ಪ್ರಯಾಣಿಕರಿಗೆ ಸೂಚನೆ | ಬಸ್ ಮಾಲೀಕರು ಹೆಚ್ಚುವರಿ ಹಣ ಕೇಳಿದರೆ ದೂರು ನೀಡಿ: ಸಾರಿಗೆ ಇಲಾಖೆ
ದೀಪಾವಳಿ ಮತ್ತು ಹಬ್ಬದ ರಜೆಯ ಹಿನ್ನೆಲೆಯಲ್ಲಿ ತಿಂಗಳಾಂತ್ಯಕ್ಕೆ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಬಸ್ಸುಗಳಿಗೆ ಭಾರೀ ಬೇಡಿಕೆ ಬಂದಿದೆ. ಟಿಕೆಟ್ ಮುಂಗಡ ಬುಕಿಂಗ್ಗೆ ಜನ ಮುಗಿಬಿದ್ದಿರುವ ನಡುವೆಯೇ ಖಾಸಗಿ ಬಸ್ ಮಾಲೀಕರು ಎರಡು ಮೂರು ಪಟ್ಟು ದರ ಹೆಚ್ಚಿಸಿ ಪ್ರಯಾಣಿಕರನ್ನು ದೋಚಲಾರಂಭಿಸಿದ್ದಾರೆ.
ಪ್ರತಿ ಬಾರಿಯೂ ಹಬ್ಬ ಮತ್ತು ಸಾಲುಸಾಲು ರಜೆ ಸಂದರ್ಭದಲ್ಲಿ ಟಿಕೆಟ್ ದರ ಏರಿಸಿ ಪ್ರಯಾಣಿಕರನ್ನು ದೋಚುವುದು ಸರ್ವೇಸಾಮಾನ್ಯವಾಗಿ ಹೋಗಿದೆ. ಕೆಲವು ದೂರುಗಳು, ಮಾಧ್ಯಮಗಳ ವರದಿಗಳು ಈ ಕುರಿತ ಧ್ವನಿ ಎತ್ತಿದಾಗ ರಾಜ್ಯ ಸಾರಿಗೆ ಇಲಾಖೆ ಅಲ್ಲಲ್ಲಿ ತಪಾಸಣೆ, ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿ ಕೈತೊಳೆದುಕೊಳ್ಳುವುದು ಕೂಡ ಅಷ್ಟೇ ಸಾಮಾನ್ಯ ಎಂಬಂತಾಗಿದೆ.
ಈ ಬಾರಿಯೂ ಈಗಾಗಲೇ ಆನ್ಲೈನ್ ಬುಕಿಂಗ್ನಲ್ಲಿ ಖಾಸಗಿ ಬಸ್ಗಳು ದುಪ್ಪಟ್ಟು ದರ ಏರಿಸಿದ್ದು, ಪ್ರಯಾಣಿಕರ ಸುಲಿಗೆ ಮುಂದುವರಿದಿದೆ ಎಂಬ ದೂರುಗಳಿವೆ.
ಈ ನಡುವೆ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಆನ್ಲೈನ್ ಟಿಕೆಟ್ ಬುಕಿಂಗ್ಗೆ ದರ ಹೆಚ್ಚಳ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಖಾಸಗಿ ಬಸ್ ಸುಲಿಗೆಯ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸಾರಿಗೆ ಇಲಾಖೆ, ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುವವರು ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಬಸ್ ಮಾಲೀಕರು ಮತ್ತು ಏಜೆಂಟರು ದರ ಹೆಚ್ಚಳ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಸಾಮಾನ್ಯ ಟಿಕೆಟ್ ದರಕ್ಕಿಂತ ಹೆಚ್ಚಿನ ಹಣ ಪಡೆಯಬಾರದು. ದುಪ್ಪಟ್ಟು ಹಣ ಸಂಗ್ರಹಿಸುವ ವಾಹನ ಮಾಲೀಕರ ಪರವಾನಗಿ ಹಾಗೂ ನೋಂದಣಿ ಪತ್ರ ಅಮಾನತು ಮಾಡಲಾಗುವುದು ಎಂದು ಇಲಾಖೆ ಹೇಳಿದೆ.
ಅಲ್ಲದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಪೋಟಕ ಸಾಮಗ್ರಿಗಳ ಸಾಗಾಣಿಕೆಗೆ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆ, ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಸಂಗ್ರಹಿಸಿದರೆ ಸಾರ್ವಜನಿಕರು ದೂರು ನೀಡುವಂತೆ ಮನವಿ ಮಾಡಿದೆ.
ಸಾರಿಗೆ ಇಲಾಖೆಯ ಕಂಟ್ರೋಲ್ ರೂಂ(ನಿಯಂತ್ರಣ ಕೊಠಡಿ) ಸಂಖ್ಯೆ-9449863429 ಮತ್ತು 9449863426 ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ರಾಜ್ಯ ಸಾರಿಗೆ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.