
ರಾಜ್ಯದಲ್ಲಿದ್ದಾರೆ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾತರು (ಟ್ರಾನ್ಸ್ ಜೆಂಡರ್) ಗುರುತಿಸಿಕೊಂಡಿರುತ್ತಾರೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಸದಾ ಗೋಳು! ಆಸ್ಪತ್ರೆಗಳಲ್ಲಿ, ಶಾಲೆಗಳಲ್ಲಿ ಅವಮಾನ; ಉಚಿತ ಬಸ್ ಪಯಣಕ್ಕೂ ತೊಂದರೆ!
2025-26ನೇ ಸಾಲಿನ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, 10,365 ಲಿಂಗತ್ವ ಅಲ್ಪಸಂಖ್ಯಾತರು ಪತ್ತೆಯಾಗಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಮಹತ್ವದ ಶಿಫಾರಸುಗಳನ್ನು ಮಾಡಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಕರು ಸಮಾನವಾಗಿ ಕಾಣುತ್ತಿಲ್ಲ; ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗೆ ಹೋದರೆ ಅವಮಾನ, ದೌರ್ಜನ್ಯ... ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂತ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆ ಪ್ರಕಾರ ಸರ್ಕಾರಿ ಬಸ್‌ಗಳಲ್ಲಿ ತೆರಳಿದರೆ ಮತ್ತಷ್ಟು ಅವಮಾನ..
ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣದ ಕ್ರಮ ಜರುಗಬೇಕು!
ರಾಜ್ಯದ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸಮೀಕ್ಷಾ ವರದಿಯ ಈ ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಎತ್ತಿತೋರಿಸಿದ್ದು, ಸೂಕ್ತ ಕ್ರಮಗಳಿಗಾಗಿ ಶಿಫಾರಸುಗಳನ್ನು ಮಾಡಿದೆ. ಜತೆಗೆ, ಕೇವಲ ಸರ್ಕಾರಿ ಮಾತ್ರವಲ್ಲದೆ, ಖಾಸಗಿ ಕಂಪನಿಗಳೂ ಸಹ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ. 1 ರಷ್ಟು ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂಬ ಹಲವು ಶಿಫಾರಸುಗಳನ್ನು ಮಾಡಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಸಮೀಕ್ಷಾ ವರದಿಯು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಹತ್ವದ ಶಿಫಾರಸುಗಳನ್ನು ಮಾಡಿದೆ.
ಶಿಕ್ಷಣವು ಪ್ರತಿಯೊಬ್ಬ ಮಗುವಿನ ಹಕ್ಕು ಮತ್ತು ಬದುಕನ್ನು ಕಟ್ಟಿಕೊಳ್ಳಲು ಅಡಿಪಾಯವಾಗಿದೆ. ಆದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಇಂದಿಗೂ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳನ್ನು ಇತರೆ ವಿದ್ಯಾರ್ಥಿಗಳಂತೆ ಸಮಾನವಾಗಿ ಕಾಣದಿರುವುದು ನೋವಿನ ಸಂಗತಿ ಎಂದು ವರದಿಯು ವಿಷಾದ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಂವೇದನಾಶೀಲರಾಗಿ ವರ್ತಿಸಲು ವಿಶೇಷ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ವರದಿ ಶಿಫಾರಸು ಮಾಡಿದೆ. ಶನಿವಾರ ಸರ್ಕಾರಕ್ಕೆ ಸಲ್ಲಿಸಲಾದ ಈ ಸಮೀಕ್ಷೆಯ ಪ್ರಕಾರ ಅಂದಾಜು ಶೇ. 40 ರಷ್ಟು ಶಾಲಾ-ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ವಿವಿಧ ರೀತಿಯ ದೌರ್ಜನ್ಯ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ಪತ್ತೆಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
'ಅನ್ನಭಾಗ್ಯ'ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ
ಉದ್ಯೋಗ ಕ್ಷೇತ್ರದಲ್ಲೂ ಕೇವಲ ಸರ್ಕಾರಿ ಮಾತ್ರವಲ್ಲದೆ, ಖಾಸಗಿ ಕಂಪನಿಗಳೂ ಸಹ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ. 1 ರಷ್ಟು ಕಡ್ಡಾಯ ಮೀಸಲಾತಿ ಕಲ್ಪಿಸಬೇಕು ಎಂದು ಶಿಫಾರಸು ಮಾಡಿದೆ. ಇದಲ್ಲದೆ ಆಹಾರ ಭದ್ರತೆಗಾಗಿ 'ಅನ್ನಭಾಗ್ಯ' ಯೋಜನೆಯಡಿ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ ಪಡಿತರ ಚೀಟಿ ವಿತರಿಸಬೇಕು ಹಾಗೂ 'ಶಕ್ತಿ' ಯೋಜನೆಯಡಿ ಸಾರಿಗೆ ಸೌಲಭ್ಯ ಪಡೆಯುವಾಗ ನಿರ್ವಾಹಕರು ಮತ್ತು ಸಿಬ್ಬಂದಿಗಳು ಇವರೊಂದಿಗೆ ಸಂವೇದನಾಶೀಲರಾಗಿ ವರ್ತಿಸುವಂತೆ ಅರಿವು ಮೂಡಿಸಬೇಕು ಎಂಬುದು ಸಮೀಕ್ಷೆಯ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ.
