MSP for Toor Dal | ತೊಗರಿಗೆ ರೈತರು ಕೇಳಿದ್ದು 4500 ರೂ.; ಸರ್ಕಾರ ಕೊಟ್ಟಿದ್ದು 450 ರೂ.
x
ತೊಗರಿ ಬೆಳೆ

MSP for Toor Dal | ತೊಗರಿಗೆ ರೈತರು ಕೇಳಿದ್ದು 4500 ರೂ.; ಸರ್ಕಾರ ಕೊಟ್ಟಿದ್ದು 450 ರೂ.

MSP for Toor Dal : ಪ್ರತಿ ಕ್ವಿಂಟಾಲ್​ ತೊಗರಿ ಬೆಳೆಗೆ 450 ರೂ. ಹೆಚ್ಚುವರಿ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿ ಮಾಡಲು ರಾಜ್ಯ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.


ರಾಜ್ಯದ ತೊಗರಿ ಬೆಳೆಗಾರರಿಗೆ ತುಸು ನೆಮ್ಮದಿ ತರುವ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ದಿಢೀರ್ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೊಗರಿ ಬೆಳೆಗಾರರಿಗೆ ಸರ್ಕಾರ ಹೆಚ್ಚುವರಿ ಬೆಂಬಲ ಬೆಲೆಯನ್ನು ಕಳೆದ ಜನವರಿಯಲ್ಲಿ ಘೋಷಣೆ ಮಾಡಿತ್ತು. ಅದಕ್ಕೆ ಸಂಬಂಧಿಸಿದಂತೆ ಫೆ. 8 ರಂದು ಹಣಕಾಸು ಇಲಾಖೆ ಪ್ರತಿ ಕ್ವಿಂಟಾಲ್​ ತೊಗರಿಗೆ ಬೆಂಬಲ ಬೆಲೆಯಡಿ 450 ರೂ. ಸಹಾಯಧನ ನೀಡಲು ಅನುಮೋದನೆ ನೀಡಿ ಆದೇಶಿಸಿದೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿ ಖರೀದಿಗೆ 7,750 ರೂ. ನೀಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 450 ರೂ. ಸೇರಿಸಿ, ಒಟ್ಟು 8,000 ರೂ. ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ.

ಆದರೆ, ಕೇಂದ್ರದ 7,750 ರೂಪಾಯಿಗಳೊಂದಿಗೆ ರಾಜ್ಯ ಸರ್ಕಾರ 4,500 ರೂ.ಗಳನ್ನು ಸೇರಿಸಿ ಪ್ರತಿ ಕ್ವಿಂಟಾಲ್​ಗೆ ಒಟ್ಟು 12,050 ರೂ. ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿತ್ತು.

ದಿಢೀರ್ ಕುಸಿತ ಕಂಡಿದ್ದ ತೊಗರಿ ಬೆಲೆ

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 12,000 ರೂ.ನಂತೆ ಮಾರಾಟವಾಗುತ್ತಿದ್ದ ತೊಗರಿಯು, ಹೊಸ ಬೆಳೆ ಬರುತ್ತಿದ್ದಂತೆ ದಿಢೀರ್ ಬೆಲೆ ಕುಸಿತ ಕಂಡಿತ್ತು. ಮೊದಲೇ ಪ್ರಕೃತಿ ವಿಕೋಪದಿಂದ ತೊಗರಿ ಬೆಳೆ ಕುಂಠಿತವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಬೆಂಬಲ ಬೆಲೆ ಹೆಚ್ಚಿಸುವಂತೆ ರೈತ ಸಂಘಟನೆಗಳು ಒತ್ತಾಯಿಸಿದ್ದವು.

ಪ್ರಮುಖವಾಗಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬೆಳೆಯುವ ತೊಗರಿ ಬೆಳೆಗೆ ಹೆಚ್ಚಿನ ಬೆಲೆ ಇರುತ್ತದೆ. ಅಲ್ಲಿನ ಮಣ್ಣಿನಲ್ಲಿ ಸುಣ್ಣದ ಕಲ್ಲಿನ ಅಂಶವು ಹೆಚ್ಚಿದ್ದು, ತೊಗರಿ ಬೆಳೆಗೆ ಅಗತ್ಯವಾದ ಖನಿಜಾಂಶ ಒದಗಿಸುತ್ತದೆ. ಹೀಗಾಗಿ ಅಲ್ಲಿ ಬೆಳೆಯುವ ಪಟಗಾ ತೊಗರಿಗೆ ಉತ್ಕೃಷ್ಟ ಬೆಲೆ ಸಿಗುತ್ತದೆ. ಆದರೆ, ಹೊಸ ತೊಗರಿ ಮಾರುಕಟ್ಟೆಗೆ ಬರುತ್ತಿದ್ದಂತೆಯೆ ಎಲ್ಲ ಜಿಲ್ಲೆಗಳಲ್ಲಿ ಬೆಲೆ ದಿಢೀರ್ ಕುಸಿತ ಕಂಡಿತ್ತು. ಉಳಿದಂತೆ ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ತೊಗರಿ ಬೆಳೆಯನ್ನು ಬೆಳೆಯಲಾಗುತ್ತದೆ.

ಭರವಸೆ ನೀಡಿದ್ದ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್

ರಾಜ್ಯ ಸರ್ಕಾರ ಕ್ವಿಂಟಾಲ್ ಗೆ ಹೆಚ್ಚುವರಿ 450 ರೂ. ನೀಡಲಿದೆ ಎಂದು ಕಳೆದ ತಿಂಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ರೈತರಿಗೆ ಭರವಸೆ ನೀಡಿದ್ದರು. ಈ ಉದ್ದೇಶಕ್ಕಾಗಿ ಒಟ್ಟು 140 ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು. ರಾಜ್ಯಾದ್ಯಂತ 400ಕ್ಕೂ ಹೆಚ್ಚಿನ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೀದರ್ ನಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿಯನ್ನು ಬೆಳೆಯಲಾಗುತ್ತದೆ. ಹೀಗಾಗಿ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.

Read More
Next Story