ತಂದೆಯ ಸಾವಿಗೆ ನೊಂದು ಮಗಳು ಆತ್ಮಹತ್ಯೆ: ಗೌರಿಬಿದನೂರಿನಲ್ಲಿ ಹೃದಯವಿದ್ರಾವಕ ದುರಂತ
x

ತಂದೆಯ ಸಾವಿಗೆ ನೊಂದು ಮಗಳು ಆತ್ಮಹತ್ಯೆ: ಗೌರಿಬಿದನೂರಿನಲ್ಲಿ ಹೃದಯವಿದ್ರಾವಕ ದುರಂತ

ಗಂಡನನ್ನು ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ಮಗಳನ್ನೂ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಅಕ್ಕನ ಸಾವಿನಿಂದಾಗಿ ಸ್ವರ್ಣಳ ತಮ್ಮ ಕೂಡ ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ.


ತಂದೆಯ ಅಕಾಲಿಕ ಸಾವಿನ ದುಃಖವನ್ನು ಸಹಿಸಲಾಗದೆ, ಉನ್ನತ ಶಿಕ್ಷಣ ಪಡೆಯುತ್ತಿದ್ದ ಮಗಳೊಬ್ಬಳು ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ನಿವಾಸಿ ಸ್ವರ್ಣ (22) ಮೃತ ಯುವತಿ.

ಬೆಂಗಳೂರಿನ ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದ ಸ್ವರ್ಣ, ಓದಿನಲ್ಲಿ ಮುಂದಿದ್ದಳು. ಆದರೆ, ಮೂರು ತಿಂಗಳ ಹಿಂದೆ ಆಕೆಯ ತಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಘಟನೆಯು ಸ್ವರ್ಣಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಅಂದಿನಿಂದಲೂ ಆಕೆ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.

ತಂದೆಯ ಸಾವಿನ ದುಃಖದಿಂದ ಹೊರಬರಲಾಗದ ಸ್ವರ್ಣ, ಕಾಲೇಜು ಹಾಸ್ಟೆಲ್‌ನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದು ಆಕೆಯನ್ನು ಮನೆಗೆ ಕರೆತಂದ ತಾಯಿ, ತಕ್ಷಣವೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸ್ವರ್ಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಕುಟುಂಬದ ಆಕ್ರಂದನ

ಗಂಡನನ್ನು ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ಮಗಳನ್ನೂ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಅಕ್ಕನ ಸಾವಿನಿಂದಾಗಿ ಸ್ವರ್ಣಳ ತಮ್ಮ ಕೂಡ ಮಾನಸಿಕವಾಗಿ ಕುಗ್ಗಿಹೋಗಿದ್ದು, ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಒಂದೇ ಕುಟುಂಬದಲ್ಲಿ ನಡೆದ ಸರಣಿ ಆತ್ಮಹತ್ಯೆಗಳು ಇಡೀ ಬಡಾವಣೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಘಟನೆಯ ಕುರಿತು ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ, ಮೃತ ಸ್ವರ್ಣಳ ತಾಯಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Read More
Next Story