'ಶಕ್ತಿ' ಯೋಜನೆಯಡಿ ಸಾರಿಗೆ ಸೌಲಭ್ಯ ಪಡೆಯುವಾಗ ನಿರ್ವಾಹಕರು ಮತ್ತು ಸಿಬ್ಬಂದಿಗಳು ಇವರೊಂದಿಗೆ ಸಂವೇದನಾಶೀಲರಾಗಿ ವರ್ತಿಸುವಂತೆ ಅರಿವು ಮೂಡಿಸಬೇಕು
ಇದಲ್ಲದೆ ಶೈಕ್ಷಣಿಕ ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ದಾಖಲಾತಿ ಮಾಡಿ ಕೊಳ್ಳಲು ಕ್ರಮವಹಿಸಬೇಕು. ಲಿಂಗತ್ಯ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಜನೆ ರೂಪಿಸುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೋಚಿಂಗ್ ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಲಾಗಿದೆ.
ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ
ಸರ್ಕಾರಿ ಮತ್ತು ಖಾಸಗಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಂವೇದನಾಶೀಲರಾಗಿ ವರ್ತಿಸುವಂತೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕು, ಲಿಂಗತ್ವ ಅಲ್ಪಸಂಖ್ಯಾತರು ಸ್ವಾವಲಂಬಿಗಳಾಗಿ ಬದುಕಲು ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ಕೌಶಲ್ಯಾಭಿವೃದ್ಧಿ ಇಲಾಖೆ ಮುಖಾಂತರ ಅವರಿಗೆ ವಿಶೇಷವಾಗಿ ತರಬೇತಿಗಳನ್ನು ನೀಡಲು ಯೋಜನೆಗಳನ್ನು ರೂಪಿಸಬೇಕು ಎಂದು ಎಂದು ಶಿಫಾರಸ್ಸಿನಲ್ಲಿ ತಿಳಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಆಯಾ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ಅವರಿಗೆ ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ನೀಡಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಡಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಲಾಗಿದೆ.
ಅಲ್ಪಸಂಖ್ಯಾತರಿಗೂ ಕುಟುಂಬದ ಹಕ್ಕು ಬೇಕು
ಕುಟುಂಬದಲ್ಲಿ ಎಲ್ಲ ಸದಸ್ಯರಿಗೂ ಇರುವ ಹಕ್ಕುಗಳು ಲಿಂಗತ್ವ ಅಲ್ಪಸಂಖ್ಯಾತರ ಸದಸ್ಯರಿಗೂ ಇರಬೇಕು. ಲಿಂಗತ್ವ ಅಲ್ಪಸಂಖ್ಯಾತರನ್ನು ಹೊಂದಿರುವ ಎಲ್ಲಾ ಕುಟುಂಬಗಳು ಅವರನ್ನು ಸ್ವೀಕರಿಸಿ ಅವರನ್ನು ಸಹ ಕುಟುಂಬದ ಒಬ್ಬರು ಸದಸ್ಯರೆಂದು ಪರಿಗಣಿಸಬೇಕು. ಈ ಹಿನ್ನಲೆಯಲ್ಲಿ ಕುಟುಂಬಗಳ ಸದಸ್ಯರಿಗೆ ಅರಿವು ಮೂಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಭಿಕ್ಷಾಟನೆಯಲ್ಲಿ ತೊಡಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜ ಕಲ್ಯಾಣ ಇಲಾಖೆಯ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಬೇಕು. ಅವರು ಗೌರವಯುತವಾದ ಬದುಕನ್ನು ಬದುಕಲು ವಸತಿ ಸೌಲಭ್ಯ ಕಲ್ಪಿಸಲು,ಮನೆಗಳು ಇಲ್ಲದ ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಒದಗಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಒದಗಿಸಬೇಕು ಎಂದು ಶಿಫಾರಸ್ಸಿನಲ್ಲಿ ಮನವಿ ಮಾಡಲಾಗಿದೆ.
ಸರ್ಕಾರಿ ವಸತಿ ನಿಲಯಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ, ವಿದ್ಯಾರ್ಥಿ ವೇತನ ಸೌಲಭ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್, ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಜೊತೆಗೆ ಇವರ ಹಿತರಕ್ಷಣೆಗಾಗಿ ಪ್ರತ್ಯೇಕ 'ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಮಂಡಳಿ' ಸ್ಥಾಪಿಸುವಂತೆ ಸಲಹೆ ನೀಡಲಾಗಿದೆ.
ಸರ್ಕಾರಕ್ಕೆ ಸಲ್ಲಿಕೆಯಾದ ಸಮೀಕ್ಷಾ ವರದಿ
ರಾಜ್ಯದ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಹಮ್ಮಿಕೊಳ್ಳಲಾಗಿದ್ದ ಬಹುನಿರೀಕ್ಷಿತ 2025-26ನೇ ಸಾಲಿನ ಮೂಲ ಹಂತದ ಸಮೀಕ್ಷಾ ವರದಿ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿದ್ದು, ರಾಜ್ಯದಲ್ಲಿ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದೆ.
ಸಮೀಕ್ಷೆಯ ಪ್ರಮುಖ ಮುಖ್ಯಾಂಶಗಳು
ಒಟ್ಟು 10,365 ಜನರ ಪೈಕಿ 18 ವರ್ಷ ಮೇಲ್ಪಟ್ಟವರು 10,250 ಮಂದಿ ಇದ್ದರೆ, 18 ವರ್ಷದೊಳಗಿನ 115 ಮಕ್ಕಳು ಸಮೀಕ್ಷೆಯಲ್ಲಿ ದಾಖಲಾಗಿದ್ದಾರೆ. ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,428 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ (1,252), ಬೆಂಗಳೂರು ನಗರ (757), ಕೋಲಾರ (638) ಮತ್ತು ಬೆಳಗಾವಿ (618) ಜಿಲ್ಲೆಗಳು ಮೊದಲ ಐದು ಸ್ಥಾನಗಳಲ್ಲಿವೆ.
ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,428 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.
ಈ ಸಮುದಾಯವು ಎದುರಿಸುತ್ತಿರುವ ತಾರತಮ್ಯ, ಭಯ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಸಮಸ್ಯೆಗಳನ್ನು ಹೋಗಲಾಡಿಸಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವುದು ಈ ಸಮೀಕ್ಷೆಯ ಮೂಲ ಉದ್ದೇಶವಾಗಿದೆ. ಇದಕ್ಕಾಗಿ 'ಕರ್ಮಣಿ' ಎಂಬ ವಿಶೇಷ ಮೊಬೈಲ್ ಆಪ್ ಮೂಲಕ 45 ದಿನಗಳ ಕಾಲ ಅತ್ಯಂತ ವ್ಯವಸ್ಥಿತವಾಗಿ ದತ್ತಾಂಶ ಸಂಗ್ರಹಿಸಲಾಗಿದೆ.
ಸಮೀಕ್ಷಾ ವರದಿ ಸ್ವೀಕರಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಸಮುದಾಯದ ನಿಖರ ಮಾಹಿತಿ ಸಂಗ್ರಹಿಸುವುದು ಪುನರ್ವಸತಿ ಕಾರ್ಯಕ್ರಮಗಳಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಿದೆ ಎಂದು ಅವರು ತಿಳಿಸಿದ್ದಾರೆ.

