
ಕೋಟಿ-ಚೆನ್ನಯರ ಗರಡಿ ಜಾತ್ರೆ: ಐತಿಹಾಸಿಕ ಕೋಳಿ ಅಂಕಕ್ಕೆ ತ.ನಾಡಿನ ಫೈಟರ್ ಕೋಳಿ! ಆದರೆ....
ಕಂಕನಾಡಿಯ ಕೋಳಿ ಅಂಕದಲ್ಲಿ ಕೇರಳ, ತಮಿಳುನಾಡಿನ ಮಂದಿ ಕೂಡಾ ಭಾಗವಹಿಸುವುದು ಸಾಮಾನ್ಯ. ತಮಿಳುನಾಡು ಮೂಲದ ಫೈಟರ್ ಕೋಳಿಗಳು ಎಂದೇ ಹೇಳಲಾಗುವ ʼಈರೋಡ್ ಕೋಳಿʼಗಳ ಬಳಕೆ ಇಲ್ಲಿದೆ!
ಕರ್ನಾಟಕ ಕರಾವಳಿಯಲ್ಲಿ ಬಲು ಜನಪ್ರಿಯವಾಗಿದ್ದ ಕೋಳಿ ಅಂಕಕ್ಕೆ ಬಹುತೇಕ ತೆರೆ ಬಿದ್ದಿರುವಂತೆಯೇ ಸಾಂಪ್ರದಾಯಿಕ ವಾಗಿ ನಡೆಯುತ್ತಿದ್ದ ಜಾತ್ರೆಗಳ ಸಂದರ್ಭದಲ್ಲಿ ಕೋಳಿ ಕಾಳಗಕ್ಕೆ ಅನುಮತಿ ದೊರೆಯಬಹುದೇ ಎಂಬ ಚರ್ಚೆ ಆರಂಭವಾಗಿದೆ. ಮಂಗಳೂರು ನಗರದ ಕಂಕನಾಡಿಯ ಇತಿಹಾಸ ಪ್ರಸಿದ್ಧ ಗರೋಡಿ ಜಾತ್ರೆಯ ಕೋಳಿ ಅಂಕಕ್ಕೆ ಇದೀಗ ನಡೆಯುತ್ತೋ-ಇಲ್ಲವೋ ಎಂಬ ಲೆಕ್ಕಾಚಾರ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಎಂಬಲ್ಲಿ ಸರಾಗವಾಗಿ ಮೂರು ದಿನಗಳ ಕಾಲ ನಡೆಯಬೇಕಿದ್ದ ಸಂಪ್ರದಾಯದ ಕೋಳಿ ಅಂಕಕ್ಕೆ ಪೊಲೀಸ್ ದಾಳಿ ನಡೆದ ಬಳಿಕ ಜೂಜಾಟ ಪ್ರಿಯರು ಹಲವಾರು ದೇವಸ್ಥಾನ-ದೈವಸ್ಥಾನಗಳ ಜಾತ್ರೆಯ ಕೋಳಿ ಅಂಕಗಳನ್ನು ಮರೆತೇ ಬಿಡುವಂತಾಗಿದೆ. ಪ್ರತಿಯೊಂದು ಜಾತ್ರೆ-ಉತ್ಸವಕ್ಕಿಂತಲೂ ಕೋಳಿ ಅಂಕದ ಬಗ್ಗೆಯೇ ಹೆಚ್ಚು ಚರ್ಚೆ ಮಾಡುವ ಜನರು ಇದೀಗ ಮಂಗಳೂರು ನಗರದ ಕಂಕನಾಡಿ ಬ್ರಹ್ಮ ಬೈದರ್ಕಳ ಗರೋಡಿ ಜಾತ್ರೆಯ ಕೋಳಿ ಅಂಕ ನಡೆಯುವ ಬಗ್ಗೆ ಭಾರೀ ಚರ್ಚೆ ಆರಂಭಿಸಿದ್ದಾರೆ.
