
ಮಾರ್ಕೋನಹಳ್ಳಿ ಜಲಾಶಯದಲ್ಲಿ ದುರಂತ: ಒಂದೇ ಕುಟುಂಬದ ಆರು ಮಂದಿ ನೀರುಪಾಲು
ಮೃತರೆಲ್ಲರೂ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಊಟ ಮುಗಿಸಿದ ನಂತರ, ಕುಟುಂಬಸ್ಥರು ಜಲಾಶಯವನ್ನು ವೀಕ್ಷಿಸಲು ತೆರಳಿದ್ದ ವೇಳೆ ಕೊಚ್ಚಿಕೊಂಡು ಹೋಗಿದ್ದಾರೆ.
ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ತುಮಕೂರು ನಗರದ ಬಿ.ಜಿ.ಪಾಳ್ಯ ನಿವಾಸಿಗಳಾದ ತಬಾಸುಮ್ (45), ಶಬಾನ (44), ಮಿಫ್ರಾ (4), ಮಹಿಬ್ (1), ಸಾಜಿಯಾ ಮತ್ತು ಅರ್ಬಿನ್ ಮೃತಪಟ್ಟ ದುರ್ದೈವಿಗಳು. ಇವರಲ್ಲಿ ಸಾಜಿಯಾ ಮತ್ತು ಅರ್ಬಿನ್ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇವರೊಂದಿಗೆ ನೀರಿಗಿಳಿದಿದ್ದ ನವಾಜ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಮೃತರೆಲ್ಲರೂ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಊಟ ಮುಗಿಸಿದ ನಂತರ, ಕುಟುಂಬಸ್ಥರು ಜಲಾಶಯವನ್ನು ವೀಕ್ಷಿಸಲು ತೆರಳಿದ್ದಾರೆ. ಈ ವೇಳೆ, ಜಲಾಶಯದ ಹಿನ್ನೀರಿನ ಕಾಲುವೆಗೆ ಇಳಿದಾಗ ನೀರಿನ ರಭಸಕ್ಕೆ ಸಿಲುಕಿ ಒಬ್ಬೊಬ್ಬರಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಯಾರಿಗೂ ಈಜಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಕೆಲವೇ ತಿಂಗಳಲಲ್ಲಿ ಹಲವು ದುರಂತಗಳು
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಜಲ ಸಮಾಧಿಯಗಿರುವ ಹಲವು ದುರಂತಗಳು ವರದಿಯಾಗಿವೆ. ಸೆಪ್ಟೆಂಬರ್ನಲ್ಲಿ ಜಕ್ಕಲಮಡಗು ಜಲಾಶಯದಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇವರೆಲ್ಲರೂ ಬೆಂಗಳೂರಿನಿಂದ ಪ್ರವಾಸಕ್ಕೆಂದು ತೆರಳಿದ್ದರು.
ಆಗಸ್ಟ್ನಲ್ಲಿ ಕಾರಂಜ ಜಲಾಶಯದ ಹಿನ್ನೀರಿನಲ್ಲಿ ದನಗಳನ್ನು ತೊಳೆಯಲು ಹೋಗಿದ್ದ ಇಬ್ಬರು ರೈತರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಜುಲೈನಲ್ಲಿ ತುಂಗಾ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದರು.