೆತಂದಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣವೇ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶಂಕರಪ್ಪ ಮತ್ತು ಸಿಂಧು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗಂಭೀರವಾಗಿ ಅಸ್ವಸ್ಥಗೊಂಡಿರುವ ದೀಶಾ (26) ಅವರ ಸ್ಥಿತಿ ಇನ್ನು ಕೂಡ ಚಿಂತಾಜನಕವಾಗಿದ್ದು, ಧರ್ಮರಾಜ (26) ಎಂಬುವವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

