
ನಟಿ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿಗೆ ಸಂಕಷ್ಟ: ವಂಚನೆ ಪ್ರಕರಣದಲ್ಲಿ ಲುಕ್ಔಟ್ ನೋಟಿಸ್ ಜಾರಿ
ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಎಂಬುವವರು, ಶಿಲ್ಪಾ ಮತ್ತು ರಾಜ್ ಕುಂದ್ರಾ ಅವರು ತಮ್ಮ 'ಬೆಸ್ಟ್ ಡೀಲ್ ಟಿವಿ' ಎಂಬ ಕಂಪನಿಯಲ್ಲಿ ಸಾಲ ಮತ್ತು ಹೂಡಿಕೆಯ ಹೆಸರಿನಲ್ಲಿ ತಮಗೆ 60.4 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಲುಕ್ಔಟ್ ಸರ್ಕ್ಯುಲರ್ (LOC) ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳು ಆಗಾಗ್ಗೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳುವುದರಿಂದ, ತನಿಖೆಗೆ ಅಡ್ಡಿಯಾಗದಂತೆ ತಡೆಯಲು ಆರ್ಥಿಕ ಅಪರಾಧಗಳ ವಿಭಾಗ (EOW) ಈ ಕ್ರಮ ಕೈಗೊಂಡಿದೆ.
ಪ್ರಕರಣದ ಹಿನ್ನೆಲೆ:
ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಎಂಬುವವರು, ಶಿಲ್ಪಾ ಮತ್ತು ರಾಜ್ ಕುಂದ್ರಾ ಅವರು ತಮ್ಮ 'ಬೆಸ್ಟ್ ಡೀಲ್ ಟಿವಿ' ಎಂಬ ಕಂಪನಿಯಲ್ಲಿ ಸಾಲ ಮತ್ತು ಹೂಡಿಕೆಯ ಹೆಸರಿನಲ್ಲಿ ತಮಗೆ 60.4 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ಆಗಸ್ಟ್‌ನಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಕೊಠಾರಿ ಅವರ ಪ್ರಕಾರ, ತಮ್ಮ ವ್ಯವಹಾರವನ್ನು ವಿಸ್ತರಿಸಲು 2015 ಮತ್ತು 2023ರ ನಡುವೆ ಹಂತ ಹಂತವಾಗಿ ಹಣವನ್ನು ಪಡೆದಿದ್ದ ದಂಪತಿಗಳು, ಅದನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೆಚ್ಚಿನ ತೆರಿಗೆಯನ್ನು ತಪ್ಪಿಸಲು 75 ಕೋಟಿ ರೂಪಾಯಿ ಸಾಲವನ್ನು ಹೂಡಿಕೆಯ ರೂಪದಲ್ಲಿ ತೋರಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ದಂಪತಿ:
ಆದಾಗ್ಯೂ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ವಕೀಲರಾದ ಪ್ರಶಾಂತ್ ಪಾಟೀಲ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ಇವು ಸುಳ್ಳು ಆರೋಪಗಳು, ಇದರಲ್ಲಿ ಯಾವುದೇ ಹುರುಳಿಲ್ಲ. 7-8 ವರ್ಷಗಳ ಹಿಂದಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈಗ ದೂರು ನೀಡಿರುವುದೇ ಅನುಮಾನಾಸ್ಪದವಾಗಿದೆ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಮತ್ತು ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ," ಎಂದು ಅವರು ಹೇಳಿದ್ದಾರೆ.
ಸದ್ಯ ಆರ್ಥಿಕ ಅಪರಾಧಗಳ ವಿಭಾಗವು (EOW) ದಂಪತಿ ಪ್ರಯಾಣದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಕಂಪನಿಯ ಲೆಕ್ಕಪರಿಶೋಧಕರನ್ನೂ ವಿಚಾರಣೆಗೆ ಕರೆಸಿದೆ ಎಂದು ಮೂಲಗಳು ತಿಳಿಸಿವೆ.