Tungabhadra Dam Gate Break | ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕ ʻಸ್ಟಾಪ್ ಲಾಗ್ ಗೇಟ್ʼ ಅಳವಡಿಸಲು ನಿರ್ಧಾರ
x

Tungabhadra Dam Gate Break | ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕ ʻಸ್ಟಾಪ್ ಲಾಗ್ ಗೇಟ್ʼ ಅಳವಡಿಸಲು ನಿರ್ಧಾರ

ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕ ʻಸ್ಟಾಪ್ ಲಾಗ್ ಗೇಟ್ʼ ಮಾತ್ರ ಅಳವಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೋಸ್ಕರ ಸೋಮವಾರದಿಂದ ನಿತ್ಯ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.


ಎರಡು ವರ್ಷಗಳ ಬಳಿಕ ಭರ್ತಿಯಾಗಿದ್ದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್, ಶನಿವಾರ ರಾತ್ರಿ ಕೊಚ್ಚಿಹೋಗಿ ಆತಂಕ ಸೃಷ್ಟಿಯಾಗಿದೆ. ಸದ್ಯ ಅಲ್ಲಿ ತಾತ್ಕಾಲಿಕ ಹೊಸ ಗೇಟ್ ಅಳವಡಿಸಲು ಜಲಾಶಯದ ನೀರನ್ನು ಬಹುತೇಕ ಅರ್ಧದಷ್ಟು ಖಾಲಿ ಮಾಡುವ ಪ್ರಯತ್ನ ನಡೆಯುತ್ತಿದೆ.

ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕ ʻಸ್ಟಾಪ್ ಲಾಗ್ ಗೇಟ್ʼ ಮಾತ್ರ ಅಳವಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೋಸ್ಕರ ಸೋಮವಾರದಿಂದ ನಿತ್ಯ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಹಳೇ ಗೇಟ್‌ನ ಜಾಗದಲ್ಲಿ ಹೊಸ ಗೇಟ್‌ ಅಳವಡಿಸಲು ಕನಿಷ್ಠ ನಾಲ್ಕೈದು ದಿನಗಳಾದರೂ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ ಸದ್ಯ ಜಲಾಶಯದ ನೀರನ್ನು ಹಿಡಿದಿಟ್ಟುಕೊಳ್ಳಲು, 19ನೇ ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚಿ ಅಲ್ಲಿ ನೀರು ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ 'ಸ್ಟಾಪ್ ಲಾಗ್ ಗೇಟ್ʼ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತುಂಗಭದ್ರಾ ಮಂಡಳಿಯ‌ ಮೂಲಗಳಿಂದ ಮಾಹಿತಿ ಲಭಿಸಿದೆ.

ಗೇಟ್ ತಯಾರಿಸಲು ಸೂಚಿಸಲಾದ ಕಂಪನಿಯ ಕಚೇರಿ ಇರುವುದು ಹೊಸಪೇಟೆಯಲ್ಲಾದರೂ ನಿರ್ಮಾಣ ಶೆಡ್ ಇರುವುದು ಕೊಪ್ಪಳ ಜಿಲ್ಲೆಯ ಹೊಸಹಳ್ಳಿ ಸಮೀಪ. ಅಲ್ಲಿ ಈಗಾಗಲೇ ಗೇಟ್ ತಯಾರಿಗೆ ಸಿದ್ಧತೆ ಆರಂಭವಾಗಿದೆ. ಜಲಾಶಯದ ನೀರು 50 ಟಿಎಂಸಿ ಅಡಿಗೆ ಕುಸಿಯುವ ಹೊತ್ತಿಗೆ ಗೇಟ್ ಸಹ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಅಣೆಕಟ್ಟೆಯಿಂದ ನದಿಗೆ ಸರಾಸರಿ 1 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣ 25 ಸಾವಿರ ಕ್ಯೂಸೆಕ್‌ನಷ್ಟು ಮಾತ್ರ ಇದೆ. ಹೀಗಾಗಿ ಒಂದೇ ದಿನದಲ್ಲಿ ಜಲಾಶಯದಿಂದ 8 ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗಿದೆ. ಶನಿವಾರ ರಾತ್ರಿ ಜಲಾಶಯ ಭರ್ತಿಯಾಗಿಯೇ ಇತ್ತು. ಗರಿಷ್ಠ ಸಂಗ್ರಹ ಸಾಮರ್ಥ್ಯವಾದ 105.78 ಟಿಎಂಸಿ ಅಡಿ ನೀರಿತ್ತು. ಸೋಮವಾರ ಬೆಳಿಗ್ಗೆ ನೀರಿನ ಸಂಗ್ರಹ 97.75 ಟಿಎಂಸಿ ಅಡಿಗೆ ಕುಸಿದಿದೆ.

ತುಂಗಭದ್ರಾ ಮಂಡಳಿಯು ನೀರನ್ನು ಬಹಳ ಬೇಗನೆ ಖಾಲಿ ಮಾಡಬೇಕಾದ ಒತ್ತಡ ಇದೆ. ಮತ್ತೊಂಡೆದೆ, ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಸುರಿಯುವ ಮುನ್ಸೂಚನೆಯೂ ಇದೆ. ಹೀಗಾಗಿ ನಾಲೈದು ದಿನದೊಳಗೆ ಜಲಾಶಯದ ನೀರು ಸಂಗ್ರಹವನ್ನು 45ರಿಂದ 50 ಟಿಎಂಸಿ ಅಡಿಗೆ ಇಳಿಸಬೇಕಾಗಿದ್ದು, ಸೋಮವಾರದಿಂದ 1.50 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುವುದು ಎಂದು ಮಂಡಳಿ ಭಾನುವಾರ ರಾತ್ರಿಯೇ ಎಚ್ಚರಿಕೆ ನೀಡಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ.

ಸಿಬಿಐ ತನಿಖೆಗೆ ಆಗ್ರಹ

ತುಂಗಭದ್ರಾ ಜಲಾಶಯವನ್ನು ನಿರ್ವಹಣೆ ಮಾಡುವವರು ಯಾರು? ಈ ಕೆಲಸ ಮಾಡುವ ಗುತ್ತಿಗೆದಾರನಿಗೆ ಎಷ್ಟು ಹಣ ಸಂದಾಯವಾಗಿದೆ? ಎನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗ ಮಾಡಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ.

ʻʻಯಾರ ಬೇಜವಾಬ್ದಾರಿಯಿಂದ ಗೇಟ್ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸಿಬಿಐ ತನಿಖೆ ನಡೆಯಬೇಕು. ಜಲಾಶಯದ ವಾರ್ಷಿಕ ನಿರ್ವಹಣೆ ಗುತ್ತಿಗೆದಾರರು ಯಾರು? ಅವರಿಗೆ ಪಾವತಿಯಾದ ಹಣ ಎಷ್ಟು ಎನ್ನುವುದು ಗೊತ್ತಾಗಬೇಕು. ಜಲಾಶಯದ ನೀರು ಹೊರಬಿಡುತ್ತಿರುವ ಕಾರಣ ನಮ್ಮ ಭಾಗದ ರೈತರಿಗೆ ದೊಡ್ಡ ಅನ್ಯಾಯವಾಗುತ್ತದೆ. ಈ ಬಗ್ಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕುʼʼ ಎಂದು ರೆಡ್ಡಿ ಹೇಳಿದ್ದಾರೆ.

Read More
Next Story