
Tunnel Road | ಸುರಂಗ ಮಾರ್ಗ ರಸ್ತೆ ನಿರ್ಮಾಣ ಯೋಜನೆ; ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ನೊಟೀಸ್
ಸುರಂಗ ಮಾರ್ಗ ಸಂಬಂಧಿಸಿದಂತೆ ಎನ್‌ಜಿಟಿ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಬೆಂಗಳೂರು ಪ್ರಜಾ ವೇದಿಕೆ ಮತ್ತು ಇತರರು ಸುರಂಗ ಮಾರ್ಗ ಯೋಜನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿಯ ಯೋಜನೆಯಾದ ಟನೆಲ್ ರೋಡ್‌ಗೆ (ಸುರಂಗ ಮಾರ್ಗ) ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಬೆಂಗಳೂರು ಪ್ರಜಾ ವೇದಿಕೆ ಮತ್ತು ಇತರರು ಸುರಂಗ ಮಾರ್ಗ ಯೋಜನೆ ಪ್ರಶ್ನಿಸಿ ಎನ್‌ಜಿಟಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಎನ್‌ಜಿಟಿ, ರಾಜ್ಯ ಸರ್ಕಾರ, ಬಿಬಿಎಂಪಿ (ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರ), ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ.
ಸುರಂಗ ಮಾರ್ಗ ಹಾದು ಹೋಗುವ ಸ್ಥಳದ ನಿರ್ದಿಷ್ಟ ಭೂವೈಜ್ಞಾನಿಕ ಅಧ್ಯಯನಗಳು, ಜಲ ವೈಜ್ಞಾನಿಕ ಮತ್ತು ಪ್ರವಾಹ-ಅಪಾಯದ ನಕ್ಷೆಗಳು, ಜೀವ ವೈವಿಧ್ಯ ಮೌಲ್ಯಮಾಪನ ಮತ್ತು ಮರಗಳ ಪಟ್ಟಿ ಇಲ್ಲ. ಸುರಂಗದಲ್ಲಿ ಸಂಚರಿಸುವ ವಾಹನಗಳ ವರ್ಗಗಳನ್ನು ಹೊರಗಿಡಲಾಗಿದೆ. ಸುರಂಗ ಮಾರ್ಗವು ಲಾಲ್‌ಬಾಗ್, ಹೆಬ್ಬಾಳ ಕಣಿವೆಯ ಚರಂಡಿಯಂತಹ ಪರಿಸರ ಮತ್ತು ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದರಿಂದ ಅಂತರ್ಜಲ ಬತ್ತಿಹೋಗುತ್ತದೆ. ಮಣ್ಣು ಸಡಿಲಗೊಳ್ಳುತ್ತದೆ ಮತ್ತು ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ಅಲ್ಲದೇ, ಸುರಂಗ ರಸ್ತೆ ಯೋಜನೆಯನ್ನು ಯಾವುದೇ ವಿಶ್ವಾಸಾರ್ಹ ತಾಂತ್ರಿಕ ಮೌಲ್ಯಮಾಪನ ಇಲ್ಲದೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 16.74 ಕಿ.ಮೀ ಅವಳಿ- ಸುರಂಗ ಮಾರ್ಗವು ಕಲುಷಿತಗೊಂಡ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದೆ. ಈ ಪ್ರದೇಶವು ಅಂತರ್ಜಲ ಸವಕಳಿ, ಮಣ್ಣಿನ ಅಸ್ಥಿರತೆ ಮತ್ತು ಪ್ರವಾಹದ ಹೆಚ್ಚಿನ ಅಪಾಯವನ್ನು ಎದುರಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಕಳೆದ ಕಳೆದ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 16.74 ಕಿ.ಮೀ ಸುರಂಗ ಮಾರ್ಗವನ್ನು ನಿರ್ಮಿಸಲು ಸಂಪುಟವು ಅನುಮೋದನೆ ನೀಡಲಾಗಿತ್ತು. ಈ ಯೋಜನೆಯ ವೆಚ್ಚ ಅಂದಾಜು 17,698 ಕೋಟಿ ರೂ. ಆಗಿದ್ದು, ಇದು ಟೋಲ್ ದರವನ್ನು ಒಳಗೊಂಡಿದೆ.