ಮುಂಗಾರು ಅಧಿವೇಶನ | ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ಲಾಭ: ಸಚಿವ ರಾಮಲಿಂಗಾ ರೆಡ್ಡಿ
x

ಮುಂಗಾರು ಅಧಿವೇಶನ | ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ಲಾಭ: ಸಚಿವ ರಾಮಲಿಂಗಾ ರೆಡ್ಡಿ


ʻʻಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಾರಿಗೆ ನಿಗಮಗಳು ಲಾಭದತ್ತ ಸಾಗಿವೆ. ಆದರೆ, ಇದೇ ವೇಳೆಗೆ ನಿರ್ವಹಣೆ, ಡೀಸೆಲ್ ​ದರ ಹೆಚ್ಚಳವಾಗಿದೆ. ಆದರೂ ಟಿಕೆಟ್ ದರ ಹೆಚ್ಚಿಸಿಲ್ಲದ ಕಾರಣದಿಂದಾಗಿ ಲಾಭವನ್ನು ತೋರಿಸಲಾಗುತ್ತಿಲ್ಲʼʼ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಿಗಮಗಳಿಗೆ ಲಾಭವಾಗುತ್ತಿದೆ. ಬಿಎಂಟಿಸಿ 10 ವರ್ಷದಿಂದ ಟಿಕೆಟ್ ದರ ಹೆಚ್ಚಿಸಿಲ್ಲ. 'ಶಕ್ತಿ' ಯೋಜನೆ ಜಾರಿ ನಂತರ ಆದಾಯ ಹೆಚ್ಚಾದರೂ ನಿರ್ವಹಣೆ, ಡೀಸೆಲ್, ವೇತನದ ಕಾರಣಕ್ಕೆ ಲಾಭ ತೋರಿಸಲಾಗುತ್ತಿಲ್ಲ. 2020ರಲ್ಲಿ ಉಳಿದ ಮೂರು ಸಾರಿಗೆ ನಿಗಮಗಳಿಂದ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಇದರ ನಡುವೆ ಡೀಸೆಲ್ ದರ ಹೆಚ್ಚಳವಾಗಿದೆ. ಹಾಗಾಗಿ ಲಾಭ ತೋರಿಸಲಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳಿಗೆ ಲಾಭವಾಗಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಶಕ್ತಿ' ಯೋಜನೆಯಡಿ 2024ರ ಜೂನ್‌ವರೆಗೆ 4,453.50 ಕೋಟಿ ಬಿಡುಗಡೆ ಮಾಡಿದ್ದು 1,413.47 ಕೋಟಿ ಬಾಕಿ ಇದೆ. ಯೋಜನೆಗೆ 5,015 ಕೋಟಿ ಹಣವನ್ನು ಈ ಬಾರಿ ಬಜೆಟ್‌ನಲ್ಲಿ ಇಡಲಾಗಿದೆ. ಈ ವರ್ಷ ಸ್ವಲ್ಪ ಕೊರತೆಯಾಗಬಹುದು. ಇದನ್ನು ಸರಿಪಡಿಸಲು ಸಿಎಂ ಗಮನಕ್ಕೆ ತರಲಾಗಿದೆ. ಪೂರಕ ಬಜೆಟ್‌ನಲ್ಲಿ ಅನುದಾನ ಒದಗಿಸುವ ಭರವಸೆ ಇದೆʼʼ ಎಂದು ಹೇಳಿದರು.

ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ನಾಲ್ಕು ಪುಟಗಳ ಟಿಪ್ಪಣಿ ಬರೆದು ಸಾರಿಗೆ ನಿಗಮಗಳ ಸದ್ಯದ ಆರ್ಥಿಕ ಪರಿಸ್ಥಿತಿಯ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ 'ಶಕ್ತಿ' ಯೋಜನೆಯ 2023- 24ನೇ ಸಾಲಿನ ಬಾಕಿ 31,180.61 ಕೋಟಿಯೂ ಸೇರಿ ಒಟ್ಟು 13,773,79 ಕೋಟಿಯನ್ನು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಮರುಪಾವತಿ ಮಾಡಬೇಕಿದೆ ಎಂದು ತಿಳಿಸಿದ್ದರು.

