A transport company built and nurtured by workers falls victim to nepotism
x

ಮಲೆನಾಡಿನಲ್ಲಿ ಸಂಚರಿಸುತ್ತಿದ್ದ ಸಹಕಾರಿ ಸಾರಿಗೆ ಬಸ್‌ಗಳು

ಅಮಿತ್‌ ಶಾ ಹೇಳಿಕೆ: ಗರಿಗೆದರಿತು ಚಿಕ್ಕಮಗಳೂರು ಸಹಕಾರಿ ಸಾರಿಗೆಯ ಪುನರುತ್ಥಾನದ ಕನಸು

ಟ್ಯಾಕ್ಸಿ ಚಾಲಕರಿಗೆ ರಾಷ್ಟ್ರ ಮಟ್ಟದಲ್ಲಿ ಸಹಕಾರಿ ಸಂಘಟನೆ ಸ್ಥಾಪಿಸಿ ಎಲ್ಲಾ ಲಾಭವನ್ನು ಚಾಲಕರಿಗೆ ನೇರವಾಗಿ ವರ್ಗಾಯಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದರು.


ದೇಶಾದ್ಯಂತ ಸಹಕಾರ ಸಂಘಗಳ ಅಡಿಯಲ್ಲಿ ಓಲಾ ಮತ್ತು ಉಬರ್‌ ರೀತಿಯ ಸಹಕಾರಿ ಸೇವೆ ಆರಂಭಿಸುವ ಕೇಂದ್ರ ಸರ್ಕಾರದ ಪ್ರಸ್ತಾಪ ಕಾರ್ಮಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

ಕರ್ನಾಟಕದಲ್ಲಿ ಈಗಾಗಲೇ ಓಲಾ, ಉಬರ್‌ ಬೈಕ್‌ ಟ್ಯಾಕ್ಸಿಗೆ ಹೈಕೋರ್ಟ್‌ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು ಈ ಹಿಂದೆ ಸಂಸತ್ತಿನಲ್ಲಿ ಸಹಕಾರ ಟ್ಯಾಕ್ಸಿ ಕುರಿತು ನೀಡಿದ್ದ ಹೇಳಿಕೆ ಮುನ್ನೆಲೆಗೆ ಬಂದಿದೆ.

ಹೀಗಿರುವಾಗ, ಕರ್ನಾಟಕದಲ್ಲಿ ಸಹಕಾರ ತತ್ವದಡಿ ಕಾರ್ಯಾಚರಣೆ ನಡೆಸಿ, ಸಾರಿಗೆ ವಲಯದಲ್ಲಿ ಉತ್ತುಂಗಕ್ಕೇರಿದ್ದ ಚಿಕ್ಕಮಗಳೂರಿನ ಸಹಕಾರ ಸಾರಿಗೆ ವ್ಯವಸ್ಥೆ ನಷ್ಟದಿಂದ ಮುಚ್ಚಿಹೋಗಿದೆ.

ಇಂತಹ ಸಂದರ್ಭದಲ್ಲಿ ಮತ್ತೆ ಸಹಕಾರ ಸಂಘಗಳಡಿ ಟ್ಯಾಕ್ಸಿ ಸೇವೆ ಆರಂಭಿಸುವ ಕೇಂದ್ರ ಸಹಕಾರ ಸಚಿವರ ಪ್ರಯತ್ನವು ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಹೊಸದೊಂದು ವ್ಯವಸ್ಥೆಗೆ ಅಡಿಪಾಯ ಹಾಕಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಈ ಬೆಳವಣಿಗೆಗಳ ಹಿನ್ನೆಯಲ್ಲಿ ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಣ್ಣದಾಗಿ ಆರಂಭಗೊಂಡು ಸಾರಿಗೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಸಹಕಾರ ಸಾರಿಗೆಯ ಏಳು -ಬೀಳುಗಳ ಮೇಲೆ ಬೆಳಕು ಚೆಲ್ಲುವ ವರದಿ ಇಲ್ಲಿದೆ.

