
ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವು
ನೀರಿನ ಮಟ್ಟ ಏರಿದಾಗ ಆನೆಗಳು ಮುಳುಗುವ ಅಪಾಯ ಹೆಚ್ಚಾಗಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಆನೆಪಥವನ್ನು ಗುರುತಿಸುವ ಜತೆಗೆ ಸುರಕ್ಷತಾ ಬೇಲಿ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ) ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಕುನ್ನೂರಿನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಾರೋಬೆಲೆ ಜಲಾಶಯದಲ್ಲಿ ಇಂದು ಬೆಳಿಗ್ಗೆ ಕಾಡಾನೆಗಳ ಕಳೇಬರ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕಾಡಾನೆಗಳು ಹಿನ್ನೀರು ದಾಟುವ ವೇಳೆ ಸತ್ತೆಗೆ(ಕಳೆ) ಸಿಲುಕಿ ಪ್ರಾಣ ಕಳೆದುಕೊಂಡಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆನೆಗಳ ತೂಕ ಮತ್ತು ಹಿನ್ನೀರಿನಲ್ಲಿ ಯತೇಚ್ಛವಾಗಿ ಬೆಳೆದಿರುವ ಕಳೆಯ ಕಾರಣದಿಂದ ಮುಂದಕ್ಕೆ ಹೋಗಲು ಸಾಧ್ಯವಾಗದೇ ಅಲ್ಲಿಯೇ ಒದ್ದಾಡಿ ಪ್ರಾಣ ಕಳೆದುಕೊಂಡಿವೆ ಎನ್ನಲಾಗಿದೆ.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಆನೆಗಳ ಕಳೇಬರವನ್ನು ಹಿನ್ನೀರಿನಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ನಿಖರ ಕಾರಣ ಪತ್ತೆ ಹಚ್ಚಲು ಪಶು ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ವರ್ಷ ಹಿನ್ನೀರಿನ ಸುತ್ತಮುತ್ತ ಆನೆಗಳ ಸಂಚಾರ ಇರುತ್ತದೆ. ನೀರಿನ ಮಟ್ಟ ಏರಿದಾಗ ಆನೆಗಳು ಮುಳುಗುವ ಅಪಾಯ ಹೆಚ್ಚಾಗಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಆನೆಪಥವನ್ನು ಗುರುತಿಸುವ ಜತೆಗೆ ಸುರಕ್ಷತಾ ಬೇಲಿ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮೃತಪಟ್ಟ ಆನೆಗಳ ವಯಸ್ಸು ಮತ್ತು ಲಿಂಗ ಪತ್ತೆ ಕಾರ್ಯ ನಡೆಯುತ್ತಿದೆ. ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಕಾಡಾನೆಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

