The Federal Series-1: ಬೆಂಗಳೂರಿಗೆ ಸಂಚಾರ ದಟ್ಟಣೆಯೇ ಶಾಪ; ತ್ವರಿತ ಸಾರಿಗೆಗೆ ಬೇಕು ಕಾಯಕಲ್ಪ
x

The Federal Series-1: ಬೆಂಗಳೂರಿಗೆ ಸಂಚಾರ ದಟ್ಟಣೆಯೇ ಶಾಪ; ತ್ವರಿತ ಸಾರಿಗೆಗೆ ಬೇಕು ಕಾಯಕಲ್ಪ

ಬೆಂಗಳೂರಿನ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯದ ಕುರಿತು ಅಧ್ಯಯನ ನಡೆಸಿರುವ ಭಾರತೀಯ ವಿಜ್ಞಾನ ಸಂಸ್ಥೆ (IIsc) ಸಂಚಾರ ದಟ್ಟಣೆ ನಿವಾರಣೆಗೆ ʼಸಮೂಹ ಕ್ಷಿಪ್ರ ಸಾರಿಗೆ ಸೇವೆʼಯೇ (ಎಂಆರ್‌ಟಿಎಸ್‌) ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.


ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಜಗತ್ತಿನ ಭೂಪಟದಲ್ಲಿ ಹೆಗ್ಗುರುತು ಮೂಡಿಸಿದೆ. ಸಿಲಿಕಾನ್ ವ್ಯಾಲಿಯ ಖ್ಯಾತಿಯೊಂದಿಗೆ ʼಟ್ರಾಫಿಕ್ ಜಾಮ್ʼ ಅಪಖ್ಯಾತಿಯೂ ಅಂಟಿಕೊಂಡಿದೆ.

ಅಸಮರ್ಪಕ ಮೂಲಸೌಕರ್ಯ, ಸುಸ್ಥಿರವಲ್ಲದ ಸಮೂಹ ಸಾರಿಗೆ ವ್ಯವಸ್ಥೆಯಿಂದ ವಾಹನ ದಟ್ಟಣೆಯ ಬಿಸಿ ನಾಗರಿಕರನ್ನು ನಿತ್ಯ ಕಾಡುತ್ತಿದೆ. ಬೆಂಗಳೂರಿಗರ ಜೀವನಾಡಿಯಾಗಿ ಬಂದ ʼನಮ್ಮ ಮೆಟ್ರೋʼ ರೈಲಿನ ಪ್ರಯಾಣ ದರ ಏರಿಕೆಯಾದ ಬಳಿಕ ಬೆಂಗಳೂರಿನಲ್ಲಿ ದಟ್ಟಣೆ ಇನ್ನಷ್ಟು ಹೆಚ್ಚಾಗಿದೆ. ಏಕೆಂದರೆ ದುಬಾರಿ ಮೆಟ್ರೋ ಪ್ರಯಾಣ ದರದಿಂದ ಜನರು ಮೆಟ್ರೋದಿಂದ ದೂರವಾಗಿ ಸ್ವಂತ ವಾಹನಗಳ ಬಳಕೆಗೆ ಹೆಚ್ಚು ಆಸಕ್ತಿ ತೋರಿದ್ದಾರೆ.

ಬೆಂಗಳೂರಿನ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯದ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (IIsc) ಸುಸ್ಥಿರ ಸಾರಿಗೆ ಪ್ರಯೋಗಾಲಯ ಅಧ್ಯಯನ ನಡೆಸಿದ್ದು, ʼಸಮೂಹ ಕ್ಷಿಪ್ರ ಸಾರಿಗೆ ಸೇವೆʼಗಳಾದ ನಮ್ಮ ಮೆಟ್ರೋ, ಸಬ್‌ ಅರ್ಬನ್‌ ರೈಲು ಸೇವೆಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲಿದೆ ಎಂಬುದನ್ನು ಕಂಡುಕೊಂಡಿದೆ.

ಐಐಎಸ್‌ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯವು 2022 ನೇ ಸಾಲಿನ ಸಾರಿಗೆ ದತ್ತಾಂಶದ ಮೇರೆಗೆ 2027, 2031 ಹಾಗೂ 2041 ನೇ ಸಾಲಿನ ಸನ್ನಿವೇಶಗಳಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಹೇಗಿರಲಿದೆ ಎಂಬುದನ್ನು ವಿಶ್ಲೇಷಿಸಿದೆ.

ಐಐಎಸ್ಸಿಯಿಂದ ಅಧ್ಯಯನ ವರದಿ

ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಪ್ರಾಧ್ಯಾಪಕ ಪ್ರೊ.ಆಶಿಸ್ ವರ್ಮಾ ಅವರು 2024 ಡಿಸೆಂಬರ್‌ನಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಾಹನ ದಟ್ಟಣೆಗೆ ʼ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆ (ಬಿಎಸ್ಆರ್‌ಪಿ)ಯೇ ಜರೂರಾದ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ(ಎಂಆರ್‌ಟಿಎಸ್‌) ಎನಿಸಿದೆ ಎಂದು ಹೇಳಿದ್ದಾರೆ.

ಆಶಿಸ್ ವರ್ಮಾ ಅವರು 2022 ನೇ ಸಾಲಿನ ಸಾರಿಗೆ ದತ್ತಾಂಶ ಆಧಾರವಾಗಿಟ್ಟುಕೊಂಡು 2027, 2031 ಹಾಗೂ 2041 ರ ವರ್ಷದ ಸಮೂಹ ಸಾರಿಗೆಯನ್ನು ವಿಶ್ಲೇಷಿಸಿದ್ದಾರೆ. ಸಾರಿಗೆ ವಿಧಾನಗಳಾದ ಮೆಟ್ರೋ, ಸಬ್ ಅರ್ಬನ್ ರೈಲು ಹಾಗೂ ಡಬಲ್ ಡೆಕ್ಕರ್ ರಸ್ತೆ, ಸುರಂಗ ಮಾರ್ಗಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ಎಂಆರ್‌ಟಿಎಸ್‌ ಸಾರಿಗೆ ಮಾದರಿಯೇ ಬೆಸ್ಟ್

ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ(ಎಂಆರ್‌ಟಿಎಸ್‌) ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿ ಬದಲಾಗಲಿದೆ ಎಂಬುದು ಭಾರತೀಯ ವಿಜ್ಞಾನ ಸಂಶೋಧನೆಯಿಂದ ಸಾಬೀತಾಗಿದೆ. ಮೆಟ್ರೋ ಹಾಗೂ ಸಬ್‌ ಅರ್ಬನ್‌ ರೈಲು ಆಧರಿತವಾದ ತ್ವರಿತ ಸಮೂಹ ಸಾರಿಗೆ ಸೇವೆಯಿಂದ ದಟ್ಟಣೆ ಕಡಿಮೆಯಾಗುವ ಜೊತೆಗೆ ನಗರದ ಸಂಪರ್ಕ ಜಾಲದ ವ್ಯಾಪ್ತಿ ಹೆಚ್ಚಲಿದೆ. 2041 ರ ವೇಳೆಗೆ ಶೇ 80 ರಷ್ಟು ಸುಸ್ಥಿರ ಸಾರಿಗೆ ಮಾದರಿಯಾಗಿ ಮೆಟ್ರೋ, ಸಬ್‌ ಅರ್ಬನ್‌ ರೈಲು ವ್ಯವಸ್ಥೆ ಹೊರಹೊಮ್ಮಲಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ಸುರಂಗ ಮಾರ್ಗ ಸೂಕ್ತವಲ್ಲ

ಮೆಟ್ರೋ ಹಾಗೂ ಬಸ್‌ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಡಬಲ್ ಡೆಕ್ಕರ್ ರಸ್ತೆ ಹಾಗೂ ಉತ್ತರ ಮತ್ತು ದಕ್ಷಿಣ ಸಂಪರ್ಕಿಸುವ ಪ್ರಸ್ತಾವಿತ ಸುರಂಗ ಮಾರ್ಗವು ಬೆಂಗಳೂರಿಗೆ ಸೂಕ್ತವಾದ ಸಾರಿಗೆ ವಿಧಾನವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹೇಳಿದೆ.

