Tungabhadra Dam Gate Break | ರೈತರಿಗೆ ಪರಿಹಾರ ನೀಡಬೇಕು: ವಿಜಯೇಂದ್ರ ಆಗ್ರಹ
x

Tungabhadra Dam Gate Break | ರೈತರಿಗೆ ಪರಿಹಾರ ನೀಡಬೇಕು: ವಿಜಯೇಂದ್ರ ಆಗ್ರಹ


ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ರಾಜ್ಯ ಸರ್ಕಾರವೇ ಇದರ ಜವಾಬ್ದಾರಿ ಹೊರಬೇಕು. ಜತೆಗೆ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಅದೇ ರೀತಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೂಡ ಜಲಾಶಯದ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗಾರರಿಗೆ ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್‌ ಅನ್ನು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿವೆ.

ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಬಿ ವೈ ವಿಜಯೇಂದ್ರ, ʻʻತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ಮೂರು ರಾಜ್ಯದ ರೈತರಿಗೆ ವರವಾಗಿದೆ. ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ವರುಣನ ಕೃಪೆಯಿಂದ ಜಲಾಶಯ ಭರ್ತಿಯಾಗಿ ರೈತರು ಸಂತಸದಿಂದ ಇದ್ದರು. ಎರಡು ಬೆಳೆ ಬೆಳೆವ ನಿರೀಕ್ಷೆಯಲ್ಲಿದ್ದರು. ಗೇಟ್ ಕಳಚಿ ಬಿದ್ದು ಆತಂಕ ತಂದಿದೆʼʼ ಎಂದರು.

ʻʻನಾನು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರ ಮಾತು ಕೇಳಿದೆ. ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಆಗಿದೆ. ಇದಕ್ಕೆ ಹೊಣೆ ಯಾರು? ಸಚಿವರು ಯಾರನ್ನೂ ಹೊಣೆ ಮಾಡಲ್ಲ ಎನ್ನುತ್ತಾರೆ. ಹಾಗಾದರೆ ಯಾರು ಹೊಣೆ? ಸರ್ಕಾರವೇ ಇದಕ್ಕೆ ಹೊಣೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ಹೆಕ್ಟೇರ್ ಗೆ 50 ಸಾವಿರ ರೂ. ಪರಿಹಾರ ಕೊಡಬೇಕು‌ʼʼ ಎಂದು ಆಗ್ರಹಿಸಿದರು.

ʻʻತಜ್ಞರು ನೀಡಿದ ವರದಿ ಯಾಕೆ ಪರಿಗಣಿಸಿಲ್ಲ? ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರದ್ದು ಎಂದು ತುಂಗಭದ್ರಾ ಮಂಡಳಿಯ ಮೇಲೆ ಹೊಣೆ ಹಾಕುವ ಬದಲು ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಲಿ. ನಾವೇನು ರಾಜಕಾರಣ ಮಾಡಲು ಬಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಮ್ಮ ಆಶಯ. ಅಧಿಕಾರಿಗಳ ಜತೆ ಬೊಮ್ಮಾಯಿಯವರು ಚರ್ಚಸಿ ಸಲಹೆ ನೀಡುತ್ತಾರೆʼʼ ಎಂದರು.

ವಿಶೇಷ ಪ್ಯಾಕೇಜ್‌ಗೆ ರೈತ ಸಂಘಟನೆ ಆಗ್ರಹ

ಈ ಬಾರಿ ಒಂದು ಬೆಳೆಗೆ ಸಹ ನೀರು ಸಿಗುವುದು ನಮಗೆ ಅನುಮಾನವಿದೆ. ಹೀಗಾಗಿ ಸರ್ಕಾರ ತಕ್ಷಣ ಭತ್ತದ ಬೆಳೆಗಾರರಿಗೆ ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್‌ ಅನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ವಿಜಯನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ, ʻʻಒಂದು ಬೆಳೆಗೆ ನೀರು ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿರುವುದು ಮಳೆ ಬರುವ ಅಂದಾಜಿನ ಮೇರೆಗೆ ಮಾತ್ರ. ಹಿಂಗಾರು ಮಳೆ ಬಾರದೆ ಹೋದರೆ ಒಂದು ಬೆಳೆಗೂ ನೀರು ಸಿಗುವುದಿಲ್ಲ, ಸರ್ಕಾರ ತಕ್ಷಣ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕುʼʼ ಎಂದು ಒತ್ತಾಯಿಸಿದರು.

ʻʻಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಗೇಟ್ ಒಡೆದು ಹೋಗಲು ಕೇವಲ ಅಧಿಕಾರಿಗಳನ್ನು ದೂರುವುದು ಸರಿಯಲ್ಲ. ಸರ್ಕಾರದ ಹೊಣೆಗಾರಿಕೆ ಅಷ್ಟೇ ಇದೆ. ಜಿಲ್ಲಾ ಉಸ್ತುವಾರಿ ಸಚಿವರೇ ಸ್ಥಳಕ್ಕೆ ಬಂದಿಲ್ಲ ಎಂದರೆ ಸರ್ಕಾರಕ್ಕೆ ಇರುವ ಕಾಳಜಿ ಅರ್ಥವಾಗುವಂತದ್ದೇ ಆಗಿದೆ. ಈ ಘಟನೆ ಅತ್ಯಂತ ದುಃಖಕರʼʼ ಎಂದು ವಾಸುದೇವ ಮೇಟಿ ಆರೋಪಿಸಿದರು.

Read More
Next Story