
High Court Judges Transfer | ನ್ಯಾಯಮೂರ್ತಿಗಳ ವರ್ಗಾವಣೆ; ವಕೀಲರ ಸಂಘದಿಂದ ನಾಳೆ ಬೃಹತ್ ಪ್ರತಿಭಟನೆ
ಸುಪ್ರೀಂಕೋರ್ಟ್ ಕೊಲಿಜಿಯಂ ವರ್ಗಾವಣೆ ಆದೇಶ ವಿರೋಧಿಸಿ ಬೆಂಗಳೂರು ವಕೀಲರ ಸಂಘ ಏ.22 ರಂದು ಮಂಗಳವಾರ ಹೈಕೋರ್ಟ್ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ದಿಢೀರ್ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆಂಗಳೂರು ವಕೀಲರ ಸಂಘ ನಾಳೆ (ಏ.22) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ನ್ಯಾಯಮೂರ್ತಿಗಳ ವರ್ಗಾವಣೆ ಕುರಿತ ಕೊಲಿಜಿಯಂ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಬೆಂಗಳೂರು ವಕೀಲರ ಸಂಘದ ಪ್ರಕಟಣೆ ತಿಳಿಸಿದೆ.
ಕೊಲಿಜಿಯಂ ಆದೇಶವನ್ನು ಎಲ್ಲ ವಕೀಲರು ವಿರೋಧಿಸಬೇಕು. ವರ್ಗಾವಣೆ ಆದೇಶ ಮರುಪರಿಶೀಲಿಸಿ, ಹಿಂಪಡೆಯಲು ಪ್ರತಿಭಟನೆ ವೇಳೆ ಒತ್ತಾಯಿಸಬೇಕು ಎಂದು ಹೇಳಿದೆ.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ದೇಶದ ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿರುವ ಕೊಲಿಜಿಯಂ ನಡೆ ಅಸಮಾಧಾನ ತಂದಿದೆ. ಈಗಾಗಲೇ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಈಗ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಆದ್ದರಿಂದ ಹೈಕೋರ್ಟ್ ಎದುರು ಮಂಗಳವಾರ ಬೆಳಿಗ್ಗೆ 10.15 ರಿಂದ 11.30 ರವರೆಗೆ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕೀಲರ ಸಂಘದ ಸಾಮಾನ್ಯ ಸಭೆ
ನ್ಯಾಯಮೂರ್ತಿಗಳ ದಿಢೀರ್ ವರ್ಗಾವಣೆ ಕುರಿತು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಆದೇಶದ ಕುರಿತು ಚರ್ಚಿಸಲು ಏ.22 ರಂದು ಮಧ್ಯಾಹ್ನ 1.30 ಕ್ಕೆ ಬೆಂಗಳೂರು ವಕೀಲರ ಸಂಘದ ಸಾಮಾನ್ಯ ಸಭೆ ಕರೆಯಲಾಗಿದೆ.
ವರ್ಗಾವಣೆ ಆದೇಶ ಹಿಂಪಡೆಯುವ ಕುರಿತು ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರ ನಿಯೋಗವು ಕೇಂದ್ರ ಕಾನೂನು ಸಚಿವರು ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ನಿರ್ಣಯ ತೆಗೆದುಕೊಳ್ಳಲಾಗುವುದು. ಅಲ್ಲದೇ ಸುಪ್ರೀಂಕೋರ್ಟ್ ಕೊಲಿಜಿಯಂ ಸದಸ್ಯರು, ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕಾನೂನು ಸಚಿವರಿಗೆ ಮನವಿ ಪತ್ರ ಕಳುಹಿಸಿಕೊಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ವಕೀಲರ ಸಂಘ ತಿಳಿಸಿದೆ.