ಜಾತ್ರೆ ಜನವರಿ 2 ರಂದು ಆರಂಭಗೊಂಡಿದ್ದು, ಜ. 6ರ ವರೆಗೆ ನಡೆಯಲಿದೆ. ಇದಕ್ಕೂ ಮುನ್ನ 'ಕೋಳಿ ಕುಂಟ' ಎಂಬ ಸಂಪ್ರದಾಯ ಕ್ರಮ ಡಿಸೆಂಬರ್ 25ರಂದು ನಡೆದಿದ್ದು, ಇದು ಕೋಳಿ ಕಟ್ಟಿ ಹಾಕಲು ಮಾಡಿರುವ ವ್ಯವಸ್ಥೆಯಾಗಿದೆ. ಜನವರಿ 6ರ ಬಳಿಕ ಭಾರೀ ಜನಸಂಖ್ಯೆಯಲ್ಲಿ ಕೋಳಿ ಅಂಕ ನಡೆಯುವುದು ವಾಡಿಕೆಯಾಗಿತ್ತು. ಅದೆಲ್ಲಾ ಕಳೆದೊಂದು ವರ್ಷದಿಂದ ಇತಿಹಾಸದ ಪುಟ ಸೇರುತ್ತಿದೆ.
ಕಂಕನಾಡಿ ಗರೋಡಿಗೆ 15ನೇ ಶತಮಾನದ ತುಳುನಾಡ ವೀರ ಪುರುಷರಾದ ಕೋಟಿ -ಚೆನ್ನಯ ಕಾರಣಿಕ ಪುರುಷರ ಇತಿಹಾಸವಿದ್ದು, ಪ್ರತೀ ವರ್ಷದ ಜಾತ್ರೆಗೆ ಐದು ದಿನಗಳ ಕಾಲ ಕೋಳಿ ಅಂಕ ನಡೆಯುತ್ತಿತ್ತು. ಇದೀಗ ಕೋಳಿ ಕಾದಾಟ ನಡೆಯುವುದೇ ಸಂಶಯ ಎಂಬಲ್ಲಿಗೆ ತಲುಪಿದೆ. ಇಲ್ಲಿನ ಕೋಳಿ ಅಂಕ ನಗರದ ಮಂದಿಗೂ, ಸುತ್ತಮುತ್ತಲಿನ ಜಿಲ್ಲೆಗಳ ಮಂದಿಗೂ ಮೋಜಿನದ್ದಾಗಿದ್ದು, ಕದನಕ್ಕೆ ಸಿದ್ದವಾಗುವ ಒಂದು ಜೊತೆ ಕೋಳಿಗಳ ಮೇಲೆ ಒಂದು ಲಕ್ಷ ರೂಪಾಯಿಗೂ ಮೇಲೆ ಜೂಜು ಚಲಾವಣೆ ಯಾಗುತ್ತದೆ. ನಗರ ಶ್ರೀಮಂತರು ಕೂಡಾ ಭಾಗವಹಿಸುವ ಈ ಜೂಜಾಟ, ದೈವಸ್ಥಾನದ ಜಾತ್ರೆಗಿಂತಲೂ ಅಧಿಕ ಜನರನ್ನು ಆಕರ್ಷಿಸುತ್ತದೆ. ಇತ್ತೀಚಿನ ವರ್ಷಗಳಿಂದ ಕಾದಾಟದ ಕೋಳಿಗಳ ಬೆಲೆ ಕೂಡಾ ಬಹಳಷ್ಟು ಏರಿಕೆಯಾಗಿದ್ದು, ಜೂಜು ಕೂಡಾ ಲಕ್ಷ ರೂಪಾಯಿಗಿಂತ ಕಡಿಮೆ ಇಲ್ಲವಾಗಿದೆ.