ಈ ಯೋಜನೆಯಲ್ಲಿ ನಿಗಮಗಳಿಗೆ ಆಗಿರುವ ವೆಚ್ಚವನ್ನು ಸಂಪೂರ್ಣ ಮರು ಪಾವತಿಸಿ, ಸಾರಿಗೆ ಸೇವೆಯನ್ನು ಸಮರ್ಪಕವಾಗಿ ನಿಭಾಯಿಸಲು ಅರ್ಥಿಕ ನೆರವು ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದೂ ಸಚಿವರು ಮನವಿ ಮಾಡಿದ್ದರು. ಈ ಟಿಪ್ಪಣಿಯನ್ನು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯ ಕಾರ್ಯದರ್ಶಿ ರವಾನಿಸಿದ್ದರು.

ಸಚಿವರು ಬರೆದ ಟಿಪ್ಪಣಿಯಲ್ಲಿ ಏನಿತ್ತು?

ಇಂಧನ ವೆಚ್ಚ ಮತ್ತು ಕಾಲಕಾಲಕ್ಕೆ ತುಟ್ಟಿ ಭತ್ಯೆ ಹೆಚ್ಚಳ, ಬಿಡಿ ಭಾಗಗಳ ವೆಚ್ಚದಲ್ಲಿ ಹೆಚ್ಚಳದಿಂದಾಗಿ ನಿಗಮಗಳ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆ ಉಂಟಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ಪ್ರಯಾಣಿಕರ ಟಿಕೆಟ್‌ ದರಗಳನ್ನು 2020ರಿಂದ ಹಾಗೂ ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌ಗಳ ದರಗಳನ್ನು 2012ರಿಂದ ಪರಿಷ್ಕರಿಸಿಲ್ಲ. 2023ರ ಮಾರ್ಚ್ 1ರಿಂದ ಸಿಬ್ಬಂದಿ ವೇತನ ಪರಿಷ್ಕರಣೆಯಿಂದ ನಿಗಮಕ್ಕೆ ತಿಂಗಳಿಗೆ 155.35 ಕೋಟಿ ಹೆಚ್ಚುವರಿ ವೆಚ್ಚ ಉಂಟಾಗುತ್ತಿದ್ದು. ಅದನ್ನು ನಿಭಾಯಿಸಲು ವಿಶೇಷ ಅನುದಾನ ಬಿಡುಗಡೆ ಆಗಿಲ್ಲ.

2023-24ನೇ ಸಾಲಿನಲ್ಲಿ ನಿಗಮಗಳ ಆದಾಯದಲ್ಲಿ ಶೇ 47ರಷ್ಟು ಶಕ್ತಿ ಯೋಜನೆಯಡಿ ಹಾಗೂ ಶೇ 53ರಷ್ಟು 'ಶಕ್ತಿ'ಯೇತರವಾಗಿ ಬಂದಿದೆ. ಡೀಸೆಲ್, ಸಿಬ್ಬಂದಿ ವೆಚ್ಚ ಮತ್ತು ಇತರ ಕಾರ್ಯಾಚರಣೆ ವೆಚ್ಚಗಳನ್ನು ತಿಂಗಳಿಡೀ ನಿಭಾಯಿಸಲು 'ಶಕ್ತಿ'ಯೇತರ ಆದಾಯದ ಜೊತೆಗೆ 'ಶಕ್ತಿ' ಯೋಜನೆಯಡಿ ಸಂಗ್ರಹವಾಗುವ ಸಂಪೂರ್ಣ ಮೊತ್ತವೂ ಅತ್ಯಗತ್ಯವಾಗಿದೆ. ಆದರೆ, 'ಶಕ್ತಿ' ಯೋಜನೆಯಡಿ ಸಂಗ್ರಹವಾದ ಆದಾಯ ಸಂಪೂರ್ಣವಾಗಿ ಮರು ಪಾವತಿಯಾಗದೇ ಇರುವುದರಿಂದ, ಆ ಮೊತ್ತವೂ ಸೇರಿ ಒಟ್ಟು 23,773.79 ಕೋಟಿಯನ್ನು ಸರ್ಕಾರ ಮರು ಪಾವತಿಸಲು ಬಾಕಿಯಿದೆ ಎಂದು ವಿವರಿಸಿದ್ದ ಸಚಿವರು, ಆ ವಿವರಗಳ ಪಟ್ಟಿಯನ್ನೂ ಟಿಪ್ಪಣಿಯಲ್ಲಿ ನೀಡಿದ್ದರು.

