
TUDA | ತುಮಕೂರಿನಲ್ಲಿ ಬಡಾವಣೆ ನಿರ್ಮಿಸಲು ಕೃಷಿ ಭೂಮಿ ಸ್ವಾಧೀನಕ್ಕೆ ಯತ್ನ; ರೈತರಿಂದ ತೀವ್ರ ಆಕ್ಷೇಪ
ಬಹುತೇಕ 10ಗುಂಟೆ, 20ಗುಂಟೆ ಭೂಮಿ ಹೊಂದಿದ್ದು, ಅತಿಸಣ್ಣ ರೈತರ ಭೂಮಿಗಳಲ್ಲಿ ಟುಡಾ ಯೋಜನೆಯಂತೆ ರಸ್ತೆ, ನಿವೇಶನ ನಿರ್ಮಾಣವಾದರೆ ರೈತರಿಗೆ ಯಾವ ರೀತಿ ಪರಿಹಾರ ನೀಡಲಾಗುತ್ತದೆ ಎಂಬುದು ರೈತರ ಪ್ರಶ್ನೆಯಾಗಿದೆ.
ತುಮಕೂರು ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ಸರ್ವೆ ನಂಬರ್‌ಗಳಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವ ತುಮಕೂರು ಅಭಿವೃದ್ಧಿ ಪ್ರಾಧಿಕಾರದ(ಟುಡಾ) ಕ್ರಮಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 2 ಹಾಗೂ 3ರ ವ್ಯಾಪ್ತಿಗೆ ಬರುವ ತುಮಕೂರು ಅಮಾನಿಕೆರೆ ಹಿಂಭಾಗದಿಂದ ರಿಂಗ್ ರಸ್ತೆಯವರೆಗೆ ಅಂದಾಜು 100ಎಕರೆ ವ್ಯವಸಾಯ ಭೂಮಿ ಸ್ವಾಧೀನಕ್ಕೆ ಟುಡಾ ಯೋಜನೆ ರೂಪಿಸಿದೆ. ಶೇ 50:50 ಅನುಪಾತದಲ್ಲಿ ವಸತಿ ಪ್ರದೇಶ ನಿರ್ಮಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಭೂಮಿ ಕೊಡಲು ಒಪ್ಪದ ರೈತರು ಟುಡಾ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬಡಾವಣೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅಮಾನಿಕೆರೆ ಸರ್ವೆ ನಂಬರ್‌ನಲ್ಲಿರುವ ರೈತರ ಭೂಮಿ ಪಟ್ಟಿ ಮಾಡಿದ್ದು, ಬಲಾಢ್ಯರನ್ನು ಹೊರಗಿಟ್ಟು ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಪ್ರಸ್ತಾವನೆಗೆ ರೈತರಿಂದ ತೀವ್ರ ವಿರೋಧ
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ರೈತರೊಂದಿಗೆ ಸಮನ್ವಯ ಸಮಾಲೋಚನಾ ಸಭೆ ಆಯೋಜಿಸಿದ್ದರು. ಸಭೆಯಲ್ಲೇ ರೈತರು ತಮ್ಮ ಅಸಮ್ಮತಿ ಸೂಚಿಸಿ ಹೊರನಡೆದಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಟುಡಾ ಹೊಸದಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕಾಗಿ ವ್ಯವಸಾಯ ಭೂಮಿ ಸ್ವಾಧೀನಪಡಿಸಿಕೊಳ್ಳುವ ಹುನ್ನಾರಕ್ಕೆ ರೈತ ಸಂಘಟನೆಗಳು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಭೂಮಿಗೆ ಕೊಳಚೆ ನೀರು
ಅಮಾನಿಕೆರೆ ಹಿಂಭಾಗದ ರೈತರ ಜಮೀನುಗಳಿಗೆ ವಾರ್ಡ್ ನಂಬರ್ 2 ಮತ್ತು 3ರ ಒಳಚರಂಡಿ ನೀರನ್ನು ಹರಿಸುತ್ತಿದ್ದು, ಇದರಿಂದ ರೈತರು ಉಳುಮೆ ಮಾಡುವುದನ್ನೇ ಬಿಟ್ಟಿದ್ದಾರೆ. ರೈತರ ಭೂಮಿಗಳಿಗೆ ಯುಜಿಡಿ ನೀರು ಹರಿಸದಂತೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ವ್ಯವಸಾಯ ಮಾಡಲು ಆಗದಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟುಡಾ, ರೈತರ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ.
