Waqf Asset Dispute | ವಕ್ಫ್‌ ವಿವಾದ ಸತ್ಯ ಬಯಲು; ಬಿಜೆಪಿಯಿಂದಲೇ ಹೆಚ್ಚು ನೋಟಿಸ್‌; ಡಾ. ಜಿ.ಪರಮೇಶ್ವರ್‌
x
ಡಾ ಜಿ ಪರಮೇಶ್ವರ್‌

Waqf Asset Dispute | ವಕ್ಫ್‌ ವಿವಾದ ಸತ್ಯ ಬಯಲು; ಬಿಜೆಪಿಯಿಂದಲೇ ಹೆಚ್ಚು ನೋಟಿಸ್‌; ಡಾ. ಜಿ.ಪರಮೇಶ್ವರ್‌

ರಾಜ್ಯ ಸರ್ಕಾರ ಹಾಗೂ ವಕ್ಫ್ ವಿರುದ್ಧ ಹೋರಾಟ ರೂಪಿಸುವ ಮೊದಲು ನಿಮ್ಮ ಅವಧಿಯಲ್ಲಿ ರೈತರಿಗೆ ನೀಡಿದ ವಕ್ಫ್ ನೋಟಿಸುಗಳತ್ತ ಒಮ್ಮೆ ಗಮನ ಹರಿಸಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.


ವಕ್ಫ್ ಆಸ್ತಿ ವಿವಾದ ಕುರಿತ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವಿನ ಸಮರ ತಾರಕಕ್ಕೇರಿದೆ. ವಕ್ಫ್ ಆಸ್ತಿಗಳ ಕುರಿತು ರೈತರಲ್ಲಿ ಜನಜಾಗೃತಿ ಮೂಡಿಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಬಣ ಸೋಮವಾರದಿಂದ (ನ.25) ಒಂದು ತಿಂಗಳ ಕಾಲ ಅಭಿಯಾನ ಕೈಗೊಂಡಿದೆ. ಆದರೆ, ಇದೀಗ ಇಡೀ ವಕ್ಫ್‌ ವಿವಾದ ದಿಢೀರನೇ ಹೊಸ ತಿರುವು ಪಡೆದುಕೊಂಡಿದ್ದು, ಬಿಜೆಪಿ ನಾಯಕರನ್ನೇ ಸುತ್ತಿಕೊಂಡಿದೆ.

ರಾಜ್ಯದಲ್ಲಿ ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ರೈತರಿಗೆ ಯಾರ ಅವಧಿಯಲ್ಲಿ ಎಷ್ಟು ನೋಟಿಸ್ ನೀಡಲಾಗಿದೆ ಎಂಬ ಮಾಹಿತಿಯನ್ನು ಡಾ.ಜಿ.ಪರಮೇಶ್ವರ್ ಬಹಿರಂಗಪಡಿಸಿದ್ದಾರೆ. ದುರಂತವೆಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ರೈತರಿಗೆ ವಕ್ಫ್ ನೋಟಿಸ್ ಜಾರಿ ಮಾಡಿರುವ ಮಾಹಿತಿ ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರ ಹಾಗೂ ವಕ್ಫ್ ವಿರುದ್ಧ ಹೋರಾಟ ರೂಪಿಸುವ ಮೊದಲು ಬಿಜೆಪಿ ನಾಯಕರು ತಮ್ಮ ಅಧಿಕಾರವಧಿಯಲ್ಲಿ ರೈತರಿಗೆ ನೀಡಿದ ವಕ್ಫ್ ನೋಟಿಸ್‌ಗಳತ್ತಲೂ ಒಮ್ಮೆ ಗಮನ ಹರಿಸಲಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ನೋಟಿಸ್ ಕುರಿತು ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ಆಪಾದನೆಯ ಸತ್ಯ ಬಯಲಾಗಿದೆ. ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲಾಗದು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಅತಿ ಹೆಚ್ಚು ರೈತರಿಗೆ ನೋಟಿಸ್ ಕೊಟ್ಟಿದ್ಧಾರೆ. ಈಗ ಯಾವ ಮುಖ ಇಟ್ಟುಕೊಂಡು ಅಭಿಯಾನ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅವಧಿಯಲ್ಲಿ 2900 ಎಕರೆಗೆ ನೋಟಿಸ್ ನೀಡಲಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹೆಚ್ಚು ನೋಟಿಸ್ ನೀಡಿರುವ ವಿಚಾರ ತಿಳಿದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಗೆ ವಕ್ಫ್ ವಿಚಾರದಲ್ಲಿ ಮುಖಭಂಗ ಮಾಡಲು ಹೊರಟಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ಗಮನಕ್ಕೆ ಬಂದಿರಲಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರ ವಹಿಸಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

2018-23 ರ ನಡುವೆ ಬಿಜೆಪಿ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಚಿಸಲಾಗಿತ್ತು. ಸಮಿತಿಯು ವಕ್ಫ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿತ್ತು. ವಕ್ಫ್ ಆಸ್ತಿ ಸಂರಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಕೆಲ ಆಸ್ತಿಗಳ ಒತ್ತುವರಿ ತೆರವಿಗೂ ನೋಟಿಸ್ ನೀಡಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 2865 ಎಕರೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಜಮೀನು ತೆರವಿಗೆ ನೋಟಿಸ್ ಸಹ ನೀಡಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ 1735 ರೈತರು ಹಾಗೂ ಭೂಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಕೆಲ ರೈತರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಉಳಿದ ಬಹುತೇಕ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವಂತೆ ಸ್ವತಃ ಸಮಿತಿಯೇ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 1201 ರೈತರಿಗೆ ನೋಟಿಸ್ ನೀಡಿದೆ ಎಂಬ ಮಾಹಿತಿ ಬಯಲಾಗಿದೆ.

Read More
Next Story