Two Karnataka Farmers Take Their Lives Amid Debt Distress
x

ಕಾಲ್ಪನಿಕ ಚಿತ್ರ

ಸಾಲಬಾಧೆಗೆ ಬೇಸತ್ತು ರಾಜ್ಯದಲ್ಲಿ ಇಬ್ಬರು ರೈತರು ಆತ್ಮಹತ್ಯೆ

ರಾಯಚೂರು ಜಿಲ್ಲೆಯ 34 ವರ್ಷದ ರೈತ ಜಲಾಲ್ ನಾಯಕ್ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು 3 ಎಕರೆ 25 ಗುಂಟೆ ಸ್ವಂತ ಜಮೀನಿನ ಜೊತೆಗೆ 26 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು.


ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಸಾಲದ ಹೊರೆ ತಾಳಲಾರದೆ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇಬ್ಬರು ರೈತರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ.

ರಾಯಚೂರಿನಲ್ಲಿ ರೈತ ಜಲಾಲ್ ನಾಯಕ್ ಆತ್ಮಹತ್ಯೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದಲ್ಲಿ 34 ವರ್ಷದ ರೈತ ಜಲಾಲ್ ನಾಯಕ್ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು 3 ಎಕರೆ 25 ಗುಂಟೆ ಸ್ವಂತ ಜಮೀನಿನ ಜೊತೆಗೆ 26 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್‌ನಿಂದ 2 ಲಕ್ಷ ರೂಪಾಯಿ ಹಾಗೂ ಖಾಸಗಿಯಾಗಿ 7 ಲಕ್ಷ ರೂಪಾಯಿ ಸೇರಿ ಒಟ್ಟು 9 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಬೆಳೆ ನಷ್ಟದಿಂದಾಗಿ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದಿದ್ದ ಜಲಾಲ್ ನಾಯಕ್, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕ್ರಿಮಿನಾಶಕ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತರ ಪತ್ನಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿಯಲ್ಲಿ ವೃದ್ಧ ರೈತನ ದುರಂತ ಅಂತ್ಯ

ಮತ್ತೊಂದು ದುರಂತ ಘಟನೆಯಲ್ಲಿ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದ 70 ವರ್ಷದ ವೃದ್ಧ ರೈತ ಮಲ್ಲಪ್ಪ ರಾಮಲಿಂಗಪ್ಪ ಖಂಡಾಳ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಮದಾಪುರ ಸೀಮಾಂತರದಲ್ಲಿ 3 ಎಕರೆ ಜಮೀನು ಹೊಂದಿದ್ದ ಅವರು, ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಖಾಸಗಿ ವ್ಯಕ್ತಿಗಳಿಂದ ಸುಮಾರು 3 ರಿಂದ 4 ಲಕ್ಷ ರೂವರೆಗೆ ಸಾಲ ಮಾಡಿಕೊಂಡಿದ್ದರು. ಸಾಲದ ಚಿಂತೆಯಲ್ಲಿದ್ದ ಅವರು ಮನೆಯಲ್ಲಿ ಯಾರು ಇಲ್ಲದಾಗ ವಿಷ ಸೇವಿಸಿದ್ದಾರೆ. ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಈ ಕುರಿತು ಮೃತರ ಪುತ್ರ ರಾಮಲಿಂಗ ಖಂಡಾಳ ನೀಡಿದ ದೂರಿನನ್ವಯ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story