
ಮುರುಡೇಶ್ವರ ಬೀಚ್ ದುರಂತ: ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ
ಬೀಚ್ ಬಳಿ ಪ್ರವಾಸಿಗರ ಜೀವ ರಕ್ಷಣೆ ಕಾರ್ಯಕ್ಕೆ ಬೇಕಾದ ಲೈಫ್ ಗಾರ್ಡ್ ಜಾಕೆಟ್, ಜಟ್ ಸ್ಕೀ ಬೋಟ್, ವೀಕ್ಷಣಾ ಗೋಪುರ, ಸಿ ಸಿ ಟಿವಿ ಕ್ಯಾಮರಾ, ಸೈರನ್, ಬೀಚ್ ಪ್ರದೇಶದಲ್ಲಿ ವಿದ್ಯುತ್ ದೀಪ ಸಹಿತ ಯಾವುದೇ ಸೌಲಭ್ಯವಿಲ್ಲ!
ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಕರ್ನಾಟಕ ಕಡಲ ತೀರದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಕಡಲ ತೀರದಲ್ಲಿ ನಿರ್ಮಿಸಿದ 123 ಅಡಿ ಎತ್ತರದ ಧ್ಯಾನಾಸಕ್ತ ಶಿವ ಮೂರ್ತಿ, 20 ಅಂತಸ್ತಿನ ರಾಜಗೋಪುರ ಹಾಗೂ ಅರಬ್ಬಿ ಸಮುದ್ರದ ವಿಶಾಲವಾದ ಕಡಲ ತೀರ ಪ್ರವಾಸಿಗರ ಪ್ರಮುಖ ಆಕರ್ಷಣೆ.
ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದವರು ಅದರ ಸನಿಹದಲ್ಲೇ ಇರುವ ಸಮುದ್ರದ ಕಿನಾರೆಗೆ ಭೇಟಿ ನೀಡಿ ಅಲೆಗಳೊಂದಿಗೆ ಆಟವಾಡುವದು ಸಾಮಾನ್ಯ. ಹೀಗೆ ಅಲೆಗಳೊಂದಿಗೆ ಆಟವಾಡುವಾಗುವಾಗ ಆಚಾತುರ್ಯದಿಂದ ಹಲವಾರು ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗೆ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುವ ವಿಚಾರ.
ಸಮುದ್ರಕ್ಕೆ ಇಳಿಯುವ ಪ್ರವಾಸಿಗರು ನೀರಿನಲ್ಲಿ ಮುಳುಗಿದರೆ ಅವರ ರಕ್ಷಣೆ ಕಾರ್ಯಕ್ಕೆ ಏಳು ಮಂದಿ ಜೀವ ರಕ್ಷಕರನ್ನು ನೇಮಿಸಲಾಗಿದೆ ಆದರೆ ಅವರಿಗೆ ಯಾವುದೇ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಜೀವ ರಕ್ಷಕರು ತಮ್ಮಜೀವವನ್ನು ಪಣಕ್ಕಿಟ್ಟು ಪ್ರವಾಸಿಗರನ್ನು ರಕ್ಷಿಸಬೇಕಾಗುತ್ತದೆ. ಜತೆಗೆ ಜೀವ ರಕ್ಷಣೆ ಕಾರ್ಯಕ್ಕೆ ಬೇಕಾದ ಲೈಫ್ ಗಾರ್ಡ್ ಜಾಕೆಟ್, ಜಟ್ ಸ್ಕೀ ಬೋಟ್, ವೀಕ್ಷಣಾ ಗೋಪುರ, ಸಿ ಸಿ ಟಿವಿ ಕ್ಯಾಮರಾ, ಅಪಾಯದ ಮುನ್ಸೂಚನೆ ನೀಡುವ ಸೈರನ್, ಬೀಚ್ ಪ್ರದೇಶದಲ್ಲಿ ವಿದ್ಯುತ್ ದೀಪ ಸಹಿತ ಯಾವುದೇ ಸೌಲಭ್ಯ ಕಲ್ಪಿಸಲು ಇಲಾಖೆ ಮೀನಮೇಷ ಎಣಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಜೀವ ರಕ್ಷಕ ಕಾರ್ಯದಲ್ಲಿ ನಿರತರಾಗಿರುವ ಸಿದ್ದಾರ್ಥ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ ಜೀವ ರಕ್ಷಣೆ ಕಾರ್ಯಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸದೇ ಜೀವ ರಕ್ಷಣೆ ಮಾಡಿ ಎಂದರೆ ಹೇಗೆ ಮಾಡುವುದು, ಆದರೂ ನಮ್ಮ ಪ್ರಾಣ ಒತ್ತೆ ಇಟ್ಟು ಪ್ರವಾಸಿಗರನ್ನು ರಕ್ಷಣೆ ಮಾಡುತ್ತಿದ್ದೇವೆ. ಕಳೆದ ಎರಡು ವರ್ಷದಲ್ಲಿ ಹತ್ತು ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದೇವೆ ಎಂದರು. "ನಮಗೆ ಮಾಸಿಕ 15 ಸಾವಿರ ವೇತನ ನಿಗದಿ ಮಾಡಿದ್ದು ಅದನ್ನು ಮೂರು ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತದೆ," ಎಂದೂ ಅವರು ಹೇಳಿದರು.
ವಿನಾಯಕ ಎನ್ನುವವರ ಅನುಭವವಂತೂ ಜೀವರಕ್ಷಕರ ಪಾಡೇನು ಎಂಬುದನ್ನು ವಿವರಿಸುತ್ತದೆ. " ಎರಡು ವರ್ಷ ಜೀವ ರಕ್ಷಕ ಕಾಯಕದಲ್ಲಿ ತೊಡಗಿಸಿಕೊಂಡ ನಾನು ಮುಳುಗುತ್ತಿರುವ ಪ್ರವಾಸಿಗರ ರಕ್ಷಣೆ ಸಮಯದಲ್ಲಿ ನಾನೆ ಸಮುದ್ರದ ಸುಳಿಯ ಸೆಳೆತಕ್ಕೆ ಸಿಲುಕಿ ಜೀವ ಕಳೆದುಕೋಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು, ಹೇಗೊ ಬಚಾವಾದೆ. ಒಮ್ಮೆ ರಕ್ಷಣಾ ಕಾರ್ಯದಲ್ಲಿ ತೊಡಗಿದಾಗ 70 ಗ್ರಾಮ್ ಚಿನ್ನದ ಸರ ಕಳೆದುಕೊಂಡೆ. ಈ ಘಟನೆಗಳಿಂದ ಬೆಸತ್ತು ಜೀವ ರಕ್ಷಕ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ," ಎಂದರು.
ಇತ್ತೀಚೆಗೆ ನಡೆದ ದುರಂತದಲ್ಲಿ ಕೋಲಾರದ, ಮುಳಬಾಗಿಲು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ದೇವರ ದರ್ಶನದ ನಂತರ ಸಮುದ್ರದಲ್ಲಿ ಈಜಲು ಹೋದಾಗ ಈ ದುರಂತ ಸಂಭವಿಸಿದೆ. ಈ ಘಟನೆ ಬಳಿಕ ಇಲಾಖೆಯ ಉದಾಸೀನ ಪ್ರವೃತ್ತಿ ಮತ್ತೆ ಬೆಳಕಿಗೆ ಬಂದಿದೆ.
ಈ ಘಟನೆಯಿಂದ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಧಿಕಾರಿ ಜೆ. ಲಕ್ಷೀ ಪ್ರಿಯಾ ಅವರು ಕಡಲ ತೀರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಆದೇಶ ಹೋರಡಿಸಿದ್ದಾರೆ. ಇದರಿಂದ ಬೀಚ್ ಪ್ರದೇಶ ಪ್ರವಾಸಿಗರ ಗಜಿಬಿಜಿ ಇಲ್ಲದೆ ಬಿಕೋ ಎನ್ನುತ್ತಿದೆ. ಬೀಚ್‌ನಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿದ್ದು ಪ್ರತಿದಿನ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಬೋಟಿಂಗ್, ಕುದುರೆ ಸವಾರಿಯಂತಹ ಆಕರ್ಷಣೆಗಳನ್ನು ಬಂದ್ ಮಾಡಲಾಗಿದೆ. ಆ ದುರಂತ ಘಟನೆಯಿಂದ ದೇವಸ್ಥಾನದ ಸುತ್ತಮುತ್ತ ನಡೆಯುವ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಬ್ಧಗೊಂಡಿದೆ.
ವಿದ್ಯಾರ್ಥಿಗಳ ಸಾವಿನ ಘಟನೆಯಿಂದ ಬೀಚ್‌ನಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿದ್ದು ವ್ಯಾಪಾರವಿಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಸಾಲ ಮಾಡಿ ಅಂಗಡಿ ಹಾಕಲಾಗಿದ್ದು, ಸಾಲನ್ನು ತೀರಿಸಲಾಗದೆ, ಸಂಸಾರ ನಿರ್ವಹಣೆ ಮಾಡಲು ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಇದು ʼಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆʼ ಎಂಬಂತಾಗಿದೆ ಎಂದು ವ್ಯಾಪಾರಿ ರಮೇಶ್ ಹೇಳುತ್ತಾರೆ.
