ಉಡುಪಿಯ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಬರ್ಬರ ಹತ್ಯೆ, ಹಳೆ ದ್ವೇಷದ ಶಂಕೆ
x

ಉಡುಪಿಯ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಬರ್ಬರ ಹತ್ಯೆ, ಹಳೆ ದ್ವೇಷದ ಶಂಕೆ

ಸೈಫುದ್ದೀನ್ ಅವರು ಈ ಹಿಂದೆ ರೌಡಿಶೀಟರ್ ಆಗಿದ್ದರು ಎಂದು ತಿಳಿದುಬಂದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಉಡುಪಿ ನಗರದಲ್ಲಿ ಸಂಚರಿಸುವ 'ಎಕೆಎಂಎಸ್' ಬಸ್ ಸಂಸ್ಥೆಯ ಮಾಲೀಕ ಮತ್ತು ಉದ್ಯಮಿ ಸೈಫುದ್ದೀನ್ (42) ಅವರನ್ನು, ದುಷ್ಕರ್ಮಿಗಳ ತಂಡವೊಂದು ಶನಿವಾರ ಹಾಡಹಗಲೇ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಸಾಲ್ಮರ ಎಂಬಲ್ಲಿ ನಡೆದಿದೆ.

ಆತ್ರಾಡಿ ನಿವಾಸಿಯಾಗಿದ್ದ ಸೈಫುದ್ದೀನ್, ಇತ್ತೀಚೆಗೆ ಕೊಡವೂರಿನ ಸಾಲ್ಮರದಲ್ಲಿ ಹೊಸ ಮನೆ ಖರೀದಿಸಿದ್ದರು. ಶನಿವಾರ ಮಧ್ಯಾಹ್ನ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ, ಕಾರಿನಲ್ಲಿ ಬಂದ ಮೂವರ ತಂಡವು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕೊಲೆ ಮಾಡಿ ಪರಾರಿಯಾಗಿದೆ.

ಹತ್ಯೆಗೆ ಹಳೆಯ ದ್ವೇಷವೇ ಕಾರಣ?

ಸೈಫುದ್ದೀನ್ ಅವರು ಈ ಹಿಂದೆ ರೌಡಿಶೀಟರ್ ಆಗಿದ್ದರು ಎಂದು ತಿಳಿದುಬಂದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ, ಅವರದೇ ಬಸ್‌ನ ಚಾಲಕರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ, ಆದರೆ ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ.

ಪೊಲೀಸ್ ತನಿಖೆ ಚುರುಕು

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮತ್ತು ಹೆಚ್ಚುವರಿ ಎಸ್ಪಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. "ಕೃತ್ಯದಲ್ಲಿ ಮೂವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ನಾಕಾಬಂದಿ ಮಾಡಿ ತಪಾಸಣೆ ಚುರುಕುಗೊಳಿಸಲಾಗಿದೆ," ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಈ ಭೀಕರ ಹತ್ಯೆ ಉಡುಪಿ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Read More
Next Story