ಸಹಕಾರ ಸಾರಿಗೆ ಆರಂಭ

ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳು ಸಂಚರಿಸದೇ ಇದ್ದ 90ರ ದಶಕದಲ್ಲಿ ಜನರಿಗೆ ಅತ್ಯತ್ತಮ ಸೇವೆ ನೀಡಬೇಕು ಎಂದು ಹುಟ್ಟಿಕೊಂಡ ಸಂಸ್ಥೆಯೇ ಸಹಕಾರ ಸಾರಿಗೆ. 1991 ರಲ್ಲಿ ಚಿಕ್ಕಮಗಳೂರಿನ ಕೊಪ್ಪದಲ್ಲಿ ಆರಂಭವಾದ ಸಹಕಾರ ಸಾರಿಗೆ ಸಂಸ್ಥೆ ಆರಂಭದಲ್ಲಿ ಕೇವಲ ಆರು ಬಸ್‌ಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಮಲೆನಾಡಿನ ಗ್ರಾಮೀಣ ಜನರಿಗೆ ಅತ್ಯತ್ತಮ ಸೇವೆ ಸಲ್ಲಿಸಿ ಲಾಭ ಗಳಿಸಿದ ಸಂಸ್ಥೆ ಕೊನೆಗೆ 76 ಬಸ್‌ಗಳನ್ನು ನಿರ್ವಹಣೆ ಮಾಡುವ ಮಟ್ಟಕ್ಕೆ ಬೆಳೆಯಿತು. ಮಲೆನಾಡಿನ ಜನರ ಜೀವನಾಡಿಯಾಗಿ ಜನ ಸಾಮಾನ್ಯರ ಬಸ್‌ ಎಂದೇ ಪ್ರಸಿದ್ದಿ ಪಡೆದಿತ್ತು.

ಕಾರ್ಮಿಕರೇ ಬಸ್‌ ಮಾಲಿಕರಾದ ಕತೆ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 1991ಕ್ಕಿಂತ ಮೊದಲು ʼಶಂಕರ್‌ ಟ್ರಾನ್ಸ್‌ಪೋರ್ಟ್‌ ಸಂಸ್ಥೆʼ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿತ್ತು. ಆದರೆ ನಷ್ಟದ ಕಾರಣದಿಂದ ಸಂಸ್ಥೆ ಮುಚ್ಚಲಾಯಿತು. ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಕಾರ್ಮಿಕರು ನಿರುದ್ಯೋಗಿಗಳಾದರು. ಈ ವೇಳೆ ಬಿ.ಕೆ.ಸುಂದರೇಶ್‌ ಹಾಗೂ ಹೋರಾಟಗಾರ ಸಿರಿಮನೆ ನಾಗರಾಜ್‌ ಅವರು ಕಾರ್ಮಿಕರನ್ನು ಒಟ್ಟುಗೂಡಿಸಿ ಎಲ್ಲರೂ ತಮ್ಮ ಕೈಲಾದ ಹಣ ನೀಡಿ 12 ಲಕ್ಷ ರೂ. ಕ್ರೂಢಿಕರಿಸಿ ಆರು ಬಸ್‌ಗಳನ್ನು ಖರೀದಿಸಿ ಕಟ್ಟಿದ ಸಂಸ್ಥೆಯೇ ಸಹಕಾರ ಸಾರಿಗೆ ಸಂಸ್ಥೆ.

ಕಾರ್ಮಿಕರೇ ನಿಗದಿತ ಷೇರು ಕ್ರೂಢಿಕರಿಸಿ ಕಟ್ಟಿದ ಸಂಸ್ಥೆಗೆ ಮಾಲೀಕರಿಲ್ಲ ಎಂಬುದೇ ವಿಶೇಷ.

ಏಷ್ಯಾದಲ್ಲೇ ಪ್ರಸಿದ್ಧಿಯಾದ ಸಹಕಾರಿ ಸಾರಿಗೆ

ಕಾರ್ಮಿಕರೇ ಕಟ್ಟಿ ಬೆಳೆಸಿದ ಸಹಕಾರ ಸಾರಿಗೆ ಸಂಸ್ಥೆ ಏಷ್ಯಾದಲ್ಲೇ ಅತ್ಯಂತ ಪ್ರಸಿದ್ದಿ ಪಡೆದಿತ್ತು.

ಸಹಕಾರ ಸಾರಿಗೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜಪಾನ್‌ನ ಅಧಿಕಾರಿಗಳ ನಿಯೋಗವು ಸಹಕಾರಿ ಸಾರಿಗೆ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಆಡಳಿತ ಮಂಡಳಿ ಹಾಗೂ ಜನರಿಗೆ ನೀಡುತ್ತಿರುವ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿತ್ತು.

