ನಾಳೆಯಿಂದ ಸಾರಿಗೆ ಮುಷ್ಕರ ಇಲ್ಲ ; ಹೈಕೋರ್ಟ್​ಗೆ ಮಾಹಿತಿ ನೀಡಿದ ನೌಕರರ ಸಂಘ
x

ಕರ್ನಾಟಕ ಹೈಕೋರ್ಟ್‌

ನಾಳೆಯಿಂದ ಸಾರಿಗೆ ಮುಷ್ಕರ ಇಲ್ಲ ; ಹೈಕೋರ್ಟ್​ಗೆ ಮಾಹಿತಿ ನೀಡಿದ ನೌಕರರ ಸಂಘ

ಕೈಗಾರಿಕೆ ವಿವಾದ ಕಾಯ್ದೆಯಡಿಯಲ್ಲಿ ಸರ್ಕಾರ ಸಾರಿಗೆ ನಿಗಮಗಳ ನೌಕರರ ಸಂಘಗದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಲಾಗುತ್ತಿದೆ. ಈ ನಡುವೆ ಹೈಕೋರ್ಟ್​ ಸಾರಿಗೆ ಮುಷ್ಕರ ನಡೆಸದಂತೆ ಆದೇಶ ನೀಡಿದೆ. ಆದರೂ, ಮುಷ್ಕರ ಮುಂದುರೆದಿದೆ ಎಂದು ಶಶಿಕಿರಣ್‌ ಶೆಟ್ಟಿ ತಿಳಿಸಿದರು.


ರಾಜ್ಯಾದ್ಯಂತ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆ, ಬುಧವಾರದೊಳಗೆ (ಆಗಸ್ಟ್ 6) ಮುಷ್ಕರವನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೆ, ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ, ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿ ಬಂಧನಕ್ಕೆ ಆದೇಶಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಈ ಎಚ್ಚರಿಕೆಯ ಬೆನ್ನಲ್ಲೇ, ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿಯು, ಬುಧವಾರದಿಂದ ಯಾವುದೇ ಮುಷ್ಕರ ನಡೆಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ನಗರದ ಜೆ. ಸುನೀಲ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ಪೀಠವು, ಮುಷ್ಕರವನ್ನು ತಕ್ಷಣವೇ ನಿಲ್ಲಿಸುವಂತೆ ತಾಕೀತು ಮಾಡಿತು.

ನ್ಯಾಯಾಲಯದಲ್ಲಿ ನಡೆದಿದ್ದೇನು?

ವಿಚಾರಣೆ ಆರಂಭವಾಗುತ್ತಿದ್ದಂತೆ, ಸರ್ಕಾರದ ಪರವಾಗಿ ಹಾಜರಾದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, "ಸಾರಿಗೆಯು ಅಗತ್ಯ ಸೇವೆಯಾಗಿದ್ದು, ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರದೊಂದಿಗೆ ಸಂಧಾನ ಸಭೆಗಳು ನಡೆಯುತ್ತಿದ್ದರೂ ಮತ್ತು ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶವಿದ್ದರೂ, ಪ್ರತಿಭಟನೆ ಮುಂದುವರೆದಿದೆ," ಎಂದು ಪೀಠದ ಗಮನಕ್ಕೆ ತಂದರು.

ಈ ವೇಳೆ, ನೌಕರರ ಸಂಘದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, "ಮುಷ್ಕರ ನಿಂತಿದೆಯೇ?" ಎಂದು ಕೇಳಿತು. ಇದಕ್ಕೆ ಉತ್ತರಿಸಿದ ವಕೀಲರು, "ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ಜಿಲ್ಲೆಗಳಲ್ಲಿ ಸಂವಹನದ ಕೊರತೆಯಿಂದ ಕೆಲವು ಗೊಂದಲಗಳು ಉಂಟಾಗಿವೆ," ಎಂದು ವಿವರಿಸಿದರು.

ಇದರಿಂದ ತೀವ್ರ ಗರಂ ಆದ ನ್ಯಾಯಪೀಠ, "ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮುಷ್ಕರ ಮುಂದುವರಿಸಿರುವುದು ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದೆ. ನಿಮ್ಮ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಜನಸಾಮಾನ್ಯರನ್ನು ಒತ್ತೆಯಾಗಿಟ್ಟುಕೊಂಡು ತೊಂದರೆ ನೀಡುವುದನ್ನು ಸಹಿಸಲಾಗುವುದಿಲ್ಲ," ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

"ನಾಳೆ, ಬುಧವಾರದೊಳಗೆ ಮುಷ್ಕರವನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಬಗ್ಗೆ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ, ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿ, ಎಸ್ಮಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಲಾಗುವುದು," ಎಂದು ಪೀಠವು ಕಠಿಣ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.

Read More
Next Story