ಬೆಂಗಳೂರು ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢ
x

ಬೆಂಗಳೂರು ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢ


ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ 49 ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಇಬ್ಬರಿಗೆ ಕಾಲರಾ ಅಂಶ ಇರುವುದು ಪತ್ತೆಯಾಗಿದೆ.

ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಇಲ್ಲಿಯ ಅವ್ಯವಸ್ಥೆ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸದ್ಯ ಹಾಸ್ಟೆಲ್‌ನ ಅಡುಗೆಮನೆ ಬಂದ್ ಮಾಡಲಾಗಿದೆ. ಸದ್ಯ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಊಟ ಕೊಡಲಾಗುತ್ತಿದೆ.

ಸಾಮಾನ್ಯವಾಗಿ ಕಲುಷಿತ ನೀರು ಹಾಗೂ ಆಹಾರದಿಂದ ಹರಡುವ ಕಾಲರಾ ಸಾಂಕ್ರಾಮಿಕ‌, ಬೆಂಗಳೂರಿನ ಇನ್ನಿತರ ಕಡೆಯೂ ಹರಡುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸಂಭಾವ್ಯ ಕಾಲರಾ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿದ್ಯಾರ್ಥಿನಿಯರ ರಕ್ತದ ಪರೀಕ್ಷೆ ವರದಿ ಬಂದಿದ್ದು, ಹೆಚ್ಚಿನ ಖಚಿತತೆಗಾಗಿ ʼಕಲ್ಚರ್ ಟೆಸ್ಟ್‌ʼಗೆ ರಕ್ತದ ಮಾದರಿ ರವಾನಿಸಲಾಗಿದೆ. ಅದರ ವರದಿ ಇನ್ನೆರಡು ದಿನದಲ್ಲಿ ಬರುವ ಸಾಧ್ಯತೆ ಇದೆ. ವರದಿ ಬಂದ ನಂತರ ಕಾಲರಾ ಹೌದು, ಅಥವಾ ಅಲ್ಲ ಎಂಬ ಸ್ಪಷ್ಟನೆ ಸಿಗಲಿದೆ.

ಈ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ʻʻಸುದ್ದಿ ತಿಳಿದ ತಕ್ಷಣ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಲು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದೆ. ಅಲ್ಲಿ ಐಸಿಯು ಹಾಗೂ ಜನರಲ್ ವಾರ್ಡ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ಭೇಟಿಯಾದೆ. ಕೆಲವು ವಿದ್ಯಾರ್ಥಿನಿಯರಿಗೆ ಪ್ರಜ್ಞೆನೇ ಇರಲಿಲ್ಲ. ಇನ್ನು ಕೆಲವು ವಿದ್ಯಾರ್ಥಿನಿಯರು ನಮ್ಮೊಂದಿಗೆ ಮಾತನಾಡುತ್ತಾ ದೂರುಗಳನ್ನು ಹೇಳಿಕೊಂಡಿದ್ದಾರೆʼʼ ಎಂದು ತಿಳಿಸಿದರು.

ʻʻಆ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದ ವಾಟರ್ ಟ್ಯಾಂಕ್ ರಿಪೇರಿಯಲ್ಲಿದ್ದು, ಅದೇ ನೀರನ್ನೇ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಂತೆ. ವಿದ್ಯಾರ್ಥಿನಿಯರ ಕೋಣೆಗಳು ಚಿಕ್ಕಪುಟ್ಟವು ಇವೆ. ಅಲ್ಲಿಯ ಬೆಡ್‌ಗಳಲ್ಲಿ ತಿಗಣೆಗಳಿವೆಯಂತೆ. ಸರಿಯಾದ ವ್ಯವಸ್ಥೆ ಇಲ್ಲ. ಸಧ್ಯ ಅಲ್ಲಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಊಟ ಹೋಗುತ್ತಿದೆ. ಒಟ್ಟಾರೆಯಾಗಿ ಆ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆʼʼ ಎಂದು ತಿಳಿಸಿದರು.

ವಿದ್ಯಾರ್ಥಿನಿಯರ ಆರೋಪಗಳ ಬಗ್ಗೆ ನಾನು ಡಾಕ್ಯುಮೆಂಟ್ ಕೇಳಿದ್ದೇನೆ. ಒಂದು ವಾರದಲ್ಲಿ ವರದಿಯನ್ನು ಕೊಡಬೇಕು ಎಂದು ಹೇಳಿದ್ದೇನೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ಈ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಪ್ರತಿಯೊಂದು ಆಸ್ಪತ್ರೆ ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಸಮಸ್ಯೆ ಬಗ್ಗೆ ತಿಳಿದುಕೊಂಡು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.

ಕಾಲರಾಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ

1) ಆಗಾಗ ಕೈ ತೊಳೆದು ಶುದ್ಧವಾಗಿಟ್ಟುಕೊಳ್ಳಬೇಕು.

2) ಆಹಾರ ಸೇವಿಸುವ ಮುನ್ನ ಕೈ ತೊಳೆಯಬೇಕು.

3) ಶುದ್ಧ ಕುಡಿಯುವ ನೀರು ಬಳಸಬೇಕು.

4) ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಸೋಸಿದ ನೀರು ಬಳಸಿ.

5) ಚರಂಡಿ ನೀರು ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು.

6) ಹೊರಗಿನ ಬೀದಿ ಬದಿ ಆಹಾರ ಸೇವಿಸುವುದರಿಂದ ದೂರವುಳಿಯಿರಿ.

7) ರೆಸ್ಟೋರೆಂಟ್‌ಗಳಲ್ಲಿ ಬಿಸಿ ನೀರು ಕೇಳಿ ಪಡೆಯಿರಿ.

8) ಬೀದಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿ.

9) ಭೇದಿ, ಹೊಟ್ಟೆನೋವು, ಜ್ವರ ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

Read More
Next Story