ʻಶಕ್ತಿʼ ಯೋಜನೆ ಜಾರಿಗೆ ಬಂದ ನಂತರ ಗ್ರಾಮಾಂತರ ಪ್ರದೇಶವೂ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಲು ಭಾರಿ ಬೇಡಿಕೆ ಇದೆ. ಹೀಗಾಗಿ, ಹೊಸ ವಾಹನಗಳನ್ನು ಖರೀದಿಸುವ ಮೂಲಕ ನಿಗಮಗಳ ವಾಹನ ಬಲ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಹೊಸ ವಾಹನಗಳ ಖರೀದಿಗೆ 2023-24ನೇ ಸಾಲಿನಲ್ಲಿ ಸರ್ಕಾರ 3600 ಕೋಟಿ ಬಿಡುಗಡೆ ಮಾಡಿದೆ. ಆದರೆ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯಾವುದೇ ಅನುದಾನ ಒದಗಿಸಿಲ್ಲ. ಸಂಗ್ರಹವಾಗುತ್ತಿರುವ ನಗದು ಆದಾಯದಿಂದ ನೌಕರರ ವೇತನ ಮತ್ತು ಬಸ್‌ಗಳ ಕಾರ್ಯಾಚರಣೆಗೆ ಅತ್ಯಗತ್ಯವಾದ ಇಂಧನ ಮತ್ತು ಇತರ ವೆಚ್ಚಗಳನ್ನು ಮಾತ್ರ ಭರಿಸಲಾಗುತ್ತಿದೆ. ಭವಿಷ್ಯ ನಿಧಿಗೆ ಪಾವತಿಸಬೇಕಿರುವ ಮೊತ್ತವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2023ರ ವೇತನ ಪರಿಷ್ಕರಣೆಯಂತೆ ಹಾಲಿ ಮತ್ತು ನಿವೃತ್ತ ನೌಕರರಿಗೆ ಹಿಂಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೊಸ ಬಸ್‌ಗಳ ಖರೀದಿಗೆ ಸಂಪನ್ಮೂಲ ಕ್ರೋಡೀಕರಿಸಿ ನಿಭಾಯಿಸುವುದು ಕಷ್ಟ ಸಾಧ್ಯವಾಗಿದೆʼʼ ವಿವರಿಸಿದ್ದರು.

ʻಶಕ್ತಿʼ ಯೋಜನೆಯ 2023-24ನೇ ಸಾಲಿನ ಬಾಕಿ 11180.61 ಕೋಟಿ ಬಿಡುಗಡೆ ಮಾಡಬೇಕು. ಪ್ರಸಕ್ತ ಸಾಲಿನಡಿ 'ಶಕ್ತಿ' ಯೋಜನೆಯಡಿ ನಿಗಮಗಳಿಗೆ ಆಗಿರುವ ವೆಚ್ಚವನ್ನು ಸಂಪೂರ್ಣ ಮರುಪಾವತಿಸಬೇಕು. ವೇತನ ಪರಿಷ್ಕರಣೆಯ ಮೊತ್ತ (ನಿವೃತ್ತ ನೌಕರರಿಗೆ ಹಿಂಬಾಕಿ) ಪಾವತಿಗೆ 3220 ಕೋಟಿ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ನಿಗಮಗಳು 2068 ಹೊಸ ವಾಹನಗಳನ್ನು ಖರೀದಿಸಲು ಯೋಚಿಸಿದ್ದು ಬಂಡವಾಳ ವೆಚ್ಚ ನಿಭಾಯಿಸಲು 3800 ಕೋಟಿ ವಿಶೇಷ ಅನುದಾನ ನೀಡಬೇಕು. ಸರ್ಕಾರಕ್ಕೆ ಸಾರಿಗೆ ನಿಗಮಗಳು 2024 25ನೇ ಸಾಲಿನಲ್ಲಿ ಪಾವತಿಸಬೇಕಾದ ಮೋಟಾರು ವಾಹನ ತೆರಿಗೆ 3637.76 ಕೋಟಿಗೆ ಪಾವತಿಯಿಂದ ವಿನಾಯಿತಿ ನೀಡಬೇಕುʼʼ ಎಂದು ಸಚಿವರು ಮನವಿ ಮಾಡಿದ್ದರು.

Read More
Next Story