
ಸಾಂದರ್ಭಿಕ ಚಿತ್ರ
ಲಿಂಗಸುಗೂರು| ಕಾಲುವೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರ ದುರ್ಮರಣ
ಮೃತರನ್ನು ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ನಿವಾಸಿಗಳಾದ ದೇವಮ್ಮ ದುರುಗಪ್ಪ ಪೂಜಾರಿ (30) ಮತ್ತು ಈರಮ್ಮ ವೆಂಕಟೇಶ್ (40) ಎಂದು ಗುರುತಿಸಲಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿಗೆ ಆನೆಹೊಸೂರು ಗ್ರಾಮದ ಸಮೀಪವಿರುವ ಕಾಲುವೆಯಲ್ಲಿ ಕೈಕಾಲು ತೊಳೆಯಲು ಹೋಗಿ ಇಬ್ಬರು ಮಹಿಳೆಯರು ನೀರು ಪಾಲಾಗಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಮೃತರನ್ನು ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ನಿವಾಸಿಗಳಾದ ದೇವಮ್ಮ ದುರುಗಪ್ಪ ಪೂಜಾರಿ (30) ಮತ್ತು ಈರಮ್ಮ ವೆಂಕಟೇಶ್ (40) ಎಂದು ಗುರುತಿಸಲಾಗಿದೆ. ಈ ಮಹಿಳೆಯರು ಕೃಷಿ ಭೂಮಿಯಲ್ಲಿ ಕೆಲಸ ಮುಗಿಸಿ ತಮ್ಮ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಇರುವ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕೈಕಾಲು ಮತ್ತು ಮುಖ ತೊಳೆಯಲು ಇಳಿದಿದ್ದಾರೆ.
ದೇವಮ್ಮ ಅವರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಿದ ಈರಮ್ಮ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಕಾಲುವೆಯಲ್ಲಿ ಮುಳುಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಲಿಂಗಸುಗೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಳೆದ ಅಕ್ಟೋಬರ್‌ನಲ್ಲಿ ಈ ಹಿಂದೆ ಲಿಂಗಸುಗೂರು ತಾಲೂಕಿನ ದೇವರ ಭೂಪುರ ಗ್ರಾಮದ ಬಳಿ ಇದೇ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಹನುಮಂತಿ (45) ಎಂಬ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಇವರ ಶವ ಸುಮಾರು 14 ಗಂಟೆಗಳ ಕಾರ್ಯಾಚರಣೆಯ ನಂತರ ಪತ್ತೆಯಾಗಿತ್ತು.

