
ಸಾರಿಗೆ ಮುಷ್ಕರ | ನೌಕರರ ಸಂಘಟನೆಗಳೊಂದಿಗೆ ಸಭೆ; ಬೇಡಿಕೆ ಈಡೇರಿಸಲು ಕಾಲಾವಕಾಶ ಕೋರಿದ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ಕಾರ್ಮಿಕರ ಅಹವಾಲು ಆಲಿಸಿ, ನೀವು ಮುಷ್ಕರ ಮಾಡಬೇಡಿ, ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದರು ಎಂದು ತಿಳಿದುಬಂದಿದೆ.
ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ನೌಕರರ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆ.5 ರಂದು ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಕಾರ್ಮಿಕರ ಅಹವಾಲುಗಳನ್ನು ಆಲಿಸಿದರು. ನೌಕರರು ಮುಷ್ಕರ ಮಾಡಬೇಡಿ, ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಸಾರಿಗೆ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಕಾರ್ಮಿಕರ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ ಕಾರ್ಮಿಕರು ಎಸ್ಮಾ ಜಾರಿ ಮಾಡಿದರೂ ಮುಷ್ಕರ ಕೈ ಬಿಡುವುದಿಲ್ಲ ಎಂದು ಹೇಳಿದ್ದರು.
ಸುಮಾರು 38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021 ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು. ನಾಳೆಯಿಂದ(ಆಗಸ್ಟ್ 5) ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧಾರ ಮಾಡಿತ್ತು.