ಕಂಕನಾಡಿಯ ಕೋಳಿ ಅಂಕದಲ್ಲಿ ಕೇರಳ, ತಮಿಳುನಾಡಿನ ಮಂದಿ ಕೂಡಾ ಭಾಗವಹಿಸುವುದು ಸಾಮಾನ್ಯವಾಗಿದ್ದು, ಇದಕ್ಕೆ ರೈಲ್ವೆ ಸಂಪರ್ಕ ಕನಿಷ್ಠ ದೂರದ್ದಾಗಿರುವುದು ಕಾರಣವಾಗಿದೆ. ಹಾಗೆಯೇ ತಮಿಳುನಾಡು ಮೂಲದ ಫೈಟರ್ ಕೋಳಿಗಳು ಎಂದೇ ಹೇಳಲಾಗುವ ʼಈರೋಡ್ ಕೋಳಿʼಗಳು ಇಲ್ಲಿ ಸ್ಥಳೀಯ ಕೋಳಿಗಳಿಗಿಂತ ಹೆಚ್ಚಾಗಿ ಬಳಕೆಯಾಗುತ್ತವೆ. ಈರೋಡ್ ಕೋಳಿ ಬೆಲೆ ಒಂದಕ್ಕೆ ಕನಿಷ್ಠ ಎಂದರೆ ₹5,000 ಇರುತ್ತದೆ. ಇದು ಆಯಾ ಕೋಳಿಗಳ ಬಣ್ಣ, ಗಾತ್ರ ಮತ್ತು ಅವುಗಳ ದೇಖಿ -ಗಾಂಭೀರ್ಯ ನೋಟದ ಆಧಾರದಲ್ಲಿ ₹30,000 ವರೆಗೂ ಇರುತ್ತದೆ. ವಿಶೇಷವೆಂದರೆ ಈ ಕೋಳಿಗಳನ್ನು ತೂಕದ ಆಧಾರದಲ್ಲಿ ಮಾರಾಟ ಮಾಡುವುದಿಲ್ಲ.
ʼಕೋಳಿ ಕಟ್ಟʼದ ನಿರಾಸೆ?
ಗರೋಡಿ ದೈವಸ್ಥಾನದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಪಕ್ಷದ ಮಂದಿ ಇದ್ದಾರೆ ಅವರೆಲ್ಲ ಸೇರಿ ಅನುಮತಿ ಕೊಡಿಸುತ್ತಾರೆ ಎಂಬ ಮಾತು ಕೋಳಿ ಅಂಕ ಪ್ರಿಯರ ವಲಯದ ಮಧ್ಯೆ ಕೇಳಿ ಬರುತ್ತಿದೆ. ಆದರೆ ಇದುವರೆಗೂ ಯಾರೂ ಪೊಲೀಸ್ ಇಲಾಖೆಯನ್ನು ಕೋಳಿ ಅಂಕದ ಅನುಮತಿಗಾಗಿ ಸಂಪರ್ಕ ಮಾಡಿಲ್ಲ.
ಏಕೆ ನಿಷೇಧ?
ಪ್ರಾಣಿ ಹಿಂಸೆ ವಿರೋಧಿ ಕಾನೂನು 1960(Prevention of cruelty to animals act-1960)ರ ಪ್ರಕಾರ ಕೋಳಿ ಕಾದಾಟ ಕಾನೂನು ಬಾಹಿರವಾಗಿದೆ. ಕೋಳಿಗಳ ಕಾಲಿಗೆ ಚೂಪಾದ ಸಣ್ಣ ಚೂರಿ ರೀತಿಯ ಆಯುಧ ಕಟ್ಟುವುದು ಇದಕ್ಕೆ ಕಾರಣವಾಗಿದೆ.
ಕೋಳಿ ಅಂಕ- ಹಿಂಸೆ ಮಾತ್ರವಲ್ಲ!
