ಬಾಣಂತಿಯರ ಸಾವು ಸರಣಿ | ಬೆಂಗಳೂರಿನ ಆಸ್ಪತ್ರೆಯಲ್ಲೂ ಇಬ್ಬರು ಬಾಣಂತಿಯರ ಸಾವು
ಬೆಂಗಳೂರಿನಲ್ಲಿ ಸೋಮವಾರ ಎರಡು ಆಸ್ಪತ್ರೆಗಳಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತ ಬಾಣಂತಿಯರ ಕುಟುಂಬದವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಬಳ್ಳಾರಿ, ಬೆಳಗಾವಿ ಸರಣಿ ಸಾವಿನ ಪ್ರಕರಣಗಳ ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಒಂದೇ ದಿನ ಇಬ್ಬರು ಬಾಣಂತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಸೋಮವಾರ ಎರಡು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತ ಬಾಣಂತಿಯರ ಕುಟುಂಬದವರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಗರ್ಜೆ ಗ್ರಾಮದ ಅನುಷಾ ಬಿ.ಸಿ. (24) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಪಶ್ಚಿಮಬಂಗಾಳ ಮೂಲದ ಬೆಂಗಳೂರಿನ ಕೂಲಿ ಕಾರ್ಮಿಕ ಮಹಿಳೆ ನಿಮಿತಾ (27) ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಅನುಷಾ ಅವರಿಗೆ ಎರಡು ತಿಂಗಳ ಹಿಂದೆ ಸಹಜ ಹೆರಿಗೆಯಾಗಿತ್ತು. ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಪೂರ್ವ ಸ್ಕ್ಯಾನಿಂಗ್ ವರದಿಯಲ್ಲಿ ಕಿಬ್ಬೊಟ್ಟೆಯಲ್ಲಿ ಕಲ್ಲಿದೆ ಎಂದು ಕಂಡುಬಂದಿದ್ದರಿಂದ, ಹೆರಿಗೆಯಾಗಿ ಕೆಲವು ದಿನಗಳ ಬಳಿಕ ಶಿವಮೊಗ್ಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅಲ್ಲಿ ವೈದ್ಯರು ಯಡವಟ್ಟು ಮಾಡಿದ್ದರಿಂದ ಕರುಳಿಗೆ ಹಾನಿಯಾಗಿತ್ತು. ಅದನ್ನು ವೈದ್ಯರು ಮುಚ್ಚಿಟ್ಟಿದ್ದರು. ಆಸ್ಪತ್ರೆಯಿಂದ ಮನೆಗೆ ಹೋದಾಗ ಕೈ, ಕಾಲುಗಳು ಊತ ಬಂದಿದ್ದವು ಎಂದು ಅನುಷಾ ಕುಟುಂಬದವರು ಆರೋಪಿಸಿದ್ದಾರೆ.
ಮತ್ತೆ ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಕಾಮಾಲೆ ರೋಗ ಇದೆ ಎಂದು ತಿಳಿಸಿ ಬೆಂಗಳೂರಿಗೆ ಹೋಗುವಂತೆ ಸಲಹೆ ನೀಡಿದ್ದರು. ಅದರಂತೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮತ್ತೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಅನುಷಾ ಮೃತಪಟ್ಟಿದ್ದಾರೆ. ಅನುಷಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಅನುಷಾ ಅವರು 2019 ರಿಂದ ದೀರ್ಘಕಾಲದ ಕಾಮಾಲೆ ಸೇರಿದಂತೆ ಸಂಕೀರ್ಣ ಸಮಸ್ಯೆಯ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರು. ಎರಡು ತಿಂಗಳ ಹಿಂದೆ ಹೆರಿಗೆಯಾಗಿತ್ತು. ಆನಂತರ ಶಿವಮೊಗ್ಗದಲ್ಲಿ ಇನ್ನೊಂದು ಆಸ್ಪತ್ರೆಯಲ್ಲಿ ನ.30ರಂದು ಲ್ಯಾಪ್ರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಕಿಬ್ಬೊಟ್ಟೆ ಸಮಸ್ಯೆಯಿಂದ ಗಂಭೀರ ಸ್ಥಿತಿಗೆ ತಲುಪಿದ್ದು ನ.18ರಂದು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಅವರಿಗೆ ವಿವಿಧ ಆರೋಗ್ಯ ಸಮಸ್ಯೆಗಳಿರುವುದು ಪತ್ತೆಯಾಗಿತ್ತು. ಸುಧಾರಿತ ಐಸಿಯು, ವೆಂಟಿಲೇಟರ್ ಬೆಂಬಲದೊಂದಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಬಹು ಅಂಗಾಂಗಗಳ ವೈಫಲ್ಯದಿಂದ ಹೃದಯ ಸ್ತಂಭನವಾಗಿದೆ. ಚಿಕಿತ್ಸೆಯಲ್ಲಿ ವೈದ್ಯರಿಂದ ಲೋಪವಾಗಿಲ್ಲ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಕೂಲಿ ಕಾರ್ಮಿಕ ಬಾಣಂತಿ ಸಾವು
ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿರುವ ನಿಮಿತಾ ಮಂಡಲ್ ಅವರನ್ನು ಎರಡನೇ ಹೆರಿಗೆಗಾಗಿ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಸಹಜ ಹೆರಿಗೆಯಾಗಿತ್ತು. ಅವರಿಗೆ ವಿಪರೀತ ರಕ್ತಸ್ರಾವ ಆರಂಭವಾಗಿತ್ತು. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಖಾಲಿ ಇಲ್ಲದ ಕಾರಣ ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿದ್ದರು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ.
ವೈದ್ಯರು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣ ಸಾವು ಉಂಟಾಗಿದೆ ಎಂದು ನಿಮಿತಾ ಅವರ ಕುಟುಂಬದವರು ಆರೋಪಿಸಿದ್ದಾರೆ. ಆದರೆ, “ಆಮ್ಮಿಯೋಟೆಕ್ ಫ್ಲೋಯಿಡ್ ಎಂಬಾಲಿಸಮ್ (ರಕ್ತಕ್ಕೆ ನೀರು ಸೇರಿ ಸ್ರಾವ ಉಂಟಾಗುವುದು) ಸಮಸ್ಯೆ ಉಂಟಾಗಿದ್ದರಿಂದ ಕೆ.ಸಿ. ಜನರಲ್ ಆಸ್ಪತ್ರೆಯಿಂದ ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮೊದಲೇ ರಕ್ತಹೀನತೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ವೈದ್ಯರಿಂದ ಲೋಪವಾಗಿಲ್ಲ" ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಹೇಳಿದ್ದಾರೆ.
ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ರಾಜ್ಯದಲ್ಲಿ ದಿನೇ ದಿನೇ ಬಾಣಂತಿಯರ ಸಾವು ಹೆಚ್ಚಾಗುತ್ತಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿಯರ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.