Trump says he prevented nuclear war between India and Pakistan
x

ಅಮೇರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌

ಭಾರತ-ಪಾಕ್ ಪರಮಾಣು ಯುದ್ಧ ತಡೆದಿದ್ದು ನಾನೇ ಎಂದ ಟ್ರಂಪ್

ಅವರು ಐದು ವಿಮಾನಗಳನ್ನು ಹೊಡೆದುರುಳಿಸಿದ್ದರು, ಪರಿಸ್ಥಿತಿ ತೀವ್ರವಾಗಿತ್ತು. ನಾನು ಅವರಿಗೆ ಕರೆ ಮಾಡಿ, 'ನೋಡಿ, ವ್ಯಾಪಾರವನ್ನು ನಿಲ್ಲಿಸುತ್ತೇನೆ. ಹೀಗೆ ಮುಂದುವರೆದರೆ ನಿಮಗೆ ಒಳ್ಳೆಯದಾಗದು' ಎಂದು ಎಚ್ಚರಿಸಿದೆ.


ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷದ ವೇಳೆ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಹೊಸ ಬಾಂಬ್ ಸಿಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ಘರ್ಷಣೆಯು ಪರಮಾಣು ಯುದ್ಧವಾಗಿ ಬದಲಾಗುವುದನ್ನು ತಾವೇ ತಡೆದಿದ್ದಾಗಿ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ತಮ್ಮ ರಾಜತಾಂತ್ರಿಕ ಮಧ್ಯಸ್ಥಿಕೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ವಿವರಿಸಿದರು. "ನಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇವೆ. ಅವರು ಐದು ವಿಮಾನಗಳನ್ನು ಹೊಡೆದುರುಳಿಸಿದ್ದರು, ಪರಿಸ್ಥಿತಿ ತೀವ್ರವಾಗಿತ್ತು. ನಾನು ಅವರಿಗೆ ಕರೆ ಮಾಡಿ, 'ನೋಡಿ, ವ್ಯಾಪಾರವನ್ನು ನಿಲ್ಲಿಸುತ್ತೇನೆ. ಹೀಗೆ ಮುಂದುವರೆದರೆ ನಿಮಗೆ ಒಳ್ಳೆಯದಾಗದು' ಎಂದು ಎಚ್ಚರಿಸಿದೆ. ಅವರಿಬ್ಬರೂ ಶಕ್ತಿಶಾಲಿ ಪರಮಾಣು ರಾಷ್ಟ್ರಗಳು. ಆ ಯುದ್ಧ ಸಂಭವಿಸಿದ್ದರೆ ಏನಾಗುತ್ತಿತ್ತೋ, ಆದರೆ ನಾನು ಅದನ್ನು ತಡೆದೆ" ಎಂದು ಟ್ರಂಪ್ ಹೇಳಿದರು.

ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ನಂತರ ಭಾರತವು 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಾದ ಬಳಿಕ ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿತ್ತು, ಇದು ಯುದ್ಧದ ಸನ್ನಿವೇಶಕ್ಕೆ ಹತ್ತಿರವಾಗಿತ್ತು.

ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವ ಬೆದರಿಕೆ ಹಾಕಿ ಯುದ್ಧವನ್ನು ನಿಲ್ಲಿಸಿದ್ದಾಗಿ ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಈ ಬಾರಿಯ ತಮ್ಮ ಭಾಷಣದಲ್ಲಿ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಜೋ ಬೈಡನ್ ಅವರನ್ನು ಉಲ್ಲೇಖಿಸಿ, "ಇದನ್ನು ಬೈಡನ್ ಮಾಡಲು ಸಾಧ್ಯವಿತ್ತೇ? ಆ ದೇಶಗಳ ಬಗ್ಗೆ ಅವರಿಗೆ ಗೊತ್ತಿದೆಯೇ ಎಂದು ನನಗೆ ಅನಿಸುತ್ತಿಲ್ಲ" ಎಂದು ಟೀಕಿಸಿದರು.

ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಹೇಳಿಕೆ ನೀಡಿದ್ದರೂ, ಈ ಬಾರಿ 'ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿತ್ತು' ಎಂದು ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಿರುವುದು ಗಮನ ಸೆಳೆದಿದೆ.

Read More
Next Story