ಸಾರಿಗೆ ಮುಷ್ಕರ| ಕಾರ್ಮಿಕರ ಬೇಡಿಕೆಗೆ ಹಣಕಾಸು ಇಲಾಖೆ ಆಕ್ಷೇಪ; ಸಂಧಾನದ ಆಯ್ಕೆ ಮುಕ್ತವಾಗಿಟ್ಟ ಸರ್ಕಾರ
x

ಸಾರಿಗೆ ಮುಷ್ಕರ| ಕಾರ್ಮಿಕರ ಬೇಡಿಕೆಗೆ ಹಣಕಾಸು ಇಲಾಖೆ ಆಕ್ಷೇಪ; ಸಂಧಾನದ ಆಯ್ಕೆ ಮುಕ್ತವಾಗಿಟ್ಟ ಸರ್ಕಾರ

ಸಾರಿಗೆ ನೌಕರರಿಗೆ 38 ತಿಂಗಳ ಬಾಕಿ ವೇತನ ಹಾಗೂ ವೇತನ ಪರಿಷ್ಕರಣೆ ಬೊಕ್ಕಸಕ್ಕೆ ಹೊರೆಯಲಾಗಲಿದೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಹಾಗಾಗಿ ಬೇಡಿಕೆ ಈಡೇರಿಸಲಾಗದು ಎಂದು ಸರ್ಕಾರ ಹೇಳಿದೆ.


ರಾಜ್ಯದ ನಾಲ್ಕೂ ನಿಗಮಗಳ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಪಾವತಿ ಹಾಗೂ ವೇತನ ಪರಿಷ್ಕರಣೆಯ ಬೇಡಿಕೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ವಿಫಲವಾಗಿದೆ.

ಬೆಂಗಳೂರಿನ ವಿಧಾನಸೌಧ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಸಾರಿಗೆ ನೌಕರರು ಬೇಷರತ್ತಾಗಿ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. ಸರ್ಕಾರ ಕೂಡ ತನ್ನ ನಿಲುವಿಗೆ ಬದ್ಧವಾಗಿ ಹಲವು ಆಯ್ಕೆಗಳನ್ನು ಕಾರ್ಮಿಕ ಸಂಘಟನೆಗಳ ಮುಂದಿಟ್ಟಿತು.

ಸಾರಿಗೆ ನೌಕರರಿಗೆ 38 ತಿಂಗಳ ಬಾಕಿ ವೇತನ ಹಾಗೂ ವೇತನ ಪರಿಷ್ಕರಣೆ ಬೊಕ್ಕಸಕ್ಕೆ ಹೊರೆಯಲಾಗಲಿದೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಕಾರ್ಮಿಕರ ಬೇಡಿಕೆ ಈಡೇರಿಸಬೇಕಾದರೆ ಸಾವಿರಾರು ಕೋಟಿ ಬೇಕಾಗಬಹುದು. ಹಾಗಾಗಿ ಶ್ರೀನಿವಾಸ ಮೂರ್ತಿ ಸಮಿತಿಯ ಶಿಫಾರಸಿನಂತೆ 15 ತಿಂಗಳ ಹಿಂಬಾಕಿ ನೀಡಲಾಗುವುದು. ಅಲ್ಲದೇ ಶೇ 15 ರಷ್ಟು ಮೂಲ ವೇತನ ಪರಿಷ್ಕರಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಸಿಎಂ ಸಭೆಯ ಮುಖ್ಯಾಂಶಗಳು

ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಸಾರಿಗೆ ಮುಷ್ಕರ ವಾಪಸು ಪಡೆಯುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.

2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿರಲಿಲ್ಲ. 2023 ಮಾರ್ಚ್‌ ತಿಂಗಳಲ್ಲಿ ಹಿಂದಿನ ಸರ್ಕಾರದಲ್ಲಿ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ ಶೇ15 ರಷ್ಟು ಪರಿಷ್ಕರಣೆಗೆ ತೀರ್ಮಾನವಾಗಿತ್ತು. ಆಗ ಅದನ್ನು ಒಪ್ಪಿಕೊಂಡಿದ್ದೀರಿ. ಹಾಗಾಗಿ ಅದೇ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದರು.

ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು 2022 ಜ.1 ರಿಂದ 2023 ಫೆ.28ರವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದೆ. ನೀವು ಕೂಡ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಸಮಿತಿಯ ಶಿಫಾರಸು ಆಧಾರದಲ್ಲಿ 2023 ಮಾ.1 ರಿಂದ ಜಾರಿಗೆ ಬರುವಂತೆ ಅಂದಿನ ಸರ್ಕಾರ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ, ಈಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಲ್ಲಿ ಒಟ್ಟಾರೆ 4ಸಾವಿರ ಕೋಟಿ ಸಾಲ ಇತ್ತು. 2018ರಲ್ಲಿ ಕೇವಲ ರೂ. 14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲಾ ನಿಗಮದವರು ಸಹಕರಿಸಬೇಕು ಎಂದು ಕೋರಿದರು.

ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಹೇಳಿದರು.

ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್ಆರ್‌ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್, ಎನ್‌ಡಬ್ಲುಕೆಎಸ್ಆರ್‌ಟಿಸಿ ಅಧ್ಯಕ್ಷ ರಾಜುಕಾಗೆ, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Read More
Next Story