
ಸಾಂದರ್ಭಿಕ ಚಿತ್ರ
ನೆಲಮಂಗಲದಲ್ಲಿ ಎರಡು ಹೋರಿಗಳ ಕತ್ತು ಕೊಯ್ದು ಬರ್ಬರ ಹತ್ಯೆ
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -48 ರಿಂದ ಸುಮಾರು ಎರಡು ಕಿ.ಮೀ.ದೂರದಲ್ಲಿ, ಕುಮುದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಮೇಲೆ ಈ ಘಟನೆ ನಡೆದಿದೆ.
ರಾಜ್ಯದ ವಿವಿಧೆಡೆ ಗೋವುಗಳ ಮೇಲೆ ನಡೆಯುತ್ತಿರುವ ಸರಣಿ ಅಮಾನುಷ ಕೃತ್ಯಗಳು ಮುಂದುವರಿದಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲೂ ಇಂತಹದ್ದೇ ಘಟನೆಯೊಂದು ನಡೆದಿದೆ. ಅರಳಸಂದ್ರ ಗ್ರಾಮದ ಬಳಿ ದುಷ್ಕರ್ಮಿಗಳು ಎರಡು ಹಳ್ಳಿಕಾರ್ ಜಾತಿಯ ಹೋರಿಗಳನ್ನು ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ, ಕುಮುದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಮೇಲೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಎರಡು ನಾಟಿ ಹೋರಿಗಳನ್ನು ಸೇತುವೆಯ ನಡುರಸ್ತೆಯಲ್ಲೇ ಕತ್ತು ಕೊಯ್ದು ಎಸೆದು ಹೋಗಿದ್ದಾರೆ.
ಮೃತಪಟ್ಟ ಹೋರಿಗಳ ದೇಹದ ಮೇಲೆ ಬಣ್ಣದಲ್ಲಿ ಸಂಖ್ಯೆಗಳನ್ನು ಬರೆದಿರುವುದು ಪತ್ತೆಯಾಗಿದ್ದು, ಇದು ಉದ್ದೇಶಪೂರ್ವಕ ಕೃತ್ಯ ಎಂಬ ಸಂಶಯವನ್ನು ಬಲಪಡಿಸಿದೆ. ಇತ್ತೀಚೆಗೆ ರಾಜ್ಯದ ಹಲವು ಭಾಗಗಳಲ್ಲಿ ಹಸುಗಳನ್ನು ಕೊಲ್ಲುವುದು, ಅವುಗಳ ಕತ್ತು ಸೀಳುವುದು ಮತ್ತು ಕೆಚ್ಚಲು ಕತ್ತರಿಸುವಂತಹ ಅಮಾನವೀಯ ಘಟನೆಗಳು ವರದಿಯಾಗುತ್ತಿದ್ದು, ಇದೀಗ ನೆಲಮಂಗಲದಲ್ಲಿ ನಡೆದಿರುವ ಈ ದುಷ್ಕೃತ್ಯವು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮತ್ತು ಆತಂಕವನ್ನು ಸೃಷ್ಟಿಸಿದೆ.