Namma Metro| ಬೆಂಗಳೂರಿನಲ್ಲಿ ದುರಂತ: ಮೆಟ್ರೋ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವು
x

ಉರುಳಿ ಬಿದ್ದ ಬೃಹತ್‌ ವಯಾಡೆಕ್ಟ್​

Namma Metro| ಬೆಂಗಳೂರಿನಲ್ಲಿ ದುರಂತ: ಮೆಟ್ರೋ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವು

ಮೆಟ್ರೋ ಕಾಮಗಾರಿಗೆಂದು 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ಸಾಗಿಸುತ್ತಿದ್ದಾಗ ಲಾರಿ ತುಂಡಾಗಿ ಬೃಹತ್ ವಯಾಡೆಕ್ಟ್ ರಸ್ತೆಯಲ್ಲಿ ನಿಂತಿದ್ದ ಆಟೋ ಮೇಲೆ ಬಿದ್ದು, ಆಟೋ ಚಾಲಕ ಖಾಸಿಂ ಸಾವನಪ್ಪಿದ್ದಾರೆ.


'ನಮ್ಮ ಮೆಟ್ರೋ' ಕಾಮಗಾರಿಗೆಂದು ಲಾರಿಯಲ್ಲಿ ತರಲಾಗುತ್ತಿದ್ದ ಬೃಹತ್ ತಡೆಗೋಡೆ (ವಯಾಡೆಕ್ಟ್) ಆಟೋ ಮೇಲೆ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ನಡೆದಿದೆ.

ಮೆಟ್ರೋ ಕಾಮಗಾರಿಗೆಂದು 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್ ಸಾಗಿಸುತ್ತಿದ್ದಾಗ ಲಾರಿ ತುಂಡಾಗಿ ಬೃಹತ್ ವಯಾಡೆಕ್ಟ್ ರಸ್ತೆಯಲ್ಲಿ ನಿಂತಿದ್ದ ಆಟೋ ಮೇಲೆ ಬಿದ್ದಿದ್ದು, ಆಟೋ ಚಾಲಕ ಖಾಸಿಂ ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯರಾತ್ರಿ 12 ರ ಸುಮಾರಿಗೆ ದುರಂತ ಸಂಭವಿಸಿದೆ.

ಘಟನೆಯನ್ನು ಕಣ್ಣಾರೆ ಕಂಡ ಜನ ಆತನ ರಕ್ಷಣೆಗೆ ಧಾವಿಸಿದ್ದರು. ಆದರೆ ಬೃಹತ್ ಗಾತ್ರದ ವಯಾಡೆಕ್ಟ್ ತೆಗೆಯಲು ಕ್ರೇನ್ ಅತ್ಯಗತ್ಯವಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದರೂ ಸಹ ಕ್ರೇನ್ ಮಾತ್ರ ಬರಲು ತಡವಾಯಿತು. ಇದರಿಂದ ಆಕ್ರೋಶಗೊಂಡ ಜನ ಕಲ್ಲುತೂರಾಟ ಸಹ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ಎರಡು ಗಂಟೆ ಬಳಿ ಕ್ರೇನ್ ತರಿಸಿ ವಯಾಡೆಕ್ಟ್ ಪಕ್ಕಕ್ಕೆ ಇಡುವ ಮೂಲಕ ಮೃತದೇಹ ಹೊರ ತೆಗೆಯಲಾಗಿದೆ. ಈ ದುರಂತಕ್ಕೆ ಮೆಟ್ರೋ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕ ಪ್ರಯಾಣಿಕರನ್ನು ಇಳಿಸಿ ಹಣ ಪಡೆಯುತ್ತಿದ್ದ ವೇಳೆ ಪಕ್ಕದಲ್ಲೇ ತಿರುವು ಪಡೆದುಕೊಳ್ಳುತಿದ್ದ ಲಾರಿಗೆ ಬಸ್ ಅಡ್ಡ ಬಂದ ಕಾರಣ ನಿಯಂತ್ರಣ ಕಳೆದುಕೊಂಡು ಲಾರಿ ತುಂಡಾಗಿದೆ ಎನ್ನಲಾಗಿದೆ. ಘಟನೆ ಬಳಿಕ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read More
Next Story