ಕಾರಿಗೆ ಲಾರಿ ಡಿಕ್ಕಿ: ದಂಪತಿ ಸಾವು, ಮೂವರು ಮಕ್ಕಳಿಗೆ ಗಂಭೀರ ಗಾಯ
x

ಕಾರಿಗೆ ಲಾರಿ ಡಿಕ್ಕಿ: ದಂಪತಿ ಸಾವು, ಮೂವರು ಮಕ್ಕಳಿಗೆ ಗಂಭೀರ ಗಾಯ

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಪ್ಪ, ಮೊಹರಂ ಹಬ್ಬದ ನಿಮಿತ್ತ ಕುಟುಂಬ ಸಮೇತ ತಮ್ಮ ಸ್ವಗ್ರಾಮ ಚೆಟ್ನಿಹಾಳು ಕಡೆಗೆ ತೆರಳುತ್ತಿದ್ದರು.


ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬಾಗಲಕೋಟೆ ಜಿಲ್ಲೆಯ ಚೆಟ್ನಿಹಾಳು ಗ್ರಾಮದ ಕ್ಯಾಬ್ ಚಾಲಕ ಮುತ್ತಪ್ಪ ಪೂಜಾರ್ (35) ಮತ್ತು ಅವರ ಪತ್ನಿ ರೇಣುಕಾ (30) ಎಂದು ಗುರುತಿಸಲಾಗಿದೆ. ಅವರ ಮಕ್ಕಳಾದ ಅನುಶ್ರೀ (9), ರೂಪಶ್ರೀ (6) ಮತ್ತು ಖುಷಿ (4) ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳ ಆಸ್ಪತ್ರೆಯಿಂದ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಪ್ಪ, ಮೊಹರಂ ಹಬ್ಬದ ನಿಮಿತ್ತ ಕುಟುಂಬ ಸಮೇತ ತಮ್ಮ ಸ್ವಗ್ರಾಮ ಚೆಟ್ನಿಹಾಳು ಕಡೆಗೆ ತೆರಳುತ್ತಿದ್ದರು. ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದ ಕೆಪಿಟಿಸಿಎಲ್ ಕಚೇರಿ ಮುಂಭಾಗದ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಕಾರನ್ನು ಸುಮಾರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ತಳ್ಳಿಕೊಂಡು ಹೋಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More
Next Story