ಲಾಭದಲ್ಲಿದ್ದ ಸಂಸ್ಥೆ ದಿಢೀರ್‌ ನಷ್ಟ

ಚಿಕ್ಕಮಗಳೂರು, ಶೃಂಗೇರಿ, ಹೊರನಾಡು ಹಾಗೂ ಕಳಸ ಮಾರ್ಗದಲ್ಲಿ ಕಳೆದ 15 ವರ್ಷಗಳಿಂದ ಸಹಕಾರ ಸಾರಿಗೆ ಬಸ್ ನಲ್ಲಿ ಟಿಕೆಟ್‌ ಪರಿಶೀಲನೆ ಕೆಲಸ ಮಾಡುತ್ತಿದ್ದ ಚೇತನ್‌ ಎಂಬುವರು ʼದ ಫೆಡರಲ್‌ ಕರ್ನಾಟಕ' ದ ಜತೆ ಮಾತನಾಡಿ, ನಮ್ಮ ಹೆಮ್ಮೆಯ ಸಾರಿಗೆ ಸಂಸ್ಥೆ ಲಾಭದಲ್ಲೇ ನಡೆಯುತ್ತಿತ್ತು. ಆಡಳಿತ ಮಂಡಳಿ ವೈಫಲ್ಯ ಹಾಗೂ ತೆರಿಗೆ ಉಳಿಸಿಕೊಂಡಿದ್ದರ ಪರಿಣಾಮ 2020 ಫೆಬ್ರವರಿ 16 ರಂದು ಸಂಸ್ಥೆ ಮುಚ್ಚಿ ಹೋಯಿತು. ಕಾರ್ಯ ನಿರ್ವಹಿಸಿದ ಅಷ್ಟೂ ದಿನ ಬಸ್‌ ಜನರಿಗೆ ಉತ್ತಮ ಸೇವೆ ನೀಡಿದೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಮುಚ್ಚಿದ ಪರಿಣಾಮ 200 ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬರುವಂತಾಗಿದೆ. ನಮಗೆ ಸ್ವಲ್ಪ ಕೃಷಿ ಭೂಮಿ ಇರುವುದರಿಂದ ಕೃಷಿ ಮಾಡುತ್ತಿದ್ದೇವೆ. ಇನ್ನೂ ಹಲವು ಮಂದಿ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ಹುಸಿಯಾದ ಬಿಎಸ್‌ವೈ ಭರವಸೆ

ರಾಜ್ಯ ಸಾರಿಗೆ ಇಲಾಖೆಯ ನೌಕರರಿಗೆ ನೀಡುವ ಸೌಲಭ್ಯವನ್ನು ಸಹಕಾರ ಸಾರಿಗೆ ಸಂಸ್ಥೆ ನೌಕರರಿಗೂ ನೀಡಬೇಕು. ಆರ್ಥಿಕ ಸಹಾಯ ಒದಗಿಸುವ ಮೂಲಕ ಸಂಸ್ಥೆಯ ನೆರವಿಗೆ ಧಾವಿಸಬೇಕು ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು.

ಶೃಂಗೇರಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಜೀವರಾಜ್‌ ಅವರು ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಿ ನಂತರ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸೋಣ ಎಂದು ಸೂಚನೆ ನೀಡಿದ್ದರು. ಅದರಂತೆ ಹೊಸ ಆಡಳಿತ ಮಂಡಳಿಯೊಂದಿಗೆ ಸಿಎಂ ಭೇಟಿ ಮಾಡಿದಾಗ ಹಣಕಾಸು ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಹಣ ಬಿಡುಗಡೆ ಮಾಡಿಲ್ಲ.

