
ಸಿದ್ದು ಸರ್ಕಾರಕ್ಕೆ 2.5 ವರ್ಷ: Part-1| ಗ್ಯಾರಂಟಿ ಯೋಜನೆಗಳ ಜಪ; ಭರವಸೆಗಳ ಕಥೆ- ವ್ಯಥೆ
ʼಸರ್ವ ಜನಾಂಗದ ಶಾಂತಿ ತೋಟʼ ಹೆಸರಿನಲ್ಲಿ ಘೋಷಿಸಿದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲೇ ಎರಡೂವರೆ ವರ್ಷ ಕಳೆದಿದೆ. ಆದರೆ, ಪ್ರಣಾಳಿಕೆಯಲ್ಲಿ ಗ್ಯಾರೆಂಟಿ ಯೋಜನೆ ಹೊರತುಪಡಿಸಿದ ಬಹಳಷ್ಟು ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದಿವೆ.
ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40 ರಷ್ಟು ಕಮಿಷನ್ ಹಾಗೂ ಭ್ರಷ್ಟಾಚಾರ ಆರೋಪಗಳನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಇಂದಿಗೆ (ನ.20) ತನ್ನ ಅರ್ಧ ಅವಧಿಯ (2.5 ವರ್ಷ) ಆಡಳಿತ ಪೂರ್ಣಗೊಳಿಸಿದೆ.
ʼಸರ್ವ ಜನಾಂಗದ ಶಾಂತಿ ತೋಟʼ ಹೆಸರಿನಲ್ಲಿ ಘೋಷಿಸಿದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲೇ ಎರಡೂವರೆ ವರ್ಷ ಕಳೆದಿದೆ. ಆದರೆ, ಪ್ರಣಾಳಿಕೆಯಲ್ಲಿ ಗ್ಯಾರೆಂಟಿ ಯೋಜನೆ ಹೊರತುಪಡಿಸಿದ ಬಹಳಷ್ಟು ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದ, ನಾಯಕತ್ವ ಗೊಂದಲ, ಆಂತರಿಕ ಕಚ್ಛಾಟ, ಹಗರಣಗಳಲ್ಲಿ ಸಿಲುಕಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಇಷ್ಟೆಲ್ಲಾ ಗೊಂದಲ, ವಿವಾದಗಳ ಮಧ್ಯೆ ಎರಡೂವರೆ ವರ್ಷ ಪೂರ್ಣಗೊಳಿಸಿರುವ ರಾಜ್ಯ ಸರ್ಕಾರದ ಸಾಧನೆ, ವೇದನೆ ಹಾಗೂ ಸಂಘರ್ಷಗಳೇನು ಎಂಬುದು ಚರ್ಚಿತ ವಿಷಯವಾಗಿದೆ. ಇದಲ್ಲದೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಈಡೇರಿವೆಯೇ, ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ, ಗ್ಯಾರೆಂಟಿ ಯೋಜನೆಗಳ ಗುಂಗಿನಲ್ಲಿ ಕೈಬಿಟ್ಟ ಯೋಜನೆಗಳೆಷ್ಟು, ಅಭಿವೃದ್ಧಿ ಹೇಗಿದೆ, ಸರ್ಕಾರಕ್ಕೆ ಅಂಟಿದ ಕಳಂಕಗಳೇನು ಎಂಬುದರ ಬಗ್ಗೆ ʼದ ಫೆಡರಲ್ ಕರ್ನಾಟಕʼ ಸರಣಿ ವರದಿ ಪ್ರಕಟಿಸುತ್ತಿದೆ.
ಎರಡು ವರ್ಷ; ಶೇ 6.7 ರಷ್ಟು ಭರವಸೆ ಈಡೇರಿಕೆ
ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ 134 ಭರವಸೆಗಳಲ್ಲಿ ಫಲಿತದ ಪ್ರಮಾಣ ಕೇವಲ ಶೇ 6.7 ರಷ್ಟು ಮಾತ್ರ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿವೆ.
ಎಂಟು ಕ್ಷೇತ್ರಗಳ ಒಟ್ಟು 134 ಭರವಸೆಗಳ ಪೈಕಿ ಸಾರ್ವಜನಿಕ ಆರೋಗ್ಯ, ಶಾಲಾ ಮತ್ತು ಉನ್ನತ ಶಿಕ್ಷಣ, ಪರಿಸರ, ಬೆಂಗಳೂರು ಅಭಿವೃದ್ಧಿ, ಕಾರ್ಮಿಕ ಕ್ಷೇತ್ರ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕೇವಲ 10 ಭರವಸೆಗಳನ್ನು ಈಡೇರಿಸಲಾಗಿದೆ. ಶಾಲಾ ಪಠ್ಯಪುಸ್ತಕ ಪರಿಷ್ಕರಣೆ, ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್, ಬ್ಯಾಟರಿ ಬದಲಾವಣೆ ಪಾಯಿಂಟ್‌ಗಳ ಸ್ಥಾಪನೆ, ಬೆಂಗಳೂರು ಆಡಳಿತಕ್ಕೆ ಹೊಸ ಕಾನೂನು (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ರಚನೆ ಹಾಗೂ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಭರವಸೆಗಳು ಈಡೇರಿವೆ ಎಂಬುದು ಇತ್ತೀಚೆಗೆ ʼಸಿವಿಕ್ ಬೆಂಗಳೂರುʼ ಬಹಿರಂಗಪಡಿಸಿದ ರಾಜ್ಯ ಸರ್ಕಾರದ ಎರಡು ವರ್ಷದ ರಿಪೋರ್ಟ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ.
“ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಎರಡೂವರೆ ವರ್ಷದಲ್ಲಿ ಮುಗಿಸಲು ಸಾಧ್ಯವಿಲ್ಲ. ಕೆಲ ಭರವಸೆಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ. ಕನಿಷ್ಠ ಅವುಗಳನ್ನಾದರೂ ಅನುಷ್ಠಾನ ಮಾಡಬೇಕು. 134ಆಶ್ವಾಸನೆಗಳಲ್ಲಿ ಶೇ 6.7 ರಷ್ಟು ಈಡೇರಿಕೆಯಾಗಿವೆ. ಶೇ 37 ರಷ್ಟು ಭರವಸೆಗಳು ಪ್ರಗತಿಯಲ್ಲಿವೆ. ಇದರಿಂದ ಅಸಮಾಧಾನಪಡಬೇಕಿಲ್ಲ, ಇನ್ನೂ ಎರಡೂವರೆ ವರ್ಷವಿದೆ. ಅಷ್ಟರಲ್ಲಿ ಮುಗಿಸಲು ಕಾಲಾವಕಾಶವಿದೆ ಎಂದು ಸಿವಿಕ್ ಬೆಂಗಳೂರು ಸಂಘಟನೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಾಗದದಲ್ಲೇ ಉಳಿದ ಭರವಸೆಗಳು
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಬಹುಪಾಲು ಭರವಸೆಗಳು ಇನ್ನೂ ಕಾಗದದಲ್ಲೇ ಉಳಿದಿವೆ. 50 ಭರವಸೆಗಳು ಅನುಷ್ಠಾನ ಹಂತದಲ್ಲಿವೆ. 70ಕ್ಕೂ ಹೆಚ್ಚು ಅಶ್ವಾಸನೆಗಳು ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ದಾಖಲೆಯ ವೇಗದಲ್ಲಿ ಈಡೇರಿಸುವ ಮೂಲಕ ಆಡಳಿತಾತ್ಮಕ ದಕ್ಷತೆ ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದೆ. ಆದರೆ, ಉಳಿದ ಭರವಸೆಗಳ ಈಡೇರಿಕೆಗೆ ಕಿಂಚಿತ್ತೂ ಪ್ರಾಮುಖ್ಯತೆ ನೀಡದಿರುವುದು ಟೀಕೆಗೆ ಗುರಿಯಾಗಿದೆ.
"ಪಂಚ ಗ್ಯಾರಂಟಿ"ಗಳೇ ಪ್ರಣಾಳಿಕೆಯ ಜೀವಾಳವಾಗಿ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂಬುದು ಸರ್ಕಾರ ಹಾಗೂ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಇದೇ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ ಇತರೆ ಭರವಸೆಗಳು ಕೂಡ ಸಾಕಾರವಾಗಬೇಕಲ್ಲವೇ ಎಂಬುದು ಹಲವರ ಪ್ರಶ್ನೆಯಾಗಿದೆ.
ಯಾವುದೆಲ್ಲಾ ಈಡೇರಿಕೆ, ವಿಫಲ?
ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಮೆಟ್ರೋ ಹಂತ 2, 2A, 2B ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಅದೇ ರೀತಿ ಸರ್ಕಾರಿ ಮತ್ತು ಅನುದಾನಿತ ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿ ಒಂದು ವರ್ಷದೊಳಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ, ಈ ಎರಡೂ ಭರವಸೆಗಳು ಇನ್ನೂ ಪ್ರಣಾಳಿಕೆ ಘೋಷಣೆಯಲ್ಲೇ ಉಳಿದಿವೆ.
ಇನ್ನು ರಾಜ್ಯ ಶಿಕ್ಷಣ ನೀತಿ ರಚನೆ, ಮಧ್ಯಾಹ್ನ ಊಟದ ಪೌಷ್ಟಿಕತೆ ಹೆಚ್ಚಳ, ಪ್ರಾದೇಶಿಕ ಆಸ್ಪತ್ರೆಗಳ ಸ್ಥಾಪನೆ, ಪೌರಕಾರ್ಮಿಕರ ಸೇವಾ ಕಾಯಮಾತಿ, ಕನಿಷ್ಠ ವೇತನ ಪರಿಷ್ಕರಣೆ ಭರವಸೆಗಳು ಪ್ರಗತಿಯಲ್ಲಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಟ್ಟುನಿಟ್ಟಿನ ವೇಳಾಪಟ್ಟಿ, ಗಿಗ್ ಕಾರ್ಮಿಕರಿಗೆ ಕನಿಷ್ಠ ವೇತನ, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಿಕತ್ವದ ಕಾಯ್ದೆ ಜಾರಿ, ಸಾರ್ವಜನಿಕ ಸಾರಿಗೆ, ಮೆಟ್ರೋ ಹಾಗೂ ಉಪನಗರ ರೈಲು ಏಕೀಕರಣ, ಮಳೆನೀರು ಸಂಗ್ರಹಣೆಗೆ ಶೇ 50 ರಷ್ಟು ನೆರವು, 100 ಕಿ.ಮೀ. ಅಂತರದಲ್ಲಿ ಟ್ರಾಮಾ ಕೇಂದ್ರಗಳ ಸ್ಥಾಪನೆ ಭರವಸೆಗಳು ಇದುವರೆಗೂ ಈಡೇರಿಲ್ಲ.
ಸರ್ಕಾರದ ಮುಂದಿರುವ ಸವಾಲುಗಳು
ಐದು ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚ ಅಂದಾಜು 50 ರಿಂದ 60 ಸಾವಿರ ಕೋಟಿ ರೂ,ಗಳಾಗಿದೆ. ಇದು ರಾಜ್ಯದ ಬೊಕ್ಕಸದ ಮೇಲೆ ಅಗಾಧ ಒತ್ತಡ ಸೃಷ್ಟಿಸಿದೆ. ಈ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತೆರಿಗೆ ಹೆಚ್ಚಳ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನೀರಾವರಿ, ಮೂಲಸೌಕರ್ಯ, ಕೈಗಾರಿಕಾ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನೂರಾರು ಭರವಸೆಗಳಿಗೂ ಗ್ಯಾರಂಟಿ ಯೋಜನೆಗಳಿಂದ ಹಿನ್ನಡೆಯಾಗಿದೆ. ಇಂತಹ ಆರ್ಥಿಕ ಸವಾಲಿನ ನಡುವೆ ಅತ್ಯಗತ್ಯ ಕ್ಷೇತ್ರಗಳ ಭರವಸೆ ಈಡೇರಿಸುವುದು ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಂತಿದೆ.
ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತವೆಯೇ ಅಥವಾ ಸಾಲದ ಸುಳಿಗೆ ಸಿಲುಕಿಸುತ್ತವೆಯೇ ಎಂಬುದರ ಬಗ್ಗೆ ಸಾಕಷ್ಟುಅಧ್ಯಯನ ನಡೆಸಬೇಕು ಎಂಬುದು ತಜ್ಞರ ಮಾತು. ಒಟ್ಟಾರೆ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರ ಅವಧಿಯಮೊದಲ ಎರಡೂವರೆ ವರ್ಷದಲ್ಲಿ ಪ್ರಮುಖ ಭರವಸೆಗಳನ್ನಷ್ಟೇ ಈಡೇರಿಸಿದೆ. ಉಳಿದ ಭರವಸೆಗಳನ್ನು ಈಡೇರಿಸಲು ಬದ್ಧತೆ ತೋರಬೇಕಾಗಿದೆ.