ಪ್ರಸ್ತುತ, ರೈತರ ಭೂಮಿಯಲ್ಲಿಯೇ ಒಳಚರಂಡಿ ಹಾಗೂ ರಾಜಕಾಲುವೆ ನೀರು ನಿಲ್ಲುತ್ತಿರುವುದರಿಂದ ಯಾವುದೇ ಬೆಳೆ ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿದ್ದ ತೆಂಗಿನ ಮರಗಳು ಕೊಳೆತು ಹೋಗಿವೆ. ತುಮಕೂರು ಮಹಾನಗರ ಪಾಲಿಕೆ ತಪ್ಪಿನಿಂದಾಗಿ ಆಗಿರುವ ನಷ್ಠಕ್ಕೆ ಪರಿಹಾರ ಕೊಡುವಂತೆ ಅಲ್ಲಿನ ರೈತರು ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಈವರೆಗೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
ಕೆರೆ ಕೋಡಿ ಎತ್ತರ ಹೆಚ್ಚಳದಿಂದ ಸಮಸ್ಯೆ
ತುಮಕೂರು ಅಮಾನಿಕೆರೆಯ ಹಳೇ ಕೋಡಿಗೆ ಬದಲಾಗಿ ಹೊಸ ಕೋಡಿ ನಿರ್ಮಾಣವನ್ನು ಮಾಡಿದ್ದರೂ ಸಹ ಅಮಾನಿಕೆರೆ ರಾಜಕಾಲುವೆ ಒತ್ತುವರಿ ತೆರವುಗೊಳಿಸದೇ ಇರುವುದರಿಂದ ಅಲ್ಲಿನ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಈ ಹಿಂದೆ ಯುಜಿಡಿ ನೀರು ಹರಿಸದಂತೆ ಮನವಿ ಸಲ್ಲಿಸಿದಾಗ ಹೊಸದಾಗಿ ಕೋಡಿ ನಿರ್ಮಾಣ ಮತ್ತು ರಾಜಕಾಲುವೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗಲಿದ್ದು, ಅಲ್ಲಿಯವರೆಗೆ ಸಹಕಾರ ನೀಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಹೊಸದಾಗಿ ಕೋಡಿ ಎತ್ತರವನ್ನು ಹೆಚ್ಚಳ ಮಾಡಲಾಗಿದ್ದು, ಕೋಡಿ ನೀರು ಹರಿಯುವ ರಾಜಕಾಲುವೆಯನ್ನು ಮಾತ್ರ ಅಭಿವೃದ್ಧಿಪಡಿಸಿಲ್ಲ. ಜತೆಗೆ ಒತ್ತುವರಿ ತೆರವುಗೊಳಿಸಲು ಸಹ ಮುಂದಾಗಿಲ್ಲ. ಇದರಿಂದಾಗಿ ಯುಜಿಡಿ ನೀರು ಸರಾಗವಾಗಿ ಹರಿಯದೇ ರೈತರ ಜಮೀನಿನಲ್ಲಿಯೇ ನಿಂತು ಕೊಳಚೆ ಪ್ರದೇಶವಾಗಿ ಮಾಪಟ್ಟಿದೆ. ಕೊಳಚೆ ನೀರು ನಿಲ್ಲಿಸಿದರೆ ಸಾಕು ನಾವು ವ್ಯವಸಾಯ ಮಾಡುತ್ತೇವೆ ಎಂದು ರೈತ ಕಾಳಿಂಗಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಭೂಮಿ ವಾಪಸ್ ನೀಡಲಿ
ಟುಡಾ ಅಭಿವೃದ್ಧಿಪಡಿಸುವ ವಸತಿ ಯೋಜನೆಯಲ್ಲಿ ಭೂಮಿ ನೀಡುವ ರೈತರಿಗೆ ಕಮರ್ಷಿಯಲ್ ಜಾಗ ಮತ್ತು ಕಾರ್ನರ್ ಜಾಗ ನೀಡುವುದಿಲ್ಲ. ಹಾಗಾಗಿ ಸಿಡಿಪಿ ಪ್ಲಾನ್ ಪ್ರಕಾರ ರಸ್ತೆಗಳನ್ನು ಅಭಿವೃದ್ದಿಪಡಿಸಿ ಉಳಿದ ಜಾಗವನ್ನು ರೈತರಿಗೆ ವಾಪಸ್ ನೀಡುವಂತೆ ಟುಡಾ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.