ಷೇರು ಹಣ ವಾಪಸ್‌ ಇಲ್ಲ

ಸಹಕಾರ ಸಾರಿಗೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಆಡಳಿತ ಮಂಡಳಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಕಾರ್ಮಿಕರು ಬೀದಿಗೆ ಬರಬೇಕಾಯಿತು. ಆರು ವರ್ಷಗಳ ಕಾಲ ಸಂಸ್ಥೆಯ ಬಸ್‌ನಲ್ಲಿ ನಿರ್ವಾಹಕ ಹಾಗೂ ಚಾಲಕನಾಗಿ ಕೆಲಸ ನಿರ್ವಹಿಸಿದ್ದೇನೆ. ರಾಜ್ಯ ಸಾರಿಗೆ ಸಂಸ್ಥೆಯಂತೆಯೇ ಸಹಕಾರ ಸಾರಿಗೆ ಸಂಸ್ಥೆ ಎಲ್ಲಾ ಸೌಲಭ್ಯಗಳನ್ನು ನೀಡಿತ್ತು. ಸರಿಯಾಗಿ ಸಂಬಳವೂ ಆಗುತ್ತಿತ್ತು. ಆದರೆ 2019ರ ಅಂತ್ಯಕ್ಕೆ ಸಂಸ್ಥೆ ನಷ್ಟದಲ್ಲಿದೆ ಎಂದು ಮುಚ್ಚಲಾಯಿತು. ಆದರೆ ನಾವು ಸಂಸ್ಥೆಗೆ ಕಟ್ಟಿದ್ದ ಷೇರು ಹಣವನ್ನು ವಾಪಸ್‌ ನೀಡಿಲ್ಲ. ಆಡಳಿತ ಮಂಡಳಿಯ ವಿರುದ್ದ ಹಲವಾರು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚಿಕ್ಕಮಗಳೂರಿನ ಹಾಲ್ದೂರು ಗ್ರಾಮದ ಪವನ್‌ ʼದ ಫೆಡರಲ್‌ ಕರ್ನಾಟಕ'ಕ್ಕೆ ತಿಳಿಸಿದರು.

ವಿದ್ಯಾರ್ಥಿ, ಉದ್ಯೋಗಿಗಳ ನೆಚ್ಚಿನ ಬಸ್‌

ಮಲೆನಾಡು ಭಾಗದಲ್ಲಿ ಮೂರು ದಶಕಗಳಿಂದ ಸೇವೆ ನೀಡುತ್ತಿದ್ದ ಸಹಕಾರಿ ಸಾರಿಗೆ ಬಸ್‌ಗಳ ಪ್ರಯಾಣಿಕರ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳೇ ಇದ್ದರು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ನೀಡಲಾಗುತ್ತಿತ್ತು. ಸರಿಯಾದ ಸಮಯಕ್ಕೆ ಬರುತ್ತಿದ್ದ ಬಸ್‌ನಲ್ಲಿ ಶಿಕ್ಷಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳೇ ಹೆಚ್ಚಾಗಿರುತ್ತಿದ್ದರು. ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಬರುವುದೇ ಇಲ್ಲ. ಇಂತಹ ಸಮಯದಲ್ಲಿ ಸಹಕಾರಿ ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಸಾಲದ ಸುಳಿಯಲ್ಲಿ ಸಿಲುಕಿ ಬಸ್‌ಗಳು ಸಂಚಾರ ನಿಲ್ಲಿಸಿರುವುದು ಗ್ರಾಮೀಣ ಜನರಿಗೆ ಸಮಸ್ಯೆಯಾಗಿದೆ. ಆದಷ್ಟು ಶೀಘ್ರ ಸಹಕಾರಿ ಸಾರಿಗೆ ಬಸ್‌ಗಳು ಸಂಚಾರ ಆರಂಭಿಸಲಿ ಎಂದು ಕಡೂರು ತಾಲೂಕಿನ ಉಪನ್ಯಾಸಕರಾದ ರಮೇಶ್‌ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಸ್ವಜನ ಪಕ್ಷಪಾತದಿಂದ ನಷ್ಟ ?

ಕಳೆದ 29 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಹಕಾರಿ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಗೆ ಪ್ರತಿ ವರ್ಷ ಚುನಾವಣೆ ನಡೆಸಿ ನಿರ್ದೇಶಕರು ಹಾಗೂ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ನಿಲ್ಲಲು ಆಡಳಿತ ಮಂಡಳಿ ತಮಗೆ ಬೇಕಾದವರಿಗೆ ಮಾತ್ರ ಅವಕಾಶ ನೀಡುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಮೊದಲು ಅಧ್ಯಕ್ಷರಾಗಿ ಸಂಸ್ಥೆಯನ್ನು ಲಾಭದಲ್ಲಿ ಮುನ್ನಡೆಸುತ್ತಿದ್ದ ಚಿಕ್ಕೇಗೌಡರನ್ನು ಆಡಳಿತ ಮಂಡಳಿಯಿಂದ ಮೂಲೆಗುಂಪು ಮಾಡಿ ಧರ್ಮಪ್ಪ ಎಂಬುವವರು ಅಧ್ಯಕ್ಷರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಸಂಸ್ಥೆ ನಷ್ಟದ ಸುಳಿಗೆ ಸಿಲುಕಿತು. ಆಡಳಿತ ಮಂಡಳಿಯ ಸದಸ್ಯರೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಜೈಲುಪಾಲಗಿದ್ದ ಅಧ್ಯಕ್ಷ ಹಾಗೂ ಎಂ.ಡಿ