ಡಬಲ್‌ ಡೆಕ್ಕರ್ ರಸ್ತೆ ಹಾಗೂ ಸುರಂಗ ಮಾರ್ಗದ ಸಾರಿಗೆ ವಿಧಾನದಲ್ಲಿ ಪ್ರಯಾಣದ ಅವಧಿ ಕಡಿತವಾದರೂ ಖಾಸಗಿ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ. ಇದರಿಂದ ಸಾರ್ವಜನಿಕ ಸಾರಿಗೆಯು ಪ್ರಯಾಣಿಕರ ಸಂಖ್ಯೆಯನ್ನು ಗಣನೀಯವಾಗಿ ಕಳೆದುಕೊಳ್ಳಲಿದೆ. ಪರಿಸರ ಮತ್ತು ಸಾಮಾಜಿಕ ಅಸಮಾನತೆಗೂ ಕಾರಣವಾಗಲಿದೆ ಎಂದು ಅಧ್ಯಯನ ವರದಿ ಆತಂಕ ವ್ಯಕ್ತಪಡಿಸಿದೆ.

ಟನಲ್ ರಸ್ತೆ ಬಗ್ಗೆ ಅಧ್ಯಯನ

ಡಬಲ್-ಡೆಕ್ಕರ್ ರಸ್ತೆ ಹಾಗೂ ಸುರಂಗ ಮಾರ್ಗ ನಿರ್ಮಾಣ ಯೋಜನೆಯು ಪ್ರಯಾಣಿಕರ ಮೇಲೆ ಬೀರುವ ಪರಿಣಾಮಗಳ ಕುರಿತಂತೆಯೂ ಐಐಎಸ್ಸಿ ಅಧ್ಯಯನ ನಡೆಸಿದೆ.

ಇದಕ್ಕಾಗಿ ಐಐಎಸ್ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ (ISTಲ್ಯಾಬ್) ಪ್ರತಿನಿಧಿಗಳು ಬೆಂಗಳೂರು ನಿವಾಸಿಗಳಿಂದ ಸಂಗ್ರಹಿಸಿದ ಪ್ರಯಾಣದ ಅಂಕಿ ಅಂಶಗಳು ಹಾಗೂ ಮೆಟ್ರೋ ರೈಲು ಮತ್ತು ಉಪನಗರ ರೈಲು ಜಾಲಕ್ಕೆ ಸಂಬಂಧಿಸಿದ ದತ್ತಾಂಶದ ಆಧಾರದ ಮೇಲೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ವಿಶ್ಲೇಷಿಸಿದ್ದಾರೆ.

ಸುರಂಗ ಮಾರ್ಗಗಳು ಹಾಗೂ ಡಬಲ್‌ ಡೆಕ್ಕರ್‌ ರಸ್ತೆಗಳು ಬಸ್ ಹಾಗೂ ಮೆಟ್ರೋ ಪ್ರಯಾಣದ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬುದನ್ನು ಅಧ್ಯಯನ ನಡೆಸಲಾಗಿದೆ. ಬೆಂಗಳೂರಿಗೆ ಅನಗತ್ಯವಾದ ಯೋಜನೆಗಳಿಗೆ ವೃಥಾ ಹಣ ಸುರಿಯುವ ಬದಲು ಸಾರಿಗೆ ವ್ಯವಸ್ಥೆಗಳಾದ ಬಸ್, ಮೆಟ್ರೋ ಸಂಪರ್ಕ ವ್ಯವಸ್ಥೆ ಹೆಚ್ಚಿಸಲು ಗಮನ ಹರಿಸಬೇಕು. ಸಂಚಾರ ದಟ್ಟಣೆಗೆ ತ್ವರಿತ ಸಾರಿಗೆ ವಿಧಾನಗಳಿಂದಲೇ ಪರಿಹಾರ ಸಿಗಲಿದೆ ಎಂದು ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಜನರು ರಸ್ತೆ ಸಾರಿಗೆಯಾದ ಬಸ್, ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಬಳಸುತ್ತಿರುವುದು ಹೆಚ್ಚಾಗಿದೆ. ಇದರಿಂದ ಸಂಚಾರ ದಟ್ಟಣೆ ವಿಪರೀತವಾಗಿ, ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಸುರಂಗ ಮಾರ್ಗ, ಮೇಲ್ಸೇತುವೆ, ಅಂಡರ್‌ಪಾಸ್‌ನಂತಹ ಯಾವುದೇ ಯೋಜನೆಗಳು ನೆರವಾಗುವುದಿಲ್ಲ. ಇದರಿಂದ ಇನ್ನಷ್ಟು ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಡಲಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

(ಮುಂದುವರಿಯುವುದು)

Read More
Next Story