ಕೋಳಿ ಅಂಕದಲ್ಲಿ ಕೋಳಿಗಳ ಕಾದಾಟ, ಜೂಜು ಮಾತ್ರವಲ್ಲದೆ ಮನುಷ್ಯರೂ, ಹಿಂಸಾಚಾರಕ್ಕೆ ಇಳಿಯುವುದಿದೆ. ಕೋಳಿಗಳ ಕದನದ ತೀರ್ಪಿನಲ್ಲಿ ಆಗುವ ಅಸಮಾಧಾನ ಜಗಳಕ್ಕೆ ಕಾರಣವಾಗುತ್ತದೆ. ಹಾಗೆಯೇ ಜೂಜಿನ ಹಣದ ವ್ಯತ್ಯಾಸ ಕೂಡಾ ಅವಾಚ್ಯ ಶಬ್ದಗಳ ಬಳಕೆ, ಮಾರಣಾನಾಂತಿಕ ಹಲ್ಲೆಯವರೆಗೂ ಸಾಗುತ್ತದೆ. ಸ್ಥಳೀಯ ರೌಡಿ ಶೀಟರ್ ಗಳೂ ಇಲ್ಲಿ ರಾರಾಜಿಸುತ್ತಾರೆ. ಇನ್ನು ಸಣ್ಣ ಚೂರಿಗಳ ಬಳಕೆ ಕಾರಣ ಕಾದಾಟದ ಕೋಳಿಗಳನ್ನು ಹಿಡಿಯುವ ವೇಳೆ ಆಗುವ ಗಾಯಗಳು ಕೂಡಾ ಜೀವಕ್ಕೆ ಕುತ್ತು ತಂದ ಉದಾಹರಣೆಗಳಿವೆ. ಕೋಳಿ ಅಂಕದ ಸ್ಥಳದಲ್ಲಿ ಉಂಟಾದ ಕೆಲವೊಂದು ಘಟನೆಗಳು ವೈಷಮ್ಯದ ತಾರಕಕ್ಕೇರಿ ಕೋಳಿ ಕದನದ ನಂತರವೂ ಮುಂದೆ ಸಾಗಿದ್ದಿದೆ.
ಕಾನೂನು 1960 ರ ಕಾಲದ್ದಾದರೂ ಸಂಪ್ರದಾಯದ, ಧಾರ್ಮಿಕ ಆಚರಣೆ ಹೆಸರಲ್ಲಿ ಮತ್ತು ರಾಜಕೀಯ ಪ್ರಭಾವದಲ್ಲಿ ಕೋಳಿ ಅಂಕ ನಡೆಯುತ್ತಾ ಬಂದಿತ್ತು. ಸ್ಥಳೀಯರು ಜಾತ್ರೆ ಪ್ರಯುಕ್ತ ನಡೆಯುವ ಕೋಳಿ ಅಂಕವನ್ನು 'ರಕ್ತ ತರ್ಪಣ' ಎಂದು ಬಣ್ಣಿಸುವುದು ಸಾಮಾನ್ಯವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಜಾತ್ರೆ-ಉತ್ಸವದ ಪ್ರಯುಕ್ತ ಸಂಪ್ರದಾಯದ್ದು ಮಾತ್ರವಲ್ಲದೇ ಜೂಜಿಗಾಗಿ ವಾರಕ್ಕೊಮ್ಮೆ ಅಲ್ಲಲ್ಲಿ ಕಾದಾಟ ಕಾರ್ಯಕ್ರಮ ನಡೆಯುವುದು ಕೂಡಾ ಸಾಮಾನ್ಯವಾಗಿತ್ತು. ಕ್ರೀಡೋತ್ಸವ ಗಳ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಗಳನ್ನು ಕೂಡಾ ಮುದ್ರಿಸಲಾಗುತ್ತಿತ್ತು.
ಅಂಕದ ಕೋಳಿ ರುಚಿ ವೈವಿಧ್ಯತೆ!
