
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ದುರಂತ: ಇಬ್ಬರು ಕಾರ್ಮಿಕರ ಸಾವು
ಕಟ್ಟಡ ನಿರ್ಮಾಣಕ್ಕಾಗಿ ಪಿಲ್ಲರ್ ಅಳವಡಿಸಲು 20 ಅಡಿಗೂ ಹೆಚ್ಚು ಆಳದ ಹೊಂಡವನ್ನು ತೆಗೆಯಲಾಗುತ್ತಿತ್ತು. ಕಾರ್ಮಿಕರು ಹೊಂಡದೊಳಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮೇಲಿನಿಂದ ಮಣ್ಣು ಕುಸಿದು ಬಿದ್ದಿದೆ.
ನಗರದ ಮಡಿವಾಳ ಸಮೀಪದ ಸಿದ್ಧಾರ್ಥ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಲಾಲ್ ಮದನ್ (33) ಮತ್ತು ರಜಾವುದ್ದೀನ್ (30) ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಪಿಲ್ಲರ್ ಅಳವಡಿಸಲು 20 ಅಡಿಗೂ ಹೆಚ್ಚು ಆಳದ ಹೊಂಡವನ್ನು ತೆಗೆಯಲಾಗುತ್ತಿತ್ತು. ಕಾರ್ಮಿಕರು ಹೊಂಡದೊಳಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮೇಲಿನಿಂದ ಮಣ್ಣು ಕುಸಿದು ಬಿದ್ದಿದೆ.
ಪರಿಣಾಮವಾಗಿ, ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಲಾಲ್ ಮದನ್ ಮತ್ತು ರಜಾವುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸೈಪುಲ್ಲಾ ಎಂಬ ಕಾರ್ಮಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.