
Type 2 Sugar | ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ; ಮಾಹಿತಿ ಫಲಕ ಹಾಕಲು ಶಾಲೆಗಳಿಗೆ ಸಿಬಿಎಸ್ಇ ಸೂಚನೆ
ಕಳೆದ ಒಂದು ದಶಕದಲ್ಲಿ ಶಾಲಾ ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಮಂಡಳಿಯು ತನ್ನ ಅಧೀನದ ಶಾಲೆಗಳಲ್ಲಿ ಶುಗರ್ ಬೋರ್ಡ್ ಹಾಕಲು ಮೇ 14 ರಂದು ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಲ್ಲಿ ಟೈಪ್ 2 ಮಧುಮೇಹ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರೀಯ ಪಠ್ಯ ಕ್ರಮದ ಎಲ್ಲಾ ಶಾಲೆಗಳಲ್ಲಿ ಶುಗರ್ ಬೋರ್ಡ್( ಸಕ್ಕರೆ ಬಳಕೆಯ ಮಾಹಿತಿ ಫಲಕ ) ಸ್ಥಾಪಿಸುವಂತೆ ಸಿಬಿಎಸ್ಇ ಆದೇಶಿಸಿದೆ.
ಶಾಲಾ ಪರಿಸರದಲ್ಲಿ ಸಿಹಿ ತಿನಿಸು, ಪಾನೀಯ, ಕುರುಕಲು ತಿಂಡಿ ಸುಲಭವಾಗಿ ಸಿಗಳಿದ್ದು, ಇಂತಹ ಪದಾರ್ಥಗಳ ಸೇವನೆಯಿಂದ ಟೈಪ್ 2 ಮಧುಮೇಹ ಕಾಣಿಸಿಕೊಳ್ಳಲಿದೆ. ಅಲ್ಲದೇ ಮಕ್ಕಳಲ್ಲಿ ಬೊಜ್ಜು, ಹಲ್ಲಿನ ಸಮಸ್ಯೆ ಹಾಗೂ ಪಚನ ಕ್ರಿಯೆಯ ಅಸ್ವಸ್ಥತೆಗೂ ಕಾರಣವಾಗಿ, ಮಕ್ಕಳ ದೀರ್ಘಾವಧಿಯ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಲಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿ ಶಾಲೆಗಳಲ್ಲಿ ಸಕ್ಕರೆಯಿಂದ ಆಗುವ ಅನಾನುಕೂಲಗಳ ಕುರಿತ ಮಾಹಿತಿ ಫಲಕ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಸಿಬಿಎಸ್ಇ ಹೇಳಿದೆ.
ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುವ ಟೈಪ್ 2 ಸಕ್ಕರೆ ಕಾಯಿಲೆ ಕಳೆದ ಒಂದು ದಶಕದಲ್ಲಿ ಶಾಲಾ ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಮಂಡಳಿಯು ತನ್ನ ಅಧೀನದ ಶಾಲೆಗಳಲ್ಲಿ ಶುಗರ್ ಬೋರ್ಡ್ ಹಾಕಲು ಮೇ 14 ರಂದು ಆದೇಶ ಹೊರಡಿಸಿದೆ. ಹಾಗಾದರೆ ಟೈಪ್ 2 ಮಧುಮೇಹ ಅಂದರೇನು, ಅದರ ಗುಣ ಲಕ್ಷಣಗಳೇನು, ನಿಯಂತ್ರಣ ಹೇಗೆ, ಇದು ಅನುವಂಶಿಕವೇ ಇತ್ಯಾದಿ ಮಾಹಿತಿಗಳ ವರದಿ ಇಲ್ಲಿದೆ.
ಟೈಪ್ 2 ಮಧುಮೇಹ ಅಂದರೆ ಏನು?
ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆ ಆಗುವುದಿಲ್ಲ. ಆದರೂ ಅದನ್ನು ಸರಿಯಾಗಿ ಬಳಸುವುದಿಲ್ಲ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದೇ ಟೈಪ್ 2 ಮಧುಮೇಹ. ಇದು ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಕಳಪೆ ಆಹಾರ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಅಧಿಕ ತೂಕದಿಂದ ಟೈಪ್ 2 ಮಧುಮೇಹ ಬರಲಿದೆ.
ಜೀವನಶೈಲಿ ಬದಲಾವಣೆ, ನಿಯಮಿತ ಔಷಧ ಸೇವನೆ ಹಾಗೂಕೆಲವೊಮ್ಮೆ ಇನ್ಸುಲಿನ್ ತೆಗೆದುಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು.
ಟೈಪ್ 2 ಮಧುಮೇಹದಿಂದ ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ ಮತ್ತು ಪಾರ್ಶ್ವವಾಯು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಟೈಪ್ 2 ಮಧುಮೇಹವು (T2D) ದೀರ್ಘಕಾಲದ ಸ್ಥಿತಿಗೂ ಮಾರ್ಪಡುವ ಆತಂಕ ಇರುತ್ತದೆ. ಅರೋಗ್ಯವಂತರ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 70 ರಿಂದ 99 ಮಿಲಿಗ್ರಾಂ ಇರುತ್ತದೆ. ಒಂದು ವೇಳೆ ಗ್ಲುಕೋಸ್ ಪ್ರಮಾಣ 126 ಮಿಲಿ ಗ್ರಾಂ ಇದ್ದರೆ ಅದು ಟೈಪ್ 2 ಮಧುಮೇಹ ಆಗಿರುತ್ತದೆ.
ದೇಹದಲ್ಲಿ ಮೇದೋಜಿರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದ ಹಾಗೂ ಇನ್ಸುಲಿನ್ ಸರಿಯಾಗಿ ಬಳಸದ ಕಾರಣ ಟೈಪ್ 2 ಮಧುಮೇಹ ಬರಲಿದೆ.
ಶಾಲಾ ಮಕ್ಕಳಲ್ಲೇ ಹೆಚ್ಚು ಏಕೆ?
ಟೈಪ್ 2 ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ಆದರೆ, ಕಳೆದ ಒಂದು ದಶಕದಿಂದ ಶಾಲಾ ಮಕ್ಕಳಲ್ಲಿ ಟೈಪ್ 2 ಮಧುಮೇಹ ಹೆಚ್ಚು ಕಂಡುಬರುತ್ತಿದೆ. ಇದಕ್ಕೆ ಕಾರಣ ಶಾಲಾ ಪರಿಸರದಲ್ಲಿ ಸಿಹಿ ತಿಂಡಿಗಳು, ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳು ಸುಲಭವಾಗಿ ಸಿಗುವುದರಿಂದ ಈ ಅಪಾಯ ಹೆಚ್ಚಾಗಿದೆ. 4 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ದೈನಂದಿನ ಕ್ಯಾಲೊರಿ ಸೇವನೆ ಶೇ 13 ಹಾಗೂ 11 ರಿಂದ 18 ವರ್ಷ ವಯಸ್ಸಿನವರಿಗೆ ಶೇ 15 ರಷ್ಟು ಆಗುತ್ತಿದೆ. ಇದು ಅರೋಗ್ಯವಂತ ಮಕ್ಕಳಿಗೆ ಶಿಫಾರಸು ಮಾಡಿರುವ ಶೇ 5 ರ ಮಿತಿ ದಾಟಿದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಮಕ್ಕಳಲ್ಲಿ ಟೈಪ್ 2 ಮಧುಮೇಹ ವ್ಯಾಪಾಕವಾಗಿ ಕಾಣಿಸಿಕೊಳ್ಳುತ್ತಿದೆ.
ಸಿಬಿಎಸ್ಇ ನಿರ್ದೇಶನ ಏನು?
ಶಾಲೆಗಳಲ್ಲಿ ಶುಗರ್ ಬೋರ್ಡ್ ಸ್ಥಾಪಿಸಿ ಅಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಮಾಹಿತಿ ಪ್ರದರ್ಶಿಸಬೇಕು.
ಶಿಫಾರಸು ಮಾಡಿದಷ್ಟು ಸಕ್ಕರೆ ಸೇವನೆ, ಜಂಕ್ ಫುಡ್, ತಂಪು ಪಾನೀಯಗಳು, ಇತ್ಯಾದಿ ಅನಾರೋಗ್ಯಕರ ತಿನಿಸುಗಳಿಂದ ಆಗುವ ಪರಿಣಾಮ ತಿಳಿಸಬೇಕು. ಸಕ್ಕರೆ ಸೇವನೆಗೆ ಪರ್ಯಾಯಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು.
ಆಹಾರ ಪದಾರ್ಥಗಳ ಆಯ್ಕೆ, ದೀರ್ಘಾವಧಿಯ ಆರೋಗ್ಯ ಪ್ರಯೋಜನ ಮಾಹಿತಿ ಒದಗಿಸಬೇಕು.
ಸಕ್ಕರೆ ಕುರಿತ ಜಾಗೃತಿ, ವಿಚಾರ ಸಂಕಿರಣ, ಕಾರ್ಯಾಗಾರ ಆಯೋಜಿಸಬೇಕು.
ಸಕ್ಕರೆ ಸೇವನೆಯಿಂದಆಗುವ ದುಷ್ಪರಿಣಾಮಗಳ ಛಾಯಾಚಿತ್ರಗಳ ಸಂಕ್ಷಿಪ್ತ ವರದಿಯನ್ನು ಶಾಲೆಗಳು ಈ ಪಿಡಿ ಎಫ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಬೇಕು.
ಈ ಎಲ್ಲಾ ಅಂಶಗಳನ್ನು 15ನೇ ಜುಲೈ 2025 ರಂದು ಅಥವಾ ಮೊದಲು ಅಪ್‌ಲೋಡ್ ಮಾಡಬೇಕು.
ಟೈಪ್ 2 ಮಧುಮೇಹದ ಲಕ್ಷಣಗಳೇನು?
ಹೆಚ್ಚಿದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ಸಾಮಾನ್ಯಕ್ಕಿಂತ ಹೆಚ್ಚು ಹಸಿವು, ಆಯಾಸ, ಗಾಯಗಳು ನಿಧಾನವಾಗಿ ವಾಸಿಯಾಗುವುದು, ಕೈ ಅಥವಾ ಪಾದಗಳಲ್ಲಿ ಮರಗಟ್ಟುವಿಕೆ ಅನುಭವ, ದೃಷ್ಟಿ ಮಸುಕಾಗುವುದು, ಒಣ ಚರ್ಮ, ತೂಕ ನಷ್ಟ, ಮೂತ್ರನಾಳದ ಸೋಂಕು ಕಂಡು ಬಂದರೆ ಟೈಪ್ 2 ಮದುಮೇಹ ಇರಲಿದೆ.
ಟೈಪ್ 2 ಮಧುಮೇಹ ಆನುವಂಶಿಕವೇ?
ಟೈಪ್ಯ 2 ಮಧುಮೇಹ ಕಾಣಿಸಿಕೊಳ್ಳುವಕಾರಣ ಸಂಕೀರ್ಣವಾಗಿದೆ. ಪೋಷಕರಲ್ಲಿ ಒಬ್ಬರಿಗೆ ಟೈಪ್ 2 ಮಧುಮೇಹ ಇದ್ದರೆ, ಅನುವಂಶಿಕ ವಾಗಿ ಕಾಣಿಸಿಕೊಳ್ಳುವ ಅಪಾಯ ಶೇ 40 ರಷ್ಟುಇರುತ್ತದೆ. ಇಬ್ಬರೂ ಪೋಷಕರಲ್ಲಿ ಟೈಪ್ 2 ಮಧುಮೇಹ ಇದ್ದರೆ ಮಕ್ಕಳಲ್ಲಿ ಅದರ ಅಪಾಯ ಶೇ 70 ಇರಲಿದೆ.
