Tungabhadra Dam Gate Break | ಬೆಳೆಗೆ ತೊಂದರೆಯಾಗದಂತೆ ಕ್ರಮ: ರೈತರಿಗೆ ಸಿಎಂ ಅಭಯ
x

Tungabhadra Dam Gate Break | ಬೆಳೆಗೆ ತೊಂದರೆಯಾಗದಂತೆ ಕ್ರಮ: ರೈತರಿಗೆ ಸಿಎಂ ಅಭಯ

"ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಮತ್ತೆ ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆತಂಕ ಪಡಬೇಕಿಲ್ಲʼʼ ಎಂದು ಸಿಎಂ ಭರವಸೆ ನೀಡಿದರು.


ತುಂಗಭದ್ರಾ ಡ್ಯಾಮ್ ಕ್ರೆಸ್ಟ್ ಗೇಟ್ ಕಿತ್ತುಹೋಗಿರುವುದರಿಂದ ನೀರು ಹರಿದು ಪೋಲಾಗುತ್ತಿದೆ. ಆದರೆ ಹವಾಮಾನ ಮುನ್ಸೂಚನೆಯಂತೆ ಮತ್ತೆ ಮಳೆಯಾಗಿ ಪೋಲಾಗಿರುವ ನೀರು ತುಂಬಿಕೊಳ್ಳಲಿದೆ. ರೈತರ ಫಸಲಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ʻʻಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲʼʼ ಎಂದು ಹೇಳಿದರು.

ʻʻತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನಃ ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಮತ್ತೆ ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆತಂಕ ಪಡಬೇಕಿಲ್ಲʼʼ ಎಂದು ಭರವಸೆ ನೀಡಿದರು.

ತಜ್ಞರ ಸಲಹೆ ಮೇರೆಗೆ ದುರಸ್ತಿ ಕಾರ್ಯ

ʻʻಜಲಾಶಯದಲ್ಲಿ ಈ ವರ್ಷ 115 ಟಿಎಂಸಿ ನೀರಿದ್ದು, ಈಗಾಗಲೇ 25 ಟಿಎಂಸಿ ನೀರನ್ನು ರೈತರ ಜಮೀನಿಗೆ ಬಿಡಲಾಗಿದೆ. ರೈತರ ಮೊದಲನೇ ಬೆಳೆಗೆ 90 ಟಿಎಂಸಿ ನೀರು ಬೇಕಾಗಿದ್ದು, ಈ ಪ್ರಮಾಣದ ನೀರು ಜಲಾಶಯದಲ್ಲಿ ಲಭ್ಯವಿದೆ. ಆದರೆ ಜಲಾಶಯದ 19 ನೇ ಗೇಟ್ ತುಂಡಾಗಿರುವುದರಿಂದ 35 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಜಲಾಶಯದ ನೀರನ್ನು ಬಿಡದೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟವನ್ನು ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ನೀರು ಉಳಿಯುತ್ತದೆ. ಗೇಟ್ ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದುಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದ್ದು, ಕನ್ನಯ್ಯ ನಾಯ್ಡು ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆʼʼ ಎಂದರು.

ಆಗಸ್ಟ್ 17 ರಿಂದ ರಾಜ್ಯದಲ್ಲಿ ಹೆಚ್ಚಿನ ಮಳೆ ನಿರೀಕ್ಷೆ

ʻʻಕರ್ನಾಟಕದಲ್ಲಿ ಸುಮಾರು 9 ಲಕ್ಷ ಹಾಗೂ ಆಂಧ್ರ ತೆಲಂಗಾಣಗಳಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಕಿರುವ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅದಲ್ಲದೇ, ಆಗಸ್ಟ್ 17 ರಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬರುವ ನಿರೀಕ್ಷೆ ಇದೆʼʼ ಎಂದು ಹೇಳಿದರು.

ಇಂತಹ ಘಟನೆಗಳಿಗೆ ಯಾರು ಹೊಣೆ ಹೊರುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ʻʻಕೇಂದ್ರ ಸರ್ಕಾರ ನೇಮಿಸಿದ ತುಂಗಭದ್ರ ಮಂಡಳಿ ಅಸ್ತಿತ್ವದಲ್ಲಿದ್ದು, ಇದರಲ್ಲಿ ಕೇಂದ್ರ ಜಲ ಆಯೋಗ ಹಾಗೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ರಾಜ್ಯದ ಸದಸ್ಯರೂ ಇದರಲ್ಲಿದ್ದಾರೆ. ಇಂತಹ ಘಟನೆಗಳಿಗೆ ಕಾರಣವೇನು ಎಂಬುದರ ಬಗ್ಗೆ ವಿಶ್ಲೇಷಣೆ ಅಗತ್ಯʼʼ ಎಂದರು.

ನವಲಿ ಜಲಾಶಯ: ಒಪ್ಪಿಗೆ ನಂತರ ಕಾಮಗಾರಿ ಪ್ರಾರಂಭ

ನವಲಿ ಜಲಾಶಯ ನಿರ್ಮಾಣಕ್ಕೆ15 ಸಾವಿರ ಕೋಟಿ ರೂ.ಗಳ ಡಿಪಿಆರ್ ತಯಾರಾಗಿದ್ದು, ಇದು ಅಂತರರಾಜ್ಯ ಯೋಜನೆಯಾಗಿದೆ. ಡಿಪಿಆರ್ ಗೆ ಒಪ್ಪಿಗೆ ದೊರೆತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಬಾಗಿನ ಅರ್ಪಿಸಲು ನಾನೇ ಬರುತ್ತೇನೆ

ʻʻತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಆಗಮಿಸುತ್ತೇನೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Read More
Next Story