ಗಾಂಧಿ ಭಾರತ | ಅಪ್ಪಟ ಹಿಂದೂವಾದಿ ಗಾಂಧಿ ಕೊಂದ ಹಿಂದುತ್ವ ವಿರೋಧಿ ಬಿಜೆಪಿ: ಸಿಎಂ ಸಿದ್ದರಾಮಯ್ಯ
ನಾವು ಮಹಾತ್ಮಗಾಂಧಿ ಅವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತ ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಮಭಕ್ತರಾಗಿ ಅತ್ಯುತ್ತಮ ಹಿಂದೂ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧಿ ಅವರನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತ ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ, ಸಂವಿಧಾನ ವಿರೋಧಿಯಾಗಿ ಅಂಬೇಡ್ಕರ್ ದ್ವೇಷಿಯೂ ಆಗಿದೆ. ನಾವು ಮಹಾತ್ಮ ಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ಗುರಿಯೊಂದಿಗೆ ʼಜೈ ಭಾಪು-ಜೈ ಭೀಮ್-ಜೈ ಸಂವಿಧಾನʼ ಅಭಿಯಾನ ಮುನ್ನಡೆಸುತ್ತೇವೆ ಎಂದು ತಿಳಿಸಿದರು.
ನೂರು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧಿ, ಆ ದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನೆಲದಲ್ಲಿ ಹೆಚ್ಚಿಸಿದರು ಎಂದು ಸ್ಮರಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದೆ ಪ್ರಿಯಾಂಕ ಗಾಂಧಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉಪ ಅಧ್ಯಕ್ಷ ಲಮಾಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯ ಸಚಿವರು, ಹಿರಿಯ ಕಾಂಗ್ರೆಸ್ಸಿಗರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ʼಗಾಂಧಿ ಭಾರತ ಮರು ನಿರ್ಮಾಣʼ ಕೃತಿ ಲೋಕಾರ್ಪಣೆ
1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು, ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿ ಹಾಗೂ ಅಪರೂಪದ ಛಾಯಾಚಿತ್ರ ಒಳಗೊಂಡಿರುವ "ಗಾಂಧಿ ಭಾರತ ಮರು ನಿರ್ಮಾಣ" ಹಾಗೂ Reclaiming Gandhi Bharath ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.
1924 ರ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು, ಕೊಲ್ಕತ್ತಾ ಒಪ್ಪಂದ ಮತ್ತು ನೇಯ್ಗೆಯ ಮತಾಧಿಕಾರ, ಸರೋಜಿನಿ ನಾಯ್ಡು ಅವರ ವಿದೇಶಾಂಗ ಸೇವೆ, ಅಕಾಲಿಗಳಿಗೆ ಅಭಿನಂದನೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಬರ್ಮಾದ ಜನರಿಗೆ ಸಹಾನುಭೂತಿ, ಕೋಹತ್ ಹಾಗೂ ಗುಲಬರ್ಗಾ ಗಲಭೆಗಳು, ಅಸ್ಪೃಶ್ಯತೆ ನಿವಾರಣೆ, ಅಧಿವೇಶನದ ಲೆಕ್ಕಪರಿಶೋಧನೆ ಸೇರಿದಂತೆ ಐತಿಹಾಸಿಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳು ಈ ಪುಸ್ತಕದಲ್ಲಿವೆ.
ಅನಾರೋಗ್ಯ ನಿಮಿತ್ತ ರಾಹುಲ್ ಗೈರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅನಾರೋಗ್ಯದ ಕಾರಣ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಆದರೆ, ಕೆಲ ಮಾಧ್ಯಮಗಳು ಸಮಾವೇಶದಿಂದ ರಾಹುಲ್ ದೂರ ಎಂದು ವರದಿ ಮಾಡಿವೆ. ಈ ರೀತಿ ತಿರುಚಿ ಸುದ್ದಿ ಹಾಕಿದರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆಯೇ? ಇದರಿಂದ ಏನು ಸಂದೇಶ ಹೋಗುತ್ತದೆ ಎಂದು ಸಿದ್ದರಾಮಯ್ಯ ರಾಹುಲ್ ಗಾಂಧಿಯವರ ಗೈರು ಹಾಜರಿಯ ಕುರಿತು ಮಾಹಿತಿ ನೀಡಿದರು.