
ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಸಾರಿಗೆ ಇಲಾಖೆಯ ಕಾರ್ಯಾಚರಣೆ: ತೆರಿಗೆ ವಂಚಿಸಿದ್ದ 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ವಶಕ್ಕೆ
ಬಸ್‌ಗಳನ್ನು ವಶಕ್ಕೆ ಪಡೆದ ಕಾರಣ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಸ್ಥಳಕ್ಕೆ ಬಿಎಂಟಿಸಿ ಬಸ್‌ಗಳನ್ನು ಕರೆಸಿ ಅವುಗಳ ಮೂಲಕ ನಗರಕ್ಕೆ ಕಳುಹಿಸಿದ್ದಾರೆ.
ಕರ್ನಾಟಕದಲ್ಲಿ ತೆರಿಗೆ ಪಾವತಿಸದೆ ಅಕ್ರಮವಾಗಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಹೊರವಲಯದಲ್ಲಿರುವ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಮುಂಜಾನೆ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತರಾದ ಶೋಭಾ ಹಾಗೂ ಗಾಯತ್ರಿ ದೇವಿ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಕೇವಲ ಅರ್ಜಿ ಶುಲ್ಕವನ್ನು ಪಾವತಿಸಿ, ರಾಜ್ಯ ಸಾರಿಗೆ ಇಲಾಖೆಗೆ ಪಾವತಿಸಬೇಕಾದ ತೆರಿಗೆ ವಂಚಿಸಿ ಈ ಬಸ್‌ಗಳು ಸಂಚರಿಸುತ್ತಿದ್ದವು ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಸ್‌ಗಳನ್ನು ವಶಕ್ಕೆ ಪಡೆದ ಕಾರಣ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಸ್ಥಳದಲ್ಲೇ ಪರ್ಯಾಯ ವ್ಯವಸ್ಥೆ ಮಾಡಿದರು. ಕೂಡಲೇ ಬಿಎಂಟಿಸಿ ಬಸ್‌ಗಳನ್ನು ಸ್ಥಳಕ್ಕೆ ಕರೆಸಿ, ಪ್ರಯಾಣಿಕರನ್ನು ಅವರವರ ನಿಗದಿತ ನಿಲ್ದಾಣಗಳಿಗೆ ಉಚಿತವಾಗಿ ತಲುಪಿಸಲು ಕ್ರಮ ಕೈಗೊಂಡರು. ಪ್ರಯಾಣಿಕರಿಂದ ಯಾವುದೇ ಕಾರಣಕ್ಕೂ ಹಣ ಸಂಗ್ರಹಿಸಬಾರದು ಎಂದು ಬಿಎಂಟಿಸಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಈ ಬೃಹತ್ ಕಾರ್ಯಾಚರಣೆಯಲ್ಲಿ ಮೋಟಾರು ವಾಹನ ನಿರೀಕ್ಷಕರಾದ ನವೀನ್, ವಿಶ್ವನಾಥ್ ಶೆಟ್ಟಿ, ಅಮೂಲ್ಯ, ಸುಧಾಕರ್, ನರಸಿಂಹ ಮೂರ್ತಿ, ರಾಜೇಶ್ ಹಾಗೂ ಆರ್‌ಟಿಒ ಅಧಿಕಾರಿಗಳಾದ ದೀಪಕ್, ಪ್ರಮಾತೇಶ ಮತ್ತು ರಾಜಕುಮಾರ್ ಪಾಲ್ಗೊಂಡಿದ್ದರು. ವಶಪಡಿಸಿಕೊಂಡ ಬಸ್‌ಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