ಸಂಶೋಧನೆಗಳ ಪ್ರಕಾರ ಈ ವಿಧದ ಮದುಮೇಹ ಕ್ಕ್ಕೆ ಇನ್ಸುಲಿನ್ ಪ್ರತಿರೋಧ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ನೇರವಾಗಿ ಪಾತ್ರ ವಹಿಸಬಹುದು. ಇನ್ನು ಕೆಲವರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚಿಸುವ ಮೂಲಕ ಅಪಾಯ ಹೆಚ್ಚಿಸಬಹುದು.
ಮಧುಮೇಹದ ಅಪಾಯವೇನು?
ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅದು ಕಾಲಾನಂತರದಲ್ಲಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದ ಸಕ್ಕರೆ ಮಟ್ಟವು ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುವುದರಿಂದ ಈ ತೊಡಕುಗಳು ಉಂಟಾಗುತ್ತವೆ.
ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಮುಚ್ಚಿಹೋಗಿರುವ ಅಪಧಮನಿಗಳು ಸೇರಿದಂತೆ ಹೃದಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು. ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಮಧುಮೇಹ ಇರುವವರಲ್ಲಿ ಕೈ ಮತ್ತು ಕಾಲುಗಳಲ್ಲಿ ನರ ಹಾನಿ ಅಥವಾ ನರರೋಗ ಸಾಮಾನ್ಯವಾಗಿದೆ. ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು, ಮಧುಮೇಹದಿಂದ ಮಸುಕಾದ ದೃಷ್ಟಿ, ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿಯಂತಹ ಸಮಸ್ಯೆ ಕಾಣಿಸಿಕೊಳ್ಳಲಿದೆ. ಕಳಪೆ ರಕ್ತದ ಹರಿವು ಮತ್ತು ಪಾದಗಳಲ್ಲಿನ ನರಗಳ ಹಾನಿಯು ಸರಿಯಾಗಿ ಗುಣವಾಗದ ಕಡಿತ ಮತ್ತು ಹುಣ್ಣುಗಳಿಗೆ ಕಾರಣವಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಚಿಕಿತ್ಸೆ ನೀಡದಿದ್ದರೆ ಸೋಂಕುಗಳು ಅಂಗಚ್ಛೇದನಕ್ಕೆ ಕಾರಣವಾಗಬಹುದು.
ಮಧುಮೇಹ ಇರುವವರು ಚರ್ಮದ ಸೋಂಕುಗಳಿಗೆ, ವಿಶೇಷವಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಅಧಿಕ ರಕ್ತದ ಸಕ್ಕರೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಸೋಂಕುಗಳು ಬೆಳೆಯಲು ಸುಲಭವಾಗುತ್ತದೆ. ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ, ಇದು ಸ್ಮರಣಶಕ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಧುಮೇಹಕ್ಕೆ ಸರಿಯಾದ ಆರೈಕೆ ಏನು?
ಟೈಪ್ 2 ಮಧುಮೇಹವನ್ನು ನಿರ್ವಹಿಸುವುದು ಹೆಚ್ಚಾಗಿ ಜೀವನಶೈಲಿಯ ಮೇಲೆ ಅವಲಂಬಿತ ಆಗಿರುತ್ತದೆ. ಆಹಾರಕ್ರಮದಲ್ಲಿ ಸುಧಾರಣೆ, ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಕೆಲವು ಸಂದರ್ಭಗಳಲ್ಲಿ, ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡಲು ಔಷಧಗಳನ್ನು ಶಿಫಾರಸು ಮಾಡಬಹುದು. ಈ ಕ್ರಮಗಳ ಹೊರತಾಗಿಯೂ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಅಧಿಕವಾಗಿದ್ದರೆ, ಇನ್ಸುಲಿನ್ ಅಗತ್ಯವಾಗಬಹುದು ಎಂದು ವೈದ್ಯರು ಹೇಳುತ್ತಾರೆ.