ಲೈಂಗಿಕ ಹಗರಣ ದುರ್ಬಲಗೊಳಿಸಲು ಯತ್ನ | ವಿದೇಶದಲ್ಲಿ ಕಾಲ ತಳ್ಳಲು ಪ್ರಜ್ವಲ್ ನೆರವಿಗೆ ಬಂದ ಷೆಂಗೆನ್ ವೀಸಾ?
ವಿದೇಶದಲ್ಲಿ ತಲೆಮರಸಿಕೊಂಡಿರುವ ಲೈಂಗಿಕ ಹಗರಣದ ಆರೋಪಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇನ್ನಷ್ಟು ದಿನ ವಿದೇಶದಲ್ಲೇ ಕಾಲ ತಳ್ಳುವ ಪ್ರಯತ್ನ ನಡೆಸಿದ್ದಾರೆಯೆ? ಅದಕ್ಕಾಗಿ ತಾನು ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ (ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್) ಮತ್ತು ಷೆಂಗೆನ್ ವೀಸಾ (Schengen visa) ದುರ್ಬಳಕೆ ಮಾಡುತ್ತಿದ್ದಾರೆಯೇ?
ವಿದೇಶದಲ್ಲಿ ತಲೆಮರಸಿಕೊಂಡಿರುವ ಲೈಂಗಿಕ ಹಗರಣದ ಆರೋಪಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇನ್ನಷ್ಟು ದಿನ ವಿದೇಶದಲ್ಲೇ ಕಾಲ ತಳ್ಳುವ ಪ್ರುಯತ್ನ ನಡೆಸಿದ್ದಾರೆಯೆ? ಅದಕ್ಕಾಗಿ ತಾನು ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್(Diplomatic Passport) ಮತ್ತು ಷೆಂಗೆನ್ ವೀಸಾ(Schengen visa )ದ ದುರ್ಬಳಕೆ ಮಾಡುತ್ತಿರುವುದು ಎಂದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಆತ ತಾನು ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗುವ ಬದಲು ವಿದೇಶದಲ್ಲೇ ಕಾಲಹರಣ ಮಾಡಿದರೆ ತನ್ನ ಮೇಲಿರುವ ಪ್ರಕರಣಗಳನ್ನು ದುರ್ಬಲ ಮಾಡಲು ಕಾಲಾವಕಾಶ ಸಿಕ್ಕಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾನೆ. ಪ್ರಜ್ವಲ್ ಇರುವ ದೇಶ ಮತ್ತು ಸ್ಥಳದ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ಇದೆ ಎನ್ನಲಾಗಿದೆ. ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು "ನಮ್ಮ ಬಳಿ ಎಲ್ಲಾ ವಿವರಗಳಿವೆ. ಆದರೆ ಈ ಸಮಯದಲ್ಲಿ ನಾವು ಆ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ," ಎಂದರು.
"ಎಸ್‌ಐಟಿ ವಿಚಾರಣೆ ಎದುರಿಸಲು ಪ್ರಜ್ವಲ್‌ಗೆ ಇಷ್ಟವಿಲ್ಲದಿರಬಹುದು. ಒಂದು ವೇಳೆ ಭಾರತಕ್ಕೆ ಮರಳಿದರೆ ಬಂಧನವಾಗುತ್ತದೆ ಮತ್ತು ಸರಣಿ ಅಪರಾಧ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ. ನೂರಾರು ಸಂತ್ರಸ್ತೆಯರು ಮತ್ತು ಸಾಕ್ಷೀದಾರರು ಇರುವುದರಿಂದ ಜೈಲಿನಿಂದ ಬಿಡುಗಡೆ ಆಗುವುದು ಕಠಿಣ ಸವಾಲಾಗುವ ಸಾಧ್ಯತೆ ಇದೆ. ಜತೆಗೆ ಪೊಲೀಸ್ ತನಿಖೆ ಸರಿಯಾದ ದಾರಿಯಲ್ಲಿ ಸಾಗಿದರೆ ಕಠಿಣ ಶಿಕ್ಷೆಯಾಗುವ ಸಂಭವ ಇದ್ದೇ ಇರುತ್ತದೆ. ಹಾಗಾಗಿ ಕಾಲ ತಳ್ಳುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಪ್ರಜ್ವಲ್ ಬಂದಂತಿದೆ," ಎಂದು ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.