ನಗರದ ಹೃದಯ ಭಾಗದಲ್ಲಿ ಇಷ್ಟು ಭೂಮಿ ಇನ್ನೆಲ್ಲಿಯೂ ಇಲ್ಲ, ರಿಂಗ್ ರಸ್ತೆ ನಿರ್ಮಾಣವಾದ ನಂತರ ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಿದೆ. ಭೂಮಿಯನ್ನು ಮಾರಾಟ ಮಾಡುವಂತೆ ಸಾಕಷ್ಟು ರಿಯಲ್ ಎಸ್ಟೇಟ್ ಉದ್ಯಮಿಗಳು ರೈತರಿಗೆ ಕೇಳಿದಾಗಲೂ ರೈತರು ನೀಡಿರಲಿಲ್ಲ.
ತುಮಕೂರು ಅಮಾನಿಕೆರೆ ಸರ್ವೆ ನಂಬರ್‌ಗಳಲ್ಲಿ ಟುಡಾ ಸಿದ್ದಪಡಿಸಿರುವ ವಸತಿ ಯೋಜನೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಏಳೆಂಟು ಎಕರೆ ಭೂಮಿ ಹೊಂದಿರುವ ರೈತರನ್ನು ಈ ಯೋಜನೆಯಿಂದ ಹೊರಗಿಟ್ಟು, ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿಯಲ್ಲಿ ಮಾತ್ರ ಯೋಜನೆ ರೂಪಿಸಲು ಮುಂದಾಗಿರುವುದು ಆಕ್ಷೇಪಕ್ಕೂ ಕಾರಣವಾಗಿದೆ.
ಬಹುತೇಕ 10ಗುಂಟೆ, 20ಗುಂಟೆ ಭೂಮಿ ಹೊಂದಿದ್ದು, ಅತಿಸಣ್ಣ ರೈತರ ಭೂಮಿಗಳಲ್ಲಿ ಟುಡಾ ಯೋಜನೆಯಂತೆ ರಸ್ತೆ, ನಿವೇಶನ ನಿರ್ಮಾಣವಾದರೆ ರೈತರಿಗೆ ಯಾವ ರೀತಿ ಪರಿಹಾರ ನೀಡಲಾಗುತ್ತದೆ ಎಂಬುದು ರೈತರ ಪ್ರಶ್ನೆಯಾಗಿದೆ.
ಇನ್ನು ತುಮಕೂರು ಅಮಾನಿಕೆರೆ ಕೋಡಿ ಸಮೀಪದಲ್ಲೇ ಖಾಸಗಿ ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಆರೋಪಗಳೂ ಇವೆ. ಪಾಲಿಕೆ ವತಿಯಿಂದ ತೆರವು ಕಾರ್ಯ ನಡೆದರೆ ಅರ್ಧ ಸಮಸ್ಯೆ ನಿವಾರಣೆಯಾಗಲಿದೆ. ಆದರೆ, ಇದಾವುದನ್ನೂ ಮಾಡದೇ ಅಧಿಕಾರಿಗಳು ಸಣ್ಣ ಮತ್ತು ಅತಿಸಣ್ಣ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಲಾಗಿದೆ.
ಸಭೆ ನಡೆಸುವ ಅಗತ್ಯವೇನಿತ್ತು?
ತುಮಕೂರು ಅಮಾನಿಕೆರೆ ರೈತರ ಸಮಾಲೋಚನೆ ಸಭೆ ನಡೆಸಿದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವು ರೈತರಿಗೆ ಸಭೆಯ ಬಗ್ಗೆ ಯಾವುದೇ ನೊಟೀಸ್ ನೀಡಿರಲಿಲ್ಲ. ಬದಲಾಗಿ ರೈತರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಆಹ್ವಾನಿಸಲಾಗಿತ್ತು. ಕಾನೂನು ರೀತ್ಯ ನೊಟೀಸ್ ನೀಡದೇ ಸಭೆ ನಡೆಸುವ ಅಗತ್ಯವೇನಿತ್ತು. ಈಗಾಗಲೇ ಕೊಳಚೆ ನೀರು ಬಿಟ್ಟು ವ್ಯವಸಾಯ ಮಾಡದಂತೆ ಮಾಡಲಾಗಿದೆ. ಈಗ ರೈತರಿಗೆ ಸರಿಯಾದ ಮಾಹಿತಿ ನೀಡದೇ ಸಭೆ ಮಾಡಿರುವುದು ಸರಿಯಲ್ಲ ಎಂದು ರೈತ ಸೈಯದ್ ಮೊಯಿದ್ದೀನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.