
ಕಿರುತೆರೆ ನಟಿ ಮಂಜುಳಾ
ಕಿರುತೆರೆ ನಟಿ ಮಂಜುಳಾ ಮೇಲೆ ಪತಿಯಿಂದಲೇ ಭೀಕರ ಹಲ್ಲೆ: ಕೊಲೆ ಯತ್ನ ಪ್ರಕರಣ ದಾಖಲು
ಕನ್ನಡ ಕಿರುತೆರೆ ಲೋಕದಲ್ಲಿ ಶಾಕ್ ಹುಟ್ಟಿಸಿರುವ ಘಟನೆಯೊಂದರಲ್ಲಿ, ಜನಪ್ರಿಯ ನಟಿ ಹಾಗೂ ನಿರೂಪಕಿ ಮಂಜುಳಾ ಅಲಿಯಾಸ್ ಶ್ರುತಿ ಅವರ ಮೇಲೆ ಅವರ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ.
ಕನ್ನಡ ಕಿರುತೆರೆ ನಟಿ ಹಾಗೂ ನಿರೂಪಕಿ ಮಂಜುಳಾ ಅಲಿಯಾಸ್ ಶ್ರುತಿ ಅವರ ಮೇಲೆ ಅವರ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಹನುಮಂತನಗರದಲ್ಲಿ ಜುಲೈ 4 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಂಜುಳಾ ಅವರು ಹಲವು ಸೀರಿಯಲ್‌ಗಳಲ್ಲಿ ನಟಿಸುವುದರ ಜೊತೆಗೆ ಖಾಸಗಿ ವಾಹಿನಿಯ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಅವರ ಪತಿ ಅಮರೇಶ್ ಈ ಕ್ರೂರ ಕೃತ್ಯ ಎಸಗಿದ್ದಾರೆ. ದಂಪತಿಗಳ ನಡುವೆ ದೀರ್ಘಕಾಲದಿಂದ ಸಂಸಾರಿಕ ಹಾಗೂ ಹಣಕಾಸಿನ ವಿಚಾರವಾಗಿ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಕಳೆದ ಹಲವು ವರ್ಷಗಳಿಂದ ಶ್ರುತಿ ಅವರು ಹನುಮಂತನಗರದಲ್ಲಿ ಲೀಸ್‌ಗೆ ಪಡೆದ ಮನೆಯಲ್ಲಿ ವಾಸವಾಗಿದ್ದರು. ದಂಪತಿ ನಡುವೆ ಹೊಂದಾಣಿಕೆ ಕೊರತೆಯಿತ್ತು. ನಟಿ ಶ್ರುತಿ ಅವರ ಕೆಲ ನಡವಳಿಕೆಗಳು ಪತಿಗೆ ಇಷ್ಟವಿರಲಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸಂಬಂಧದಲ್ಲಿ ಬಿರುಕು ಮತ್ತು ರಾಜಿ ಯತ್ನ
20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಂಜುಳಾ ಮತ್ತು ಅಮರೇಶ್‌ಗೆ ಇಬ್ಬರು ಮಕ್ಕಳಿದ್ದಾರೆ.
ಕಳೆದ ಏಪ್ರಿಲ್‌ನಿಂದ ಶ್ರುತಿ ತಮ್ಮ ಪತಿಯಿಂದ ದೂರವಾಗಿ, ತಮ್ಮ ಅಣ್ಣನ ಮನೆಯಲ್ಲಿ ತಂಗಿದ್ದರು. ಮನೆ ಲೀಸ್ ಹಣದ ವಿಚಾರಕ್ಕೂ ಇಬ್ಬರ ನಡುವೆ ಕಲಹ ನಡೆದಿತ್ತು. ಈ ಬಗ್ಗೆ ಶ್ರುತಿ ಹನುಮಂತನಗರ ಠಾಣೆಗೆ ದೂರು ಸಹ ನೀಡಿದ್ದರು. ವಿಪರ್ಯಾಸವೆಂದರೆ, ಘಟನೆ ನಡೆಯುವುದಕ್ಕೆ ಕೇವಲ ಒಂದು ದಿನ ಮೊದಲು, ಅಂದರೆ ಕಳೆದ ಗುರುವಾರವಷ್ಟೇ, ಇಬ್ಬರೂ ರಾಜಿ ಸಂಧಾನ ಮಾಡಿಕೊಂಡು ಮತ್ತೆ ಒಂದಾಗಿದ್ದರು.
ಕ್ರೂರ ಹಲ್ಲೆ ಮತ್ತು ಚಾಕು ಇರಿತ
ರಾಜಿ ಸಂಧಾನದ ಮರುದಿನವೇ, ಶುಕ್ರವಾರ, ಮಕ್ಕಳ ಕಾಲೇಜಿಗೆ ಹೋದ ಬಳಿಕ ಪತಿ ಅಮರೇಶ್ ಮಂಜುಳಾ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಮರೇಶ್ ತನ್ನ ಪತ್ನಿಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ, ಆಕೆಯ ತಲೆಗೂದಲು ಹಿಡಿದು ಗೋಡೆಗೆ ಬಲವಾಗಿ ಗುದ್ದಿದ್ದಾರೆ. ನಂತರ, ಆಕೆಯ ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ.
ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸಂಸಾರ ಮತ್ತು ಹಣಕಾಸಿನ ವಿಚಾರವೇ ಈ ಕೃತ್ಯಕ್ಕೆ ಕಾರಣ ಎಂದು ಶ್ರುತಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಅಮರೇಶ್‌ರನ್ನು ಬಂಧಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಂಜುಳಾ ಅಲಿಯಾಸ್ ಶ್ರುತಿ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.