Two elephants die from electrocution, Minister Khandre orders investigation
x

ತನಿಖೆಗೆ ಆದೇಶಿಸಿರುವ ಈಶ್ವರ್‌ ಖಂಡ್ರೆ

ವಿದ್ಯುತ್‌ ಸ್ಪರ್ಶಿಸಿ ಎರಡು ಆನೆಗಳು ಸಾವು: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ.


Click the Play button to hear this message in audio format

ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ (ನ.3) ವಿದ್ಯುತ್ ಸ್ಪರ್ಶದಿಂದ ಎರಡು ಆನೆಗಳು ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಿ ಐದು ದಿನಗಳೊಳಗೆ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಲೋಪವಿದ್ದಲ್ಲಿ ಶಿಸ್ತು ಕ್ರಮದ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದಾರೆ.

ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸೂಚನೆ ನೀಡಿದ್ದಾರೆ.

ಏನಿದು ಘಟನೆ ?

ಕೃಷಿಭೂಮಿಯಲ್ಲಿ ತುಂಡರಿಸಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಮೃತಪಟ್ಟಿದ್ದವು. ಹಲವು ದಿನಗಳ ಹಿಂದೆ ನೆರೆಯ ದಾಂಡೇಲಿ ಕಾಡಿನಿಂದ ಆಹಾರ ಅರಸಿ ತಾಲ್ಲೂಕಿಗೆ ಬಂದಿದ್ದ 20ರಿಂದ 22 ವರ್ಷ ವಯಸ್ಸಿನ ಮತ್ತು 40 ರಿಂದ 45 ವರ್ಷ ವಯಸ್ಸಿನ ಗಂಡಾನೆಗಳು ಅಸುನೀಗಿದ್ದವು.

ಆನೆಗಳ ಕಳೇಬರ ಪತ್ತೆಯಾದ ಜಮೀನಿನ ಮಾಲೀಕ ಸುಳ್ಳೇಗಾಳಿಯ ಗಣಪತಿ ಗುರವ ಅವರು, ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಹೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

'ಮರಣೋತ್ತರ ಪರೀಕ್ಷೆ ನಂತರ ಇಲಾಖೆ ನಿಯಮದಂತೆ ಆನೆಗಳ ಅಂತ್ಯಕ್ರಿಯೆ ಮಾಡಲಾಗುತ್ತದೆ. ಬೆಳೆ ಸಂರಕ್ಷಣೆ ನೆಪದಲ್ಲಿ ಎರಡು ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ' ಎಂದು ನಾಗರಗಾಳಿ ಎಆರ್‌ಎಫ್‌ಒ ಶಿವಾನಂದ ಮಗದುಮ್ ಹೇಳಿದ್ದರು.

ಆಗಸ್ಟ್‌ ಅಂತ್ಯಕ್ಕೆ 20 ಆನೆಗಳು ಮೃತ

2025ರ ಆಗಸ್ಟ್ ಅಂತ್ಯದವರೆಗೆ ಕರ್ನಾಟಕದಲ್ಲಿ 20 ಕ್ಕಿಂತ ಹೆಚ್ಚು ಆನೆಗಳು ಮೃತಪಟ್ಟಿವೆ. ಇದರಲ್ಲಿ ಕನಿಷ್ಠ ನಾಲ್ಕು ಸಾವುಗಳು ಅಸ್ವಾಭಾವಿಕ ಕಾರಣಗಳಿಂದ ಸಂಭವಿಸಿವೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಸೋಲಾರ್ ಬೇಲಿಗಳಿಂದಲೇ ಶೇ.25.5 ಸಾವು ಸಂಭವಿಸಿವೆ ಎಂದು ಅಧ್ಯಯನಗಳು ತಿಳಿಸಿವೆ.

2024 ರಲ್ಲಿ ರಾಜ್ಯದಲ್ಲಿ ಒಟ್ಟು 109 ಆನೆಗಳು ಮೃತಪಟ್ಟಿದ್ದವು ಎಂದು ವರದಿಯಾಗಿತ್ತು.

Read More
Next Story