ಧರ್ಮಸ್ಥಳ ಪ್ರಕರಣಕ್ಕೆ ತಿರುವು: ದೂರುದಾರನೇ ಮೊದಲ ಆರೋಪಿ, 10 ಸೆಕ್ಷನ್‌ಗಳಡಿ ಕೇಸ್
x

ಮಾಸ್ಕ್‌ ಮ್ಯಾನ್‌ 

ಧರ್ಮಸ್ಥಳ ಪ್ರಕರಣಕ್ಕೆ ತಿರುವು: ದೂರುದಾರನೇ ಮೊದಲ ಆರೋಪಿ, 10 ಸೆಕ್ಷನ್‌ಗಳಡಿ ಕೇಸ್

ಚಿನ್ನಯ್ಯ ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆಯನ್ನು ತೆಗೆದ ಸ್ಥಳದ ಮಹಜರು ಪ್ರಕ್ರಿಯೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಈತ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ, ತನಿಖಾ ತಂಡ ಈ ಕ್ರಮ ಕೈಗೊಂಡಿದೆ.


ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ ಪ್ರಕರಣವು ನಾಟಕೀಯ ತಿರುವು ಪಡೆದಿದ್ದು, ಅನಾಮಿಕ ದೂರುದಾರನಾಗಿದ್ದ ಭೀಮ ಎಂಬ ವ್ಯಕ್ತಿಯನ್ನೇ ವಿಶೇಷ ತನಿಖಾ ದಳ (SIT) ಇದೀಗ ಪ್ರಥಮ ಆರೋಪಿ (A-1) ಎಂದು ಹೆಸರಿಸಿದೆ. ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ತನಿಖೆಯ ದಿಕ್ಕು ತಪ್ಪಿಸಿದ ಆರೋಪದ ಮೇಲೆ ಆತನ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆಯ (BNS) 10 ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಕರಣದ ಕೇಂದ್ರಬಿಂದುವಾಗಿದ್ದ ತಲೆಬುರುಡೆಯ ವಿಚಾರದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಭೀಮ ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆಯನ್ನು ತೆಗೆದ ಸ್ಥಳದ ಮಹಜರು ಪ್ರಕ್ರಿಯೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಈತ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ, ತನಿಖಾ ತಂಡ ಈ ಕ್ರಮ ಕೈಗೊಂಡಿದೆ. ಈ ಹಿಂದೆ ನ್ಯಾಯಾಧೀಶರ ಮುಂದೆ ಸೆಕ್ಷನ್ 164ರ ಅಡಿ ನೀಡಿದ್ದ ಹೇಳಿಕೆಗೆ ಸಂಪೂರ್ಣ ವ್ಯತಿರಿಕ್ತವಾದ ಹೇಳಿಕೆಯನ್ನು ಭೀಮ ಇದೀಗ ಎಸ್‌ಐಟಿ ಮುಂದೆ ನೀಡಿದ್ದಾನೆ. ಈ ಹೊಸ ಹೇಳಿಕೆಯನ್ನು ಸಹ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದು, ಅದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಹಲವಾರು ಸೆಕ್ಷನ್​ಗಳ ಸೇರ್ಪಡೆ

ಈ ಬೆಳವಣಿಗೆಯೊಂದಿಗೆ, ಪ್ರಕರಣದಲ್ಲಿ ಈ ಹಿಂದೆ ದಾಖಲಾಗಿದ್ದ ಎಫ್‌ಐಆರ್ (39/25) ಗೆ ಹಲವು ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ದೂರುದಾರ ಚಿನ್ನಯ್ಯನ ವಿರುದ್ಧವೇ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದು (BNS 336), ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು (231), ಸುಳ್ಳು ಸಾಕ್ಷ್ಯ ನೀಡುವುದು (229), ಸಾರ್ವಜನಿಕ ಶಾಂತಿ ಕದಡುವುದು (227), ಪಿತೂರಿ (236) ಮತ್ತು ತನಿಖೆಯ ದಿಕ್ಕು ತಪ್ಪಿಸುವಂತಹ (240) ಗಂಭೀರ ಆರೋಪಗಳಡಿ ದೂರು ದಾಖಲಾಗಿದೆ.

ಈ ನಡುವೆ, ಮಹೇಶ್ ಶೆಟ್ಟಿ ಎಂಬುವವರ ಮನೆಯಲ್ಲಿದ್ದ ಚಿನ್ನಯ್ಯನಿಗೆ ಸೇರಿದ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ಪ್ರಕ್ರಿಯೆಯನ್ನು ಎಸ್‌ಐಟಿ ಪೂರ್ಣಗೊಳಿಸಿದೆ. ಪ್ರಕರಣದ ಸೂಕ್ಷ್ಮತೆ ಪರಿಗಣಿಸಿ, ಚಿನ್ನಯ್ಯನ ಹೊಸ ಹೇಳಿಕೆ ಹಾಗೂ ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಗೌಪ್ಯವಾಗಿಡುವಂತೆ ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಾಲಯ ಇದಕ್ಕೆ ಸಮ್ಮತಿಸಿದೆ. ಚಿನ್ನಯ್ಯನ ವಿರುದ್ಧವೇ ಪ್ರಕರಣ ದಾಖಲಾಗಿದ್ದರೂ, ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಈತನಿಗೆ ನೀಡಲಾಗಿದ್ದ ಭದ್ರತೆಯನ್ನು ಮುಂದುವರಿಸಲಾಗಿದೆ, ಈ ಕಾರಣದಿಂದಾಗಿ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಮೂಲಕ, ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿತ್ತೇ ಎಂಬ ಅನುಮಾನ ಮತ್ತಷ್ಟು ಬಲಗೊಂಡಿದೆ.

Read More
Next Story