ಸಹಕಾರ ಸಾರಿಗೆ ಸಂಸ್ಥೆ ನಷ್ಟದ ಸುಳಿಗೆ ಸಿಲುಕಿದೆ ಎಂಬ ಮಾಹಿತಿ ದೊರೆತ ತಕ್ಷಣ ಕಾರ್ಮಿಕರೆಲ್ಲೂ ಕೊಪ್ಪದಲ್ಲಿನ ಸಂಸ್ಥೆಯ ಕೇಂದ್ರ ಕಚೇರಿ ಎದುರು ಸತತ ಆರು ತಿಂಗಳು ಹೋರಾಟ ನಡೆಸಿದ್ದರು. ಈ ವೇಳೆ ಒಬ್ಬ ಚಾಲಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ವಿರುದ್ದ ಕಾರ್ಮಿಕರು ದೂರು ನೀಡಿದ್ದರು. ಈ ವೇಳೆ ತನಿಖೆ ನಡೆಸಿದ್ದ ಪೊಲೀಸರು ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಬಂಧಿಸಿದ್ದರು.

ಮೂರು ತಿಂಗಳು ಜೈಲುವಾಸ ಅನುಭವಿಸಿದ್ದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ‌ ನಿರ್ದೇಶಕರು ಜಾಮೀನಿನ ಮೇಲೆ ಹೊರ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೂ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಆಸೆ ಕಂಗಳಿಂದ ಕಾಯುತ್ತಿರುವ ಕಾರ್ಮಿಕರು

ಮಲೆನಾಡಿನಲ್ಲಿ ಮನೆ ಮಾತಾಗಿದ್ದ, ಜನ ಸಾಮಾನ್ಯರ ಬಸ್‌ ಎಂದೇ ಪ್ರಸಿದ್ದಿ ಪಡೆದಿದ್ದ ಸಹಕಾರ ಸಾರಿಗೆ ಬಸ್‌ಗಳು ತಮ್ಮ ಪ್ರಯಾಣವನ್ನು ನಿಲ್ಲಿಸಿ ಐದು ವರ್ಷ ಕಳೆದಿದ್ದರೂ ಇಂದಿಗೂ ಮಲೆನಾಡು ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಮುಂದಿನ ದಿನಗಳಲ್ಲಿ ಸಂಚಾರ ಆರಂಭಿಸಬಹುದು ಎಂದು ಈಗಲೂ ಆಸೆ ಕಂಗಳಿಂದ ಕಾಯುತ್ತಿದ್ದಾರೆ.

2022 ರ ಜುಲೈನಲ್ಲಿ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಕೆ.ವಿ. ಸುಬ್ರಹ್ಮಣ್ಯ ನೇಮಕವಾಗಿದ್ದರು. ಈ ವೇಳೆ ಸರ್ಕಾರಕ್ಕೆ ಆರ್ಥಿಕ ಸಹಾಯ ಮಾಡುವಂತೆ ಹಲವು ಬಾರಿ ಪತ್ರ ಬರೆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಅಮಿತ್‌ ಶಾ ಹೇಳಿರುವುದೇನು?

ಟ್ಯಾಕ್ಸಿ ಚಾಲಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ಸಂಘಟನೆ ಸ್ಥಾಪಿಸಿ ಇದರ ಎಲ್ಲಾ ಲಾಭವನ್ನು ಮೂರನೇ ವ್ಯಕ್ತಿ ಮಧ್ಯಪ್ರವೇಶವಿಲ್ಲದೆ ಚಾಲಕರಿಗೆ ನೇರವಾಗಿ ವರ್ಗಾಯಿಸಲಾಗುವುದು. ಚಾಲಕರಿಗೆ ಉತ್ತಮ ಉದ್ಯೋಗ ಭದ್ರತೆ, ನ್ಯಾಯಯುತ ವೇತನ ಮತ್ತು ಇತರೆ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಹೊಸ ಸೇವೆಯಡಿ ದ್ವಿ ಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು.

Read More
Next Story