"ಕಾನೂನು ಪ್ರಕಾರ ಭಾರತ ಸರ್ಕಾರ ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವ ಮೂಲಕ ಮತ್ತು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವ ಮೂಲಕ ಆತನನ್ನು ಪತ್ತೆ ಮಾಡಿ ಆತ ಇರುವ ದೇಶದಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳಬಹುದು. ಅಲ್ಲಿಯವರೆಗೆ ತಾನು ಕಣ್ತಪ್ಪಿಸಿಕೊಂಡು ರಾಷ್ಟ್ರದಿಂದ ರಾಷ್ಟ್ರಕ್ಕೆ ತಲೆಮೆರೆಸಿಕೊಳ್ಳುತ್ತಿರಬಹುದು. ಒಂದಲ್ಲ ಒಂದು ದಿನ ತನ್ನ ಬಂಧನವಾಗುತ್ತದೆ. ಈಗಲೇ ಶರಣಾಗುವ ಬದಲು ಇನ್ನಷ್ಟು ಕಾಲಾಹರಣ ಮಾಡುತ್ತಾ ಕಾನೂನಿನ ಕುಣಿಕೆಯನ್ನು ಸಡಿಲ ಮಾಡಬಹುದು ಎಂಬ ಅಲೋಚನೆ ಆತನಿಗಿರಬಹುದು" ಎಂಬುದು ಆ ಅಧಿಕಾರಿಯ ಅಭಿಪ್ರಾಯ.
ಕಾಲಾಹರಣದಿಂದ ಆರೋಪಿಯಾಗಿರುವ ಆತನಿಗೆ ಪ್ರಕರಣವನ್ನು ದುರ್ಬಲಗೊಳಿಸಲು ಕಾಲಾವಕಾಶ ಸಿಕ್ಕಂತಾಗುತ್ತದೆ. ಪ್ರಜ್ವಲ್ ಬಂಧನ ತಡವಾದ ಕಾರಣಕ್ಕೆ ದೂರುದಾರರು, ಸಾಕ್ಷಿದಾರರು ಆಸಕ್ತಿ ಕಳೆದುಕೊಂಡು ತನಿಖೆಗೆ ಸಹಕಾರ ನೀಡದೇ ಇರಹುದು. ಇದು ಪೊಲೀಸ್ ತನಿಖೆಗೆ ಸವಾಲಾಗಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಮಸ್ಯೆಯಾಗಬಹುದು. ಆತ ತನ್ನ ಪ್ರಭಾವ ಬಳಸಿ ದೂರುದಾರರರು ಮತ್ತು ಸಾಕ್ಷಿಗಳನ್ನು ತನ್ನ ವಿರುದ್ಧ ಹೆಚ್ಚಿನ ಮಾಹಿತಿ ನೀಡದಂತೆ ಮಾಡುವ ಸಂಭವವೂ ಇದೆ. ಭಾರತಕ್ಕೆ ಬಂದು ತಾನಾಗಿ ಬಂಧನಕ್ಕೆ ಒಳಗಾಗುವುದಕ್ಕಿಂತ ಕಾಲಾಹರಣ ಮಾಡಿ ರೆಡ್ ಕಾರ್ನರ್ ನೊಟೀಸ್ ಮೂಲಕ ಸಾವಕಾಶವಾಗಿ ಬಂಧನಕ್ಕೆ ಒಳಗಾಗುವ ಆಲೋಚನೆ ಮಾಡಿರಬಹುದು," ಎಂದು ಹೆಸರು ಹೇಳಲಿಚ್ಛಿಸದ ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಈ ಎಲ್ಲ ಕಾರಣಗಳಿಗಾಗಿ ಮತ್ತು ಸಂತ್ರಸ್ತೆಯರಿಗೆ ಮನೋಬಲ ತುಂಬಲು ಮತ್ತು ಅವರ ಸುರಕ್ಷತೆ ದೃಷ್ಟಿಯಿಂದ ಆದಷ್ಟು ಶೀಘ್ರವಾಗಿ ಪ್ರಜ್ವಲ್ ಬಂಧನವಾಗಬೇಕಿದೆ," ಎಂದೂ ಅವರು ಅಭಿಪ್ರಾಯಪಟ್ಟರು.
ಜೂನ್ 4ರಂದು ಏನಾಗುತ್ತದೆ?
ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸೋತರೆ, ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡು ಹಿಂತಿರುಗಬೇಕಾಗುತ್ತದೆ. ಗೆದ್ದರೂ, ಅವನಿಗೆ MEA ಅನುಮೋದನೆಯೊಂದಿಗೆ ಹೊಸ ಪಾಸ್‌ಪೋರ್ಟ್ ಅಗತ್ಯವಿರುತ್ತದೆ. ಅದು ತಕ್ಷಣವೇ ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್ಲೇ ಇದ್ದರೂ, ಬಹು ಅತ್ಯಾಚಾರ ಆರೋಪಗಳನ್ನು ಎದುರಿಸುತ್ತಿರುವ ಜನತಾ ದಳ (ಜಾತ್ಯತೀತ) ನಾಯಕ ಮತ್ತು ನಿರ್ಗಮಿತ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಜೂನ್‌ನಲ್ಲಿ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರುವ ದಿನದಂದು ಮುಕ್ತಾಯಗೊಳ್ಳುತ್ತದೆ. ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ವಲ್ ಸೋತರೆ, ಅವರ ಪಾಸ್‌ಪೋರ್ಟ್ ಅವಧಿ ತನ್ನಷ್ಟಕ್ಕೇ ಮುಕ್ತಾಯಗೊಳ್ಳುತ್ತದೆ.
ಹಾಗಾದರೆ ಮುಂದೇನು?
ರಾಜ್ಯ ಸರ್ಕಾರ ತಲೆಮರೆಸಿಕೊಂಡಿರುವ ಸಂಸದನ ಪತ್ತೆಗಾಗಿ ಮತ್ತು ಬಂಧಿಸಿ ತನಿಖೆಗಾಗಿ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಂಡಿದೆ. ಆರೋಪಿ ಪತ್ತೆಗೆ ಇಂಟರ್‌ಪೋಲ್‌ನ ಗ್ರೀನ್ ಕಾರ್ನರ್ ನೊಟೀಸ್, ನ್ಯಾಯಾಲಯ ಹೊರಡಿಸಿದ ಬಂಧನ ವಾರೆಂಟ್ ಸಹಿತ ಎಲ್ಲಾ ದಾಖಲೆಗಳನ್ನು ಮತ್ತು ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಬೇಕಾದ ನ್ಯಾಯಾಲಯದ ಅನುಮೋದನೆ ಸಹಿತ ಎಲ್ಲಾ ದಾಖಲೆಗಳನ್ನು ಈಗಾಗಲೇ ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಗೆ ಕಳುಹಿಸಿದ್ದಾರೆ.
ಆದರೆ, ಏಪ್ರಿಲ್ 26ರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಜರ್ಮನಿಗೆ ಪರಾರಿಯಾಗಲು ಪ್ರಜ್ವಲ್ ಹೊಂದಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ಕಾರಣವಾಗಿದೆ. ಆದರೆ ಬರಿಯ ಪಾಸ್‌ಪೋರ್ಟ್ ಬಳಸಿ ಆತ ವಿದೇಶಕ್ಕೆ ಪರಾರಿಯಾಗಲು ಸಾಧ್ಯವೇ?
ಕಾನೂನು ಮಾನ್ಯತೆ
ರಾಜತಾಂತ್ರಿಕ ಪಾಸ್‌ಪೋರ್ಟ್ ಸಾಮಾನ್ಯವಾಗಿ ಐದು ವರ್ಷಗಳವರೆಗೆ ಅಥವಾ ಸಂಸದರ ಅವಧಿ ಮುಗಿಯುವವರೆಗೆ ಯಾವುದು ಕಡಿಮೆಯೋ ಆ ಅವಧಿಯವರೆಗೆ ಮಾನ್ಯವಾಗಿರುತ್ತದೆ. ಸಂಸದರಾಗಿ ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಆ ಪಾಸ್‌ಪೋರ್ಟನ್ನು ಮರಳಿ ಒಪ್ಪಿಸಬೇಕು. ರಾಜತಾಂತ್ರಿಕ ಪಾಸ್‌ಪೋರ್ಟ್ ಅವಧಿ ಮುಗಿದಾಗ, ಅದು ಹೊಂದಿರುವ ಯಾವುದೇ ದೇಶದ ವೀಸಾದ ಸಿಂಧುತ್ವವೂ ಕೊನೆಗೊಳ್ಳುತ್ತದೆ. ಹಾಗಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾದರೆ ಯಾವ ದೇಶದಲ್ಲಿದ್ದಾರೋ ಅಲ್ಲೆ ಆತನ ಬಂಧನಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಷೆಂಜೆನ್ ವೀಸಾ ಎಂದರೇನು?
ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದರೂ ವಿದೇಶಗಳಿಗೆ ತೆರಳಲು ವೀಸಾ ಇರಲೇಬೇಕು. ಈ ಘಟನೆಯಲ್ಲಿ ಪ್ರಜ್ವಲ್ ಷೆಂಗೆನ್ ವೀಸಾ ಬಳಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಆಧಾರದಲ್ಲಿ ಷೆಂಗೆನ್ ವೀಸಾ ಮಾತ್ರವಲ್ಲದೆ ಇತರ ವೀಸಾಗಳನ್ನೂ ಪಡೆದುಕೊಳ್ಳುವ ಅವಕಾಶ ಸಂಸದರಿಗಿದೆ.
ಯುರೋಪಿಯನ್ ವೀಸಾ ಎಂದೂ ಕರೆಯಲಾಗುವ ಷೆಂಗೆನ್ ವೀಸಾ ಅಲ್ಪಾವಧಿಯ ವೀಸಾ ಆಗಿದ್ದು, ಯುರೋಪಿಯನ್ ಯೂನಿಯನ್ ಪಾಸ್‌ಪೋರ್ಟ್ ಮುಕ್ತ ವಲಯದ ದೇಶಗಳಿಗೆ ಗಡಿ ನಿರ್ಬಂಧವಿಲ್ಲದೆ ಭೇಟಿ ನೀಡಲು ಅವಕಾಶ ಇದೆ.
ಏಪ್ರಿಲ್ 26 ರಂದು ಪ್ರಜ್ವಲ್ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತೆರಳಿರುವುದು ದೃಢಪಟ್ಟಿದೆ. ಷೆಂಗೆನ್ ವೀಸಾವು 180 ದಿನಗಳ ಅವಧಿಯಲ್ಲಿ 27 ಯುರೋಪಿಯನ್ ದೇಶಗಳಿಗೆ ಪ್ರಯಾಣಿಸಲು ಅವಕಾಶ ನೀಡುತ್ತದೆ. ಪ್ರಜ್ವಲ್ ಜರ್ಮನಿಯಿಂದ ಇಂಗ್ಲೆಂಡ್‌ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಯುನೈಟೆಡ್ ಕಿಂಗ್‌ಡಮ್ ಈ ಷೆಂಗೆನ್ ವೀಸಾಸಡಿ ಬರದಿರುವ ಕಾರಣಕ್ಕೆ ಪ್ರತ್ಯೇಕ ವೀಸಾ ಪಡೆದಿರಬೇಕಾಗುತ್ತದೆ. ಇತರ ದೇಶಗಳ ವೀಸಾಗಳನ್ನೂ ಏಕಕಾಲಕ್ಕೆ ಪಡೆದುಕೊಳ್ಳುವ ಅವಕಾಶ ಇರುವುದರಿಂದ ಪ್ರಜ್ವಲ್ ಅವೆಲ್ಲ ತಯಾರಿಯನ್ನೂ ಪರಾರಿಯಾಗುವ ಮುಂಚೆಯೇ ಯೋಜಿಸಿ, ಆ ಸಂದರ್ಭದಲ್ಲಿ ಬಳಸಿಕೊಂಡಿರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜತಾಂತ್ರಿಕ ಪಾಸ್‌ಪೋರ್ಟ್‌ನೊಂದಿಗೆ, ಪ್ರಜ್ವಲ್ ಅನೇಕ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರಿಗೆ ಹೋಲಿಸಿದರೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಸಂಸದರು ಸಾಮಾನ್ಯವಾಗಿ ತ್ವರಿತ ವೀಸಾ ಪಡೆಯಲು ಅವಕಾಶವಿದೆ.