ಒಟ್ಟಿನಲ್ಲಿ ಜೀವರಕ್ಷಣೆಗೆ ಬೇಕಾದ ಸಲಕರಣೆ ಒದಗಿಸದೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸುವ ಈ ಕ್ರಮ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ. ಪ್ರವಾಸೋದ್ಯಮ ಉತ್ತಮಗೊಳ್ಳಬೇಕಾದರೆ, ಅದಕ್ಕೆ ಬೇಕಾದ ವ್ಯವಸ್ಥೆ ಜಾರಿಗೊಳಿಸಬೇಕು. ಅದರ ಬದಲಿಗೆ ಪ್ರವಾಸಿಗರನ್ನೇ ನಿರ್ಬಂಧಿಸಿ, ಬೀಚ್‌ನ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡುವ ಕ್ರಮ ಹೇಗೆ ಸರಿ ಎಂದು ಇಲ್ಲಿನ ವ್ಯಾಪಾರಿಗಳು ಪ್ರಶ್ನಿಸುತ್ತಾರೆ. ಪ್ರವಾಸಿಗರ ಸುರಕ್ಷೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಮನಸ್ಸು ಮಾಡಬೇಕಾದ ಇಲಾಖೆ ಪ್ರವಾಸಿಗರನ್ನೇ ನಿರ್ಬಂಧಿಸಿ ಅಲ್ಲಿರುವ ಅಂಗಡಿಗಳನ್ನೇ ಬಂದ್ ಮಾಡಿದರೆ ಪ್ರವಾಸೋದ್ಯಮ ಹೇಗೆ ಬೆಳೆಯುತ್ತದೆ ಎಂಬ ಪ್ರಶ್ನೆ ಸ್ಥಳೀಯರದ್ದು.
ಮುರುಡೇಶ್ವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹನುಮಂತ ಬಿರಾದಾರ್ ಅವರ ಪ್ರಕಾರ ಕೋಲಾರ ಮುಳಬಾಗಿಲು ತಾಲ್ಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆಯ ನಂತರ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಮೀನುಗಾರಿಕೆ ಸಚಿವ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಮಾಂಕಾಳ್ ವೈದ್ಯ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಸಭೆ ನಡೆಸಿ ಪ್ರವಾಸಿಗರ ಸುರಕ್ಷತೆಗೆ ಎಲ್ಲಾ ಅಗತ್ಯ ಸೌಲಭ್ಯ ಒದಗಿಸಿದ ನಂತರವೇ ಮುರುಡೇಶ್ವರ ಬೀಚ್ ಪ್ರವೇಶಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.
ಮುರುಡೇಶ್ವರದಲ್ಲಿ ಪ್ರತಿವರ್ಷ ನಡೆಯುತ್ತಿರುವ ಸರಣಿ ದುರಂತಗಳು ಪ್ರವಾಸಿಗರ ಭದ್ರತೆ ಸುರಕ್ಷತೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ವೈಜ್ಞಾನಿಕ ಯೋಜನೆ ರೂಪಿಸುವುದರ ಅಗತ್ಯವನ್ನು ಸರ್ಕಾರ ಮನಗಾಣಬೇಕಾಗಿದೆ.
ಸರಣಿ ಘಟನೆಗಳು
ಮುರುಡೇಶ್ವರ ಬೀಚ್‌ನಲ್ಲಿ ಸರಣಿ ದುರಂತಗಳು ನಡೆದಿವೆಯಾದರೂ ಅನೇಕ ಪ್ರಕರಣಗಳಲ್ಲಿ ಇಲಾಖೆ ಸರಿಯಾದ ರೀತಿಯಲ್ಲಿ ಸುರಕ್ಷಾ ಕ್ರಮ ಕೈಗೊಳ್ಳದೇ ಇರುವುದು ಹಾಗೂ ಜೀವರಕ್ಷಕ ಸಾಮಗ್ರಿಗಳನ್ನು ಒದಗಿಸದೇ ಇರುವುದು ಅನೇಕ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎನ್ನಲಾಗಿದೆ.
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಪ್ರಕಾರ 2019 ರಿಂದ 2024 ರ ತನಕ ಕಳೆದ ಐದು ವರ್ಷಗಳಲ್ಲಿ 25 ದುರಂತ ಪ್ರಕರಣಗಳು ಸಂಭವಿಸಿದ್ದು 29 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.
2019, 2020, 2022 ತಲಾ ಮೂವರು, 2021 ರಲ್ಲಿ 5 ಮಂದಿ, 2023 ರಲ್ಲಿ ಎಂಟು ಮಂದಿ ಹಾಗೂ 2024 ರಲ್ಲಿ ಕೋಲಾರದ ಮುಳಬಾಗಿಲು ತಾಲ್ಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಸಹಿತ 7 ಮಂದಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 25 ವರ್ಷಗಳಲ್ಲಿ ನೂರಾರು ಮಂದಿ ಪ್ರವಾಸಿಗಳು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದುಸ್ಥಳೀಯ ನಿವಾಸಿ ಶಂಕರ್ ಮೊಗೇರ ಹೇಳುತ್ತಾರೆ.