ಕಾಳಗದಲ್ಲಿ ಸಾಯುವ ಅಥವಾ ಗಂಭೀರ ಗಾಯಗೊಂಡು ಕಾದಾಡಲು ಸಾಧ್ಯವಾಗದ ಕೋಳಿಗೆ 'ಒಟ್ಟೆ' ಎಂದು ಕರೆಯಲಾಗುತ್ತದೆ. ಹೀಗೆ ಸೋತ ಕೋಳಿಯ ಮಾಂಸ ಬಲು ರುಚಿಕರ ಎಂಬದು ಹೇಳಲಾಗುತ್ತದೆ. ಇವು ನಾಟಿಕೋಳಿಗಳೇ ಆಗಿದ್ದರೂ ಯಾವುದೇ ರೀತಿಯ ಬೇಗನೆ ಬೆಳೆಯುವ ಹಾರ್ಮೋನ್ ಇಂಜೆಕ್ಷನ್ ಇಲ್ಲದೇ ಬೆಳೆಸುವ ಕಾರಣಕ್ಕೆ ಇವು ನೈಜ ರುಚಿ ಹೊಂದಿರುತ್ತವೆ. ಹಾಗೆಯೇ ಅಂಕ ಪ್ರಿಯರು ಇವನ್ನು ತಮ್ಮ ಮನೆಯ ಸದಸ್ಯರಂತೆ (Pet) ಆಗಿ ಸಾಕುತ್ತಾರೆ. ಹಾಗಾಗಿ ಹೆಚ್ಚು ರುಚಿಕರ ಎನ್ನಲಾಗುತ್ತದೆ. ಆದರೂ ಈ ಕಾದಾಟದ ಕೋಳಿಗಳಿಗೆ ಹೆಚ್ಚಿನ ಗರ್ವ-ಕೆಚ್ಚು ಬರಲೆಂದು ಹಲ್ಲಿಗಳನ್ನು ವೃತ್ತಿ ಪರ ಕೋಳಿ ಅಂಕ ಪ್ರಿಯರು ತಿನ್ನಿಸುತ್ತಾರೆ ಎಂಬುದು ಕೂಡಾ ಎಲ್ಲರಿಗೂ ತಿಳಿದ ವಿಚಾರವಾಗಿದೆ.
ಬಾಳ್ ಮನುಷ್ಯರಿಗೆ ತಾಗುವುದು!
ಕೋಳಿಗಳ ಕಾಲಿಗೆ ಕಟ್ಟಲಾಗುವ ಚಿಕ್ಕ ಚೂರಿಗಳು ಬಹು ಹರಿತವಾಗಿದ್ದು, ಅಂಕದ ವೇಳೆ ನೆರೆದಿದ್ದ ಜನರಿಗೆ ಮತ್ತು ಕೋಳಿಗಳನ್ನು ಕಾದಾಟಕ್ಕೆ ಬಿಡುವ ವ್ಯಕ್ತಿಗಳಿಗೆ ಗಾಯವಾಗುವುದೂ ಇದೆ. ಇದು ಕೆಲವೊಮ್ಮೆ ಮಾರಣಾಂತಿಕವೂ ಆಗಿರುತ್ತದೆ. ಕೇಪುವಿನಲ್ಲಿ ಮೊನ್ನೆ ಪೊಲೀಸ್ ದಾಳಿಗೂ ಮುನ್ನ ನಡೆದ ಕೋಳಿ ಅಂಕದಲ್ಲಿ ಅಳಿಕೆ ನಿವಾಸಿ ರವೀಂದ್ರ ಎಂಬವರಿಗೆ ಕೈಗೆ ಬಾಳ್ ತಾಗಿದ ಕಾರಣ ಗಂಭೀರ ಗಾಯವಾಗಿತ್ತು!
ಬಾಳ್ ಇಲ್ಲದೇ ಅಂಕವಿಲ್ಲ!
ಕೇಪು ನಿವಾಸಿ 80 ರ ಹರೆಯದ ಜತ್ತಪ್ಪ ರೈ ಪ್ರಕಾರ ಕೋಳಿ ಅಂಕ ಎಂದರೆ ಅದರಲ್ಲಿ ಕೋಳಿಯ ಕಾಲಿಗೆ ಬಾಳು(ಸಣ್ಣ ಚೂರಿ) ಕಟ್ಟದಿದ್ದರೆ ಅಲ್ಲಿ ರಕ್ತ ಭೂಮಿಗೆ ಬೀಳುವುದಿಲ್ಲ. ಹಾಗಾಗಿ ಅದು ಕೋಳಿ ಅಂಕವೇ ಆಗುದಿಲ್ಲ, ಎನ್ನುತ್ತಾರೆ. ``ಇಲ್ಲಿನ ಕೋಳಿ ಅಂಕವು ಅನಾದಿ ಕಾಲದಿಂದ ನಡೆಯುತ್ತಿದ್ದು, ರಾಜಮನೆತನದ ಕಾಲದಿಂದದಲೂ ಪ್ರತೀ ವiನೆಯಲ್ಲಿಯೂ ಇಲ್ಲಿನ ಕೋಳಿ ಅಂಕಕ್ಕೆಂದು ಕನಿಷ್ಠ ಒಂದು ಕೋಳಿಯನ್ನು ಮೀಸಲಿರಿಸುತ್ತಿದ್ದರು. ಇಲ್ಲಿನ ಅಂಕಕ್ಕೆ ಸಮಾಜದ ಎಲ್ಲಾ ವರ್ಗದ ಜನರಿಂದ ಮಾನ್ಯತೆ ಇತ್ತು’’ ಎನ್ನುತ್ತಾರವರು.
ಜೂಜು ರಹಿತ ಎಂಬ ಕಾರಣದಿಂದ ಈ ಹಿಂದೆ ಪೊಲೀಸರೂ ಕೂಡಾ ಇಲ್ಲಿನ ಕೋಳಿ ಅಂಕಕ್ಕೆ ಧಾರ್ಮಿಕ ಮತ್ತು ಸಂಪ್ರದಾಯದ ಹಿನ್ನೆಲೆಯಲ್ಲಿ `ಸಾಫ್ಟ್ ಕಾರ್ನರ್’ ತೋರಿಸುತ್ತಿದ್ದರು. ಆದರೆ ಜಿಲ್ಲೆಗೆ ಎಸ್‌ಪಿ ಯಾಗಿ ಡಾ. ಅರುಣ್ ಕೆ. ಆಗಮಿಸಿದ ಮೇಲೆ ಕಾನೂನಲ್ಲಿ ಅವಕಾಶ ಇಲ್ಲ ಎಂಬ ವಿಚಾರಣೆ ಮನ್ನಣೆ ನೀಡಿರುವುದು ಗಮನಾರ್ಹ.
ಕೋಳಿ ಅಂಕ ರಾಜಕೀಯ
ಕರಾವಳಿ ರಾಜಕಾರಣದಲ್ಲಿ ಕೋಳಿ ಅಂಕದ್ದೇ ಮಾತು. ಬಿಜೆಪಿ ನಾಯಕರು ಕೋಳಿ ಅಂಕಕ್ಕೆ "ಸ್ಥಳೀಯ ಸಂಸ್ಕೃತಿʼ ಹೆಸರಿನಲ್ಲಿ ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್ ನಾಯಕರು ಕೋಳಿ ಅಂಕ ನಿಲ್ಲಿಸಲು ಪಿತೂರಿ ನಡೆಸುತ್ತಿದ್ದಾರೆ ಎಂಬ ಅರೋಪ ಬಿಜೆಪಿ ಮುಖಂಡರದ್ದು.
ಬಂಟ್ವಾಳ ತಾಲೂಕಿನ ಕೇಪು ಎಂಬಲ್ಲಿನ ಕೋಳಿ ಅಂಕಕ್ಕೆ ತಡೆಯಾದಾಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಧ್ಯ ಪ್ರವೇಶಿಸಿದರೂ, ಪೊಲೀಸ್ ಇಲಾಖೆ ಕಾನೂನನ್ನೇ ಎತ್ತಿ ಹಿಡಿದು ಶಾಸಕ ರ ಮೇಲೆ ಕೂಡಾ ಕೇಸು ದಾಖಲಿಸಿದ್ದರು. ಶಾಸಕ ರೈ, ಈ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿತ್ತು. ಇದಕ್ಕೆ ಸಮನಾಗಿ ಮಾರನೇ ದಿನ ಬಿಜೆಪಿ ನಾಯಕರು ಕೋಳಿ ಅಂಕಕ್ಕೆ ಪ್ರೇರೇಪಿಸಿ, ಕೇಸು ಜಡಿಸಿಕೊಂಡಿದ್ದರು.
ಸ್ಥಳೀಯವಾಗಿ ಇಲ್ಲಿನ ದೈವಸ್ಥಾನಕ್ಕೆ 800ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗಿದ್ದರೂ, ಇಲ್ಲಿನ ಉತ್ಸವ ಕರ‍್ಯಗಳಿಗೆ ಹೆಚ್ಚಿನ ಮಾನ್ಯತೆ ನೀಡಿದ್ದು 400 ವರ್ಷಗಳ ಹಿಂದಿನ ವಿಟ್ಲದ ಆಳ್ವಿಕೆ ನಡೆಸಿದ್ದ ದೊಂಬ ಹೆಗಡೆ ಮನೆತನದ ಅರಸರು. ಅಂದಿನಿಂದಲೂ ಅರಸರುಗಳ ಕಟ್ಟಪ್ಪಣೆಯಂತೆ ಜೂಜುರಹಿತವಾಗಿಯೇ ಅಂಕ ನಡೆಯುತ್ತಿತ್ತು, ಎನ್ನಲಾಗಿದೆ.
ಕಾಂಗ್ರೆಸ್‌ನಿಂದ ಕೋಳಿ ಅಂಕಕ್ಕೆ ಅಂಕೆ ಎಂಬ ಅರೋಪ
ಈಗ " ಕೋಳಿ ಅಂಕವನ್ನು ನಾನು ಪೊಲೀಸ್ ಬಲದ ಮೂಲಕ ತಡೆಯುವ ಪ್ರಯತ್ನ ಮಾಡುತ್ತಿದ್ದೇನೆ," ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿರುವ ಕುರಿತು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ತಮ್ಮ 'ಎಕ್ಸ್ ' ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ."
ಕೆಲವೊಂದು ಪಟ್ಟ ಭದ್ರ ಹಿತಾಸಕ್ತಿಗಳು ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದು, ಸುಳ್ಳು ಸುದ್ದಿ ಹರಡುತ್ತಿದ್ದಾರೆ.ಕೋಳಿ ಅಂಕ ಸಂಬಂಧಿಸಿ ಯಾರೂ ಕೂಡಾ ನನ್ನನ್ನು ಸಂಪರ್ಕ ಮಾಡಿಲ್ಲ. ವ್ಯಕ್ತಿ ಗಳಾಗಲೀ, ಇಲಾಖೆಯವರಾಗಲೀ, ನನ್ನ ಬಳಿ ಕೋಳಿ ಅಂಕದ ಕುರಿತು ಮಾತನಾಡಿಲ್ಲ. ಹಾಗಾಗಿ ಅದನ್ನು ತಡೆಯುವ ಅಥವಾ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಾನು ಕರಾವಳಿಯ ಮೂಢನಂಬಿಕೆ- ರಹಿತ ಜೂಜು ರಹಿತ,ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬೆಂಬಲಿಸುತ್ತಾಲೇ ಬಂದಿದ್ದೇನೆ," ಎಂದವರು ಹೇಳಿದ